ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪೊಲೀಸರ ಮನೋಬಲ ಹೆಚ್ಚಿಸಿದ ಯೋಗಶಿಕ್ಷಕ

40ಕ್ಕೂ ಅಧಿಕ ಆಸನಗಳನ್ನು ಮಾಡುವ ರಾಜು ಅರ್ಜುನ ಪಾಟೀಲ
Last Updated 20 ಜೂನ್ 2022, 19:45 IST
ಅಕ್ಷರ ಗಾತ್ರ

ಬೆಳಗಾವಿ: ಇವರು ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ. ಆದರೆ, ಶಾಲೆ ಆಚೆಗೆ ಮಕ್ಕಳಿಗೆ, ನೌಕರರಿಗೆ, ಪೊಲೀಸರಿಗೆ ಮತ್ತು ನಿವೃತ್ತ ಯೋಧರಿಗೂ ಯೋಗ ಶಿಕ್ಷಕರಾಗಿದ್ದಾರೆ.

ತಾಲ್ಲೂಕಿನ ಹಲಗಾ ಗ್ರಾಮದ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆ ಶಿಕ್ಷಕ ರಾಜು ಅರ್ಜುನ ಪಾಟೀಲ (31) ಯೋಗದಲ್ಲಿ ಸಾಧನೆ ತೋರಿದ್ದಾರೆ. ತಮ್ಮ ಅನುಭವಗಳನ್ನು, ಆಸನಗಳನ್ನು ಮಕ್ಕಳಿಗೂ ಧಾರೆ ಎರೆಯಲು ಶಾಲೆಯಲ್ಲಿ ನಿರಂತರ ಯೋಗ ತರಬೇತಿ ಶುರು ಮಾಡಿದರು. ಇದರಿಂದಾಗಿ ಈ ಶಾಲೆಯಲ್ಲಿ ಯೋಗದಲ್ಲಿ ಸಾಧಕರು ಹುಟ್ಟಿಕೊಂಡಿದ್ದಾರೆ.

ವಚನಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಯೋಗ ಕಲಿತ ರಾಜು, ತಾಡಾಸನ, ವೃಕ್ಷಾಸನ, ಅರ್ಧಚಕ್ರಾಸನ, ಸರ್ವಾಂಗಾಸನ, ವೀರಭದ್ರಾಸನ, ಶೀರ್ಷಾಸನ, ಉಷ್ಟ್ರಾಸನ, ಭುಜಂಗಾಸನ, ಮಯೂರಾಸನ, ಶಶಾಂಕಾಸನ ಸೇರಿ 40ಕ್ಕೂ ಅಧಿಕ ಆಸನಗಳನ್ನು ಮಾಡುತ್ತಾರೆ. ಅಲ್ಲದೆ, ವಿವಿಧ ಪ್ರಕಾರಗಳ ಪ್ರಾಣಾಯಾಮ ಮಾಡುವುದರಲ್ಲಿ ಪ್ರಾವೀಣ್ಯತೆ ಗಳಿಸಿದ್ದಾರೆ.

ಪೊಲೀಸರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಸಿಬ್ಬಂದಿ ಹಾಗೂ ಬೆಳಗಾವಿಯ ಎಲ್ಲ ಬಿ.ಇಡಿ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಸದ್ಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಸಿಬ್ಬಂದಿಗೆ ಹಾಗೂ ತಾಲ್ಲೂಕಿನ ಪಂತಬಾಳೇಕುಂದ್ರಿಯಲ್ಲಿ ನಿವೃತ್ತ ಯೋಧರಿಗೆ ತರಬೇತಿ ನೀಡುತ್ತಿದ್ದಾರೆ.

ಜಿಲ್ಲೆಯ ಹಲವೆಡೆ ಯೋಗ ಶಿಬಿರಗಳನ್ನು ನಡೆಸಿ, ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ ಅವರನ್ನು ವಿವಿಧ ಸಂಘ–ಸಂಸ್ಥೆಗಳು ಗೌರವಿಸಿವೆ.

*

ಯೋಗದಿಂದ ಚೈತನ್ಯ

‘ಇಂದು ಎಲ್ಲರದ್ದೂ ಒತ್ತಡದ ಬದುಕು. ಸರ್ಕಾರಿ ನೌಕರರು, ಪೊಲೀಸರು ಇದರಿಂದ ಹೊರತಾಗಿಲ್ಲ. ಹಾಗಾಗಿ ಅವರಿಗೇ ಹೆಚ್ಚಾಗಿ ಯೋಗ ತರಬೇತಿ ಕೊಟ್ಟು ಮನೋಬಲ ಹೆಚ್ಚಿಸುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಯೋಗ ತರಬೇತಿಗೆ ಹೆಚ್ಚಿನ ಜನರು ಒಲವು ತೋರುತ್ತಿದ್ದಾರೆ. ಯೋಗದ ಮೂಲಕ ಒತ್ತಡ ನಿರ್ವಹಣೆ ಮಾಡಬಹುದು. ಇಡೀ ದಿನ ಶರೀರ ಚೈತನ್ಯದಿಂದ ಕೂಡಿರುತ್ತದೆ’ ಎಂದು ರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT