ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಇನ್ನೂ ಕಾರ್ಯಾರಂಭಿಸದ ಸಕ್ಕರೆ ನಿರ್ದೇಶನಾಲಯ ಕಚೇರಿ!

Last Updated 4 ಅಕ್ಟೋಬರ್ 2021, 13:57 IST
ಅಕ್ಷರ ಗಾತ್ರ

ಬೆಳಗಾವಿ: ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಕಚೇರಿಯು ಇಲ್ಲಿ ಇನ್ನೂ ಕಾರ್ಯಾರಂಭಿಸಿಲ್ಲ.

ಕಚೇರಿಯನ್ನು ಬೆಂಗಳೂರಿನಿಂದ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಅ.1ರಿಂದ ಜಾರಿಗೆ ಬರುವಂತೆ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಿಸಿ ಸರ್ಕಾರ ಈಚೆಗೆ ಆದೇಶಿಸಿದೆ. ಸುವರ್ಣ ವಿಧಾನಸೌಧಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಿಸುವವರೆಗೆ ನಗರದ ಗಣೇಶಪುರದಲ್ಲಿರುವ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಅ.1ರಿಂದ ತಾತ್ಕಾಲಿಕವಾಗಿ ಕಚೇರಿ ಆರಂಭಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧೀನ ಕಾರ್ಯದರ್ಶಿ (ಸಕ್ಕರೆ) ಆರ್. ಮಂಜುಳಾ ಆದೇಶದಲ್ಲಿ ತಿಳಿಸಿದ್ದರು. ಆದರೆ, ನಿಜಲಿಂಗಪ್ಪ ಸಂಸ್ಥೆಯ ಆವರಣದಲ್ಲಿ ಫಲಕ ಹಾಕಿದ್ದು ಮತ್ತು ಕೊಠಡಿಯೊಂದನ್ನು ಗುರುತಿಸಿದ್ದು ಬಿಟ್ಟರೆ ನಂತರದ ಪ್ರಕ್ರಿಯೆಗಳು ನಡೆದಿಲ್ಲ.

ಐಆರ್‌ಎಸ್‌ ಅಧಿಕಾರಿ ಶಿವಾನಂದ ಎಚ್. ಹಾಲಕೇರಿ ಅವರನ್ನು ನಿರ್ದೇಶಕನ್ನಾಗಿ ಅ.1ರಂದು ನೇಮಿಸಲಾಗಿದೆ. ಅವರು ಬಂದು ಅಧಿಕಾರ ಸ್ವೀಕರಿಸಬಹುದು, ಸರ್ಕಾರದ ಆದೇಶದಂತೆ ಕಚೇರಿ ಕಾರ್ಯಾರಂಭ ಮಾಡಬಹುದು ಎಂಬಿತ್ಯಾದಿ ನಿರೀಕ್ಷೆಗಳೊಂದಿಗೆ ಸಿಹಿ ಹಂಚಲು ಬಂದಿದ್ದ ಹೋರಾಟಗಾರರು ಬರಿಗೈಲಿ ವಾಪಸಾದರು. ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಮತ್ತು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮೊದಲಾದವರು ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಬಂದಿದ್ದರು. ಸಂಬಂಧಿಸಿದ ಅಧಿಕಾರಿ ಬಂದಿರಲಿಲ್ಲವಾದ್ದರಿಂದ, ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ.ಆರ್.ಬಿ. ಖಾಂಡಗಾವೆ ಅವರೊಂದಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿದರು.

‘ಬೆಂಗಳೂರಿನಲ್ಲಿರುವ ಕಚೇರಿಯ ಸಂಪೂರ್ಣ ದಾಖಲೆಗಳು ಹಾಗೂ ಪೀಠೋಪಕರಣಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಕಾರ್ಯ ನಡೆದಿಲ್ಲ. ನಿರ್ದೇಶಕರು ಅ.6ರಂದು ಅಧಿಕಾರ ಸ್ವೀಕರಿಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT