ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಪಿಎಸ್‌ ಜಾರಿಗೆ ಹೋರಾಟ: ಸಿ.ಎಸ್. ಷಡಾಕ್ಷರಿ

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿಕೆ
Published 3 ಆಗಸ್ಟ್ 2024, 16:04 IST
Last Updated 3 ಆಗಸ್ಟ್ 2024, 16:04 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಸರ್ಕಾರಿ ನೌಕರರ ಒಗ್ಗಟ್ಟು ಮತ್ತು ಸಂಘಟನಾತ್ಮಕ ಪ್ರಯತ್ನದ ಫಲವಾಗಿ ಏಳನೇ ವೇತನ ಆಯೋಗದ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲು ಹೋರಾಟ ಮಾಡಲಾಗುವುದು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ಪಟ್ಟಣದ ಪದ್ಮಾ ಮಂಗಲ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಘಟಕ  ಶನಿವಾರ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಏಳನೇ ವೇತನ ಆಯೋಗಕ್ಕಾಗಿ ಸರ್ಕಾರಿ ನೌಕರರ ಸಂಘ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಸರ್ಕಾರ ಹಿಂದೇಟು ಹಾಕಿದ ವೇಳೆಯಲ್ಲಿ ರಾಜ್ಯದಾದ್ಯಂತ ನೌಕರರು ಹೋರಾಟ ನಡೆಸಿದರು. ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಿತು’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಳನೇ ವೇತನ ಆಯೋಗದ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿ ಮಾಡುವ ಮೂಲಕ ನುಡಿದಂತೆ ನಡೆದಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಆಗಸ್ಟ್‌ 17ರಂದು ಅವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಮಾತನಾಡಿ, ‘ಸರ್ಕಾರಿ ನೌಕರರು ಶ್ರದ್ಧೆಯಿಂದ ಕೆಲಸ ಮಾಡಿದರೆ, ಯಶಸ್ಸು ಸಾಧಿಸಲು ಸಾಧ್ಯ’ ಎಂದರು.

ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ ಮಾತನಾಡಿ, ‘ರಾಜ್ಯ ಸರ್ಕಾರಿ ನೌಕರರ ಸಂಘಟನೆಯು ನೌಕರರ ಹಿತಕಾಪಾಡುವಲ್ಲಿ ಯಶಸ್ಸು ಗಳಿಸಿದೆ. ಸಂಘದ ಕೆಲಸಗಳು ನಿರಂತರವಾಗಿ ನಡೆಯಲಿ’ ಎಂದು ಆಶಿಸಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 2022-23, 2023-24ನೇ ಸಾಲಿನ 600ಕ್ಕೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಕಾರ್ಯಾಧ್ಯಕ್ಷ ಎಸ್. ಬಸವರಾಜ್ ಎಂ.ವಿ., ಉಪಾಧ್ಯಕ್ಷ ಶ್ರೀನಿವಾಸ ಡಿ., ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಹಿರಿಯ ಉಪಾಧ್ಯಕ್ಷ ಸಂಜು ಸತರೆಡ್ಡಿ, ಎಂ.ಬಿ. ನಾಯಕ, ರಾಜ್ಯ ಪರಿಷತ್ ಸದಸ್ಯ ನವೀನ ಗಂಗರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎ. ಕುಂಬಾರ, ಪ್ರಧಾನ ಕಾರ್ಯದರ್ಶಿ ಮಹಾದೇವ ಗೋಕಾರ, ಖಜಾಂಚಿ ದತ್ತಾ ಕಾಂಬಳೆ ಜಯಾರಾಣಿ ಬಸಣ್ಣವರ, ರೂಪಾ ಬಣಕಾರ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT