ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಟ್ಟಾರಣ್ಯದ ಅಪ್ಪಟ ಸುಂದರಿ ‘ಮಹದಾಯಿ’

Published 23 ಏಪ್ರಿಲ್ 2023, 4:28 IST
Last Updated 23 ಏಪ್ರಿಲ್ 2023, 4:28 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನ ಅರಣ್ಯದಲ್ಲಿ ಹುಟ್ಟಿ ಹರಿಯುವ ಮಹದಾಯಿ ನದಿ ಈಗ ಚಾರಣ ಪ್ರಿಯರ ತಾಣವಾಗಿದೆ. ದಟ್ಟ ಅರಣ್ಯದಲ್ಲಿ ಈ ನದಿ ಬಳಕುತ್ತ ಹರಿಯುತ್ತಿದೆ. ಬಿರು ಬೇಸಿಗೆಯಲ್ಲಿ ಎಲ್ಲ ಜಲಮೂಲಗಳೂ ಬತ್ತುವುದು ಸಹಜ. ಆದರೆ, ಇಲ್ಲಿ ಮಹದಾಯಿ ಮಾತ್ರ ಮಹಾತಾಯಿಂತೆ ಬತ್ತದೇ ಹರಿಯುತ್ತಿದ್ದಾಳೆ.

ಈ ಪ್ರದೇಶದಲ್ಲಿ ಅನುಮತಿ ಇಲ್ಲದೇ ಪ್ರವೇಶವಿಲ್ಲ. ಬೇಸಿಗೆಯಲ್ಲಿ ಮಕ್ಕಳ ಮನ ತಣಿಸುವಂಥ ಈ ಸ್ಥಳವನ್ನು ಒಮ್ಮೆ ನೋಡಬೇಕು. ಅದರಲ್ಲೂ ಕೌಟುಂಬಿಕ ಪ್ರವಾಸ, ಚಿಣ್ಣರ ಶೈಕ್ಷಣಿಕ ಪ್ರವಾಸಕ್ಕೆ ಇದು ಅತ್ಯಂತ ಪ್ರಶಸ್ತ ಸ್ಥಳ. ಮುಖ್ಯರಸ್ತೆಯಿಂದ 8 ಕಿ.ಮೀ ಒಳಗಡೆ ಹಸಿರು ಕಾನನದ ಮಧ್ಯೆ ಬಳಕುವ ಈ ನದಿಯನ್ನು ನೋಡುವುದು ಸ್ವರ್ಗಕ್ಕೆ ಸಮಾನ. ಅಲ್ಲಿನ ಶುದ್ಧ ವಾತಾವರಣ, ತಂಗಾಳಿ, ಹಿತವಾದ ಆಮ್ಲಜನಕ, ಹರಿಸು ದೃಶ್ಯ, ಪರಿಶುದ್ಧವಾದ ನೀರು... ಹೀಗೆ ಎಲ್ಲವರೂ ನಮ್ಮ ಮೈ ಮರೆಸುವಂತಿವೆ.

ದಟ್ಟ ಅರಣ್ಯದ ನಡುವೆ ಬಹುಪಾಲು ದೂರವನ್ನು ಕ್ರಮಿಸುವ ಮಹದಾಯಿ ನದಿಯ ನೀರು ಔಷಧೀಯ ಗುಣಗಳನ್ನು ಹೊಂದಿದೆ. ನದಿ ಹರಿಯುವ ಮಾರ್ಗಮಧ್ಯದಲ್ಲಿ ದಟ್ಟ ಅರಣ್ಯ ಇರುವ ಕಾರಣ ಸೂರ್ಯನ ಕಿರಣಗಳು ಕಾಣಸಿಗುವುದು ಅಪರೂಪವಾಗಿದ್ದು, ನದಿಯ ನೀರು ಅತ್ಯಂತ ಸ್ವಚ್ಛ ಹಾಗೂ ಶುಭ್ರವಾಗಿದೆ. ಮಹದಾಯಿ ನದಿ ದಟ್ಟ ಕಾನನದ ನಡುವೆ ಮರಗಿಡಗಳ ಬೇರುಗಳ ಮೇಲೆ, ಬಂಡೆಗಳ ಮೇಲೆ ಹಾದುಬರುವ ಕಾರಣ ನದಿಯ ನೀರು ತಂಪಾಗಿದೆ.

ಕಳೆದ ಮಳೆಗಾಲದಲ್ಲಿ ಮಹದಾಯಿ ನದಿಪಾತ್ರದಲ್ಲಿ ಉತ್ತಮ ಮಳೆ ಸುರಿದ ಕಾರಣ ಈ ವರ್ಷ ನದಿಯಲ್ಲಿ ನೀರಿನ ಪ್ರಮಾಣ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿದೆ. ಹೀಗಾಗಿ ಈ ವರ್ಷದ ಬೇಸಿಗೆಯಲ್ಲಿ ಖಾನಾಪುರದ ಕಾಡಿನಲ್ಲಿ ವಾಸಿಸುವ ಅಸಂಖ್ಯಾತ ವನ್ಯಜೀವಿಗಳು ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಲಿವೆ ಎನ್ನುತ್ತಾರೆ ವಲಯ ಅರಣ್ಯ ಅಧಿಕಾರಿ ಕವಿತಾ ಈರನಟ್ಟಿ.

ವನ್ಯಮೃಗಗಳ ತಾಯಿ: ಭೀಮಗಡ ವನ್ಯಧಾಮದ ದೇಗಾಂವ ಗ್ರಾಮದ ಬಳಿಯ ಅರಣ್ಯದಲ್ಲಿ ಹುಟ್ಟುವ ಮಹದಾಯಿ ಜಾಮಗಾಂವ, ಗವ್ವಾಳಿ, ಕೊಂಗಳಾ, ಕಬನಾಳಿ, ಕೊಡುಗೈ ಗ್ರಾಮಗಳ ಸಮೀಪ ಸಂಚರಿಸಿ ಭೀಮಗಡ, ಖಾನಾಪುರ ಮತ್ತು ಕಣಕುಂಬಿ ಅರಣ್ಯದಲ್ಲಿ ಹರಿಯುತ್ತದೆ.

ಜಾಂಬೋಟಿ ಅರಣ್ಯದ ಚಾಪೋಲಿ ಗ್ರಾಮದ ಬಳಿಯ ಜಲಪಾತದಲ್ಲಿ ಧುಮ್ಮಿಕ್ಕಿ ಗೋವಾ ರಾಜ್ಯವನ್ನು ಪ್ರವೇಶಿಸುವ ಈ ನದಿಯನ್ನು ಗೋವಾ ರಾಜ್ಯದವರು ‘ಮಾಂಡವಿ’ ನದಿ ಎಂಬ ಹೆಸರಿನಿಂದ ಕರೆಯುತ್ತಾರೆ. ತನ್ನ ಜನ್ಮಸ್ಥಾನದಿಂದ ಸಮುದ್ರ ಸೇರುವವರೆಗೆ ಒಟ್ಟು 88 ಕಿ.ಮೀ ದೂರವನ್ನು ಕ್ರಮಿಸುವ ಮಹದಾಯಿ ರಾಜ್ಯದ ಅರಣ್ಯ ಪ್ರದೇಶದ 39 ಕಿ.ಮೀ ವ್ಯಾಪ್ತಿಯ ಸುತ್ತಲಿನ ದಟ್ಟ ಅರಣ್ಯದಲ್ಲಿ ಹರಿಯುತ್ತದೆ.

ಹುಲಿ, ಚಿರತೆ, ಕರಿಚಿರತೆ, ಕರಡಿ, ಕಾಡೆಮ್ಮೆ, ಕಾಡುಕೋಣ, ನರಿ, ಕಾಡುಹಂದಿ, ಮುಳ್ಳು ಹಂದಿ ಮತ್ತಿತರ ಅಪರೂಪದ ಕಾನನವಾಸಿಗಳ ಮತ್ತು ಈ ನದಿಪಾತ್ರದ ಹತ್ತಾರು ಗ್ರಾಮಗಳ ಜನರ ದಾಹ ನೀಗಿಸುತ್ತ ಬಂದಿದೆ. ತಾಲ್ಲೂಕಿನ ಭೀಮಗಡ, ಲೋಂಡಾ. ಕಣಕುಂಬಿ ಮತ್ತು ಜಾಂಬೋಟಿ ಅರಣ್ಯದಲ್ಲಿ ಹುಟ್ಟುವ ನೂರಾರು ಹಳ್ಳಗಳು ಮಹದಾಯಿ ನದಿಯನ್ನು ಸೇರುತ್ತವೆ. ಅವುಗಳಲ್ಲಿ ಕಳಸಾ ಮತ್ತು ಭಂಡೂರಿ ಹಳ್ಳಗಳು ಪ್ರಮುಖವಾಗಿವೆ.

ದಟ್ಟ ಹಸಿರು ಸೀರೆಯುಟ್ಟ ಕಾನನ ಶುದ್ಧ ನೀರು, ಆಮ್ಲಜನಕದ ಜನಕ ಈ ಕಾಡು ಮಹಾದಾಯಿಯೇ ಇಲ್ಲಿ ಮಹಾತಾಯಿ ಆಗಿದ್ದಾಳೆ

ಅತ್ಯಂತ ಸ್ವಚ್ಛ ಮತ್ತು ಶುಭ್ರವಾಗಿರುವ ಮಹದಾಯಿ ನದಿಯ ನೀರು
ಅತ್ಯಂತ ಸ್ವಚ್ಛ ಮತ್ತು ಶುಭ್ರವಾಗಿರುವ ಮಹದಾಯಿ ನದಿಯ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT