ಬುಧವಾರ, ಆಗಸ್ಟ್ 17, 2022
28 °C
ಡಾ.ಬಿ.ಆರ್. ಅಂಬೇಡ್ಕರ್ ಓದು ಕಾಯಕ್ರಮ

‘ಪುಸ್ತಕ ಓದಿನಿಂದ ವಿವೇಚನಾಶಕ್ತಿ ವೃದ್ಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚಾಗುವ ಜೊತೆಗೆ ವಿವೇಚನಾಶಕ್ತಿ ವೃದ್ಧಿಸುತ್ತದೆ’ ಎಂದು ನಾಟಕಕಾರ ಡಿ.ಎಸ್. ಚೌಗಲೆ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬುದ್ಧ ರಕ್ಷಿತ ಸಾಂಸ್ಕೃತಿ ಸಂಸ್ಥೆ ಸಹಯೋಗದಲ್ಲಿ ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಡಾ.ಬಿ.ಆರ್. ಅಂಬೇಡ್ಕರ್ ಓದು ಕಾಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಪುಸ್ತಕ ಓದುವುದು ಬಹಳ ಮುಖ್ಯ. ಜ್ಞಾನ ವೃದ್ಧಿಸಿಕೊಳ್ಳಲು ಅವು ಸಹಕಾರಿಯಾಗಿವೆ. ಅಂಬೇಡ್ಕರ್‌ ಅವರ ಬೆಳವಣಿಗೆಯಲ್ಲಿ ಪುಸ್ತಕಗಳ ಪಾತ್ರ ಬಹಳ ಪ್ರಾಮುಖ್ಯವಾಗಿತ್ತು’ ಎಂದರು.

ಉಪನ್ಯಾಸ ನೀಡಿದ ಪತ್ರಕರ್ತ ಹೃಷಿಕೇಶ್ ಬಹದ್ದೂರ್ ದೇಸಾಯಿ, ‘ಧರ್ಮಗಳ ಕಟ್ಟುಪಾಡು ಬಿಟ್ಟು ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರಿಂದ ಪ್ರಜ್ಞಾಪ್ರಭುತ್ವವು ಬೆಳವಣಿಗೆ ಆಗುತ್ತದೆ. ಪ್ರಜ್ಞಾಪ್ರಭುತ್ವದಿಂದ ಮಾನವತಾವಾದಿ ಶಕ್ತಿ ಬರುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು’ ಎಂದು ಸ್ಮರಿಸಿದರು.

‘ಜೀವನದಲ್ಲಿ ಓದು ಎಂಬುದು ಅತಿ ಪ್ರಾಮುಖ್ಯತೆ ಪಡೆಯುತ್ತದೆ. ಆದಾಗ್ಯೂ ಇಂದಿನ ಪೀಳಿಗೆಗೆ ಪುಸ್ತಕ ಓದಿ ಎಂದು ಪೀಡಿಸುವುದು ಅಷ್ಟೊಂದು ಒಳ್ಳೆಯ ಸಂಗತಿಯಲ್ಲ. ಅವರವರ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಮೂಲಕ ಅವರು ವಿಷಯವನ್ನು ತಿಳಿಸುವ ಕಾರ್ಯ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಹಲವು ಪುಸ್ತಕಗಳು ಡಿಜಿಟಲ್ ಗ್ರಂಥಾಲಯದಲ್ಲಿ ಲಭ್ಯ ಇವೆ. ಯುವಜನರು ಅದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜೈಕಾರ ಹಾಕಿ ಪೂಜೆ ಮಾಡುವ ಬದಲಿಗೆ, ಬಾಬಾಸಾಹೇಬರಂತೆ ಚಳವಳಿಯನ್ನು ಮಾಡಬೇಕು. ಶಿಕ್ಷಣವೆಂದರೆ ಖಡ್ಗವಿದ್ದಂತೆ. ಅದರ ಸದುಪಯೋಗವನ್ನು ಇಂದಿನ ಯುವಜನತೆ ತೆಗೆದುಕೊಳ್ಳಬೇಕು’ ಎಂದು ಮುಖಂಡ ಮಲ್ಲೇಶ ಚೌಗಲೆ ಹೇಳಿದರು.

ರಸಪ್ರಶ್ನೆ, ಪ್ರಬಂಧ, ಆಶುಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾಶ್ರೀ ಜಕಾಲೆ (ಪ್ರಥಮ), ಶಿವಕುಮಾರ ಹಿರೇಮಠ (ದ್ವಿತೀಯ), ಭಾವೇಶ್ವರಿ ಸಾಗರ (ತೃತೀಯ), ಆಶುಭಾಷಣ ಸ್ಪರ್ಧೆಯಲ್ಲಿ ಓಂಕಾರ ಕೋಲಕಾರ (ಪ್ರಥಮ), ರಾಹುಲ್ ವಾಗಮೋರೆ (ದ್ವಿತೀಯ) ಮತ್ತು ನಾಗರಾಜ ಕುರಬೇಟ (ತೃತೀಯ), ರಸಪ್ರಶ್ನೆಯಲ್ಲಿ ಶಿವಕುಮಾರ ಹಿರೇಮಠ (ಪ್ರಥಮ), ಓಂಕಾರ ಕೋಲಕಾರ (ದ್ವಿತೀಯ), ಗಾಯತ್ರಿ ಕುದ್ರೆಮನಿ (ತೃತೀಯ) ಬಹುಮಾನ ಪಡೆದರು. ಸಾಳುಂಕೆ ರಾಜಶೇಖರ ಮತ್ತು ಚೇತನ ಕುಂಟೊಳ್ಳಿ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಬುದ್ಧ ರಕ್ಷಿತ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಬಾಬಾಸಾಹೇಬ ಕಾಂಬಳೆ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಎಚ್. ಭಜಂತ್ರಿ ಸ್ವಾಗತಿಸಿದರು. ಬಸವರಾಜ ತಳವಾರ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.