ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ವಿದ್ಯುತ್‌ ಇಲ್ಲದೆ ನೀರೆತ್ತುವ ವಿಧಾನ..!

ರಾಷ್ಟ್ರಮಟ್ಟದಲ್ಲಿ ಮಿಂಚಿದ ಸರ್ಕಾರಿ ಪ್ರೌಢಶಾಲೆಯ ಬಾಲ ವಿಜ್ಞಾನಿಗಳು
Last Updated 19 ಫೆಬ್ರುವರಿ 2023, 4:39 IST
ಅಕ್ಷರ ಗಾತ್ರ

ಮೂಡಲಗಿ: ವಿದ್ಯುತ್‌ ಇಲ್ಲದೇ ಬಾವಿ ಮತ್ತು ಬೋರ್‌ವೆಲ್‌ಗಳಿಂದ ನೀರೆತ್ತುವುದು ಸಾಧ್ಯವೇ?

ಈ ಪ್ರಶ್ನೆಗೆ ಹೌದು ಎಂದು ಉತ್ತರಿಸುತ್ತಾರೆ ತಾಲ್ಲೂಕಿನ ಅವರಾದಿ ಗ್ರಾಮದ ಬಿ.ವಿ. ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯ ಬಾಲ ವಿಜ್ಞಾನಿಗಳಾದ ಮಹೇಶ ಗುರ್ಲಾಪುರ ಮತ್ತು ವರುಣ ನಾಯ್ಕ.

ಕೃಷಿ ಭೂಮಿಗೆ ನೀರುಣಿಸಲು ರೈತರು ಸಾಕಷ್ಟು ಪರದಾಡುವಂತಾಗಿದೆ. ಬಾವಿ, ಬೋರ್‌ವೆಲ್‌ಗಳಿಗೆ ವಿದ್ಯುತ್‌ ಸಂಪರ್ಕ ಪ‍ಡೆದು ಹೈರಾಣಾಗಿದ್ದಾರೆ. ಒಂದೆಡೆ ಕೈಕೊಡುವ ವಿದ್ಯುತ್‌, ಇನ್ನೊಂದೆಡೆ ಹೊರೆಯಾಗುವ ಬಿಲ್‌. ಎರಡರ ಮಧ್ಯೆ ಸಿಕ್ಕು ನಲುಗಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಇಬ್ಬರೂ ವಿದ್ಯಾರ್ಥಿಗಳು ಸಂಶೋಧನೆಗೆ ಇಳಿದರು. ವಿದ್ಯುತ್‌ ಇಲ್ಲದಿದ್ದರೂ ಬಾವಿ ಅಥವಾ ಕೊಳವೆಬಾವಿಯಿಂದ ನೀರು ಮೇಲೆತ್ತುವ ಸಾಧನವೊಂದನ್ನು ಕಂಡುಕೊಂಡರು.

ಕೇರಳ ರಾಜ್ಯದ ತ್ರಿಸೂರದಲ್ಲಿ ಈಚೆಗೆ ಕೇಂದ್ರ ಸರ್ಕಾರ ಆಯೋಜಿಸಿದ್ದ ‘ದಕ್ಷಿಣ ಭಾರತ ವಿಜ್ಞಾನ ಮೇಳ–2023’ದಲ್ಲಿ ಹಳ್ಳಿಗಾಡಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಈ ಶೋಧನೆ ಗಮನ ಸೆಳೆಯಿತು. ಮಕ್ಕಳ ಈ ಆಲೋಚನೆಗೆ ಮಾರುಹೋದ ನಿರ್ಣಾಯಕರು ಬೆನ್ನುತಟ್ಟಿದರು. ಈ ಸಾಧನೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಹಾಗೂ ಇಬ್ಬರಿಗೂ ಬಾಲವಿಜ್ಞಾನಿ ಹೆಸರೂ ನೀಡಲಾಗಿದೆ.

ಹೇಗೆ ಸಾಧ್ಯ?: ನೈಸರ್ಗಿಕವಾಗಿ ಸೂಸುವ ಗಾಳಿ ಬಳಸಿ ಗಾಳಿಯಂತ್ರ (ಟರ್ಬೈನ್‌ ಚಕ್ರ) ತಿರುಗಿಸಲಾಗುತ್ತದೆ. ಅದಕ್ಕೆ ಒಂದು ಏರ್‌ ಕಂಪ್ರೈಸರ್‌ (ಗಾಳಿ ಒತ್ತಡ ಸಂಗ್ರಹಿಸುವ ಯಂತ್ರ) ಅಳವಡಿಸಿ ಅದರಲ್ಲಿ ಗಾಳಿಯ ಒತ್ತಡವನ್ನು ಸಂಗ್ರಹಿಸಲಾಗುತ್ತದೆ. ಅಲ್ಲಿಂದ ಹೊರಸೂಸುವ ಗಾಳಿಯ ಒತ್ತಡವನ್ನು ಬೋರ್‌ವೆಲ್‌ ಅಥವಾ ಬಾವಿಯ ಪೈಪ್‌ನೊಳಗೆ ನುಗ್ಗಿಸಲಾಗುತ್ತದೆ. ಒತ್ತಡಯುಕ್ತ ಗಾಳಿ ಕೊಳವೆಬಾವಿಗೆ ನುಗ್ಗಿದಾಗ ನೀರನ್ನು ಮೇಲಕ್ಕೆ ಚಿಮ್ಮುತ್ತದೆ. ಈ ನೀರನ್ನು ಸರಾಗವಾಗಿ ಹೊಲಕ್ಕೆ ಹರಿಸಬಹುದು. ಕಂಪ್ರೈಸರ್‌ನಲ್ಲಿ ಗಾಳಿಯ ಒತ್ತಡ ಸಂಗ್ರಹ ಇರುವ ಕಾರಣ ಯಾವಾಗ ಬೇಕಾದರೂ ಇದನ್ನು ಬಳಸಬಹುದು.

ಈ ಮಾದರಿಯ ಮೇಲೊಂದು ಸೌರವಿದ್ಯುತ್‌ ಫಲಕ ಅಳವಡಿಸಿ, ಅದರ ನೆರವಿನಿಂದ ಬರುವ ವಿದ್ಯುತ್‌ ಬಳಸಿ ಕಂಪ್ರೈಸರ್‌ ಚಾಲನೆ ಮಾಡಬಹುದು ಎನ್ನುವುದು ಈ ಬಾಲ ವಿಜ್ಞಾನಿಗಳ ವಿವರಣೆ.

‘ವಿದ್ಯಾರ್ಥಿಗಳು ಕೇರಳದಲ್ಲಿ ಪ್ರದರ್ಶಿಸಿದ ಪ್ರಯೋಗವನ್ನು ಸಾಕಷ್ಟು ರೈತರು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಈ ವಿಧಾನವನ್ನು ತಮ್ಮ ಕೃಷಿಯಲ್ಲಿ ಪ್ರಯೋಗಾತ್ಮಕವಾಗಿ ಅಳವಡಿಸಿಕೊಳ್ಳುವುದಕ್ಕೆ ಮುಂದೆ ಬಂದಿದ್ದಾರೆ’ ಎನ್ನುವುದು ಮಾರ್ಗದರ್ಶನ ನೀಡಿದ ಶಿಕ್ಷಕ ಶಿಕ್ಷಕ ಸುಭಾಷ ಅರಗಿ ಅವರ ಹೇಳಿಕೆ.

ಆಸಕ್ತರು 8971354617 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT