ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯ ಪತ್ತೆ ಆಂದೋಲನ 1ರಿಂದ: ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ

Last Updated 26 ನವೆಂಬರ್ 2020, 11:52 IST
ಅಕ್ಷರ ಗಾತ್ರ

ಬೆಳಗಾವಿ: ‘ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನವು ಜಿಲ್ಲೆಯಲ್ಲಿ ಡಿ.1ರಿಂದ 31ರವರಗೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಇಲ್ಲಿ ಗುರುವಾರ ನಡೆದ ಸಕ್ರಿಯ ಕ್ಷಯ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಡಿ. 1ರಿಂದ ಮೂರು ಹಂತಗಳಲ್ಲಿ ಆಂದೋಲನ ನಡೆಸಲಾಗುವುದು. ಡಿ. 1ರಿಂದ 10ರವರೆಗೆ ಅಥಣಿ, ಹುಕ್ಕೇರಿ, ಗೋಕಾಕ, ಬೈಲಹೊಂಗಲ ತಾಲ್ಲೂಕು ಮತ್ತು ಬೆಳಗಾವಿ ನಗರ ಪ್ರದೇಶ, ಡಿ. 11ರಿಂದ 20ರವರೆಗೆ ಕಾಗವಾಡ, ಚಿಕ್ಕೋಡಿ, ಮೂಡಲಗಿ, ರಾಯಬಾಗ, ರಾಮದುರ್ಗ ತಾಲ್ಲೂಕುಗಳು ಮತ್ತು ಬೆಳಗಾವಿ ಗ್ರಾಮೀಣ ಪ್ರದೇಶ ಹಾಗೂ ಡಿ.21ರಿಂದ 31ರವರೆಗೆ ನಿಪ್ಪಾಣಿ, ಕಿತ್ತೂರು, ಖಾನಾಪುರ ಮತ್ತು ಸವದತ್ತಿ ತಾಲ್ಲೂಕಿನಲ್ಲಿ ಆಂದೋಲನ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ರೋಗದಿಂದ ಗುಣಮುಖರಾಗಲು ಸಾಧ್ಯವಿದೆ. ಆದ್ದರಿಂದ ನಿಗದಿತ ಚಿಕಿತ್ಸೆಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬೇಕು. ಎರಡು ವಾರಕ್ಕೂ ಹೆಚ್ಚಿನ ಸಮಯ ಕೆಮ್ಮು, ಸಂಜೆ ಜ್ವರ, ಕಫದಲ್ಲಿ ರಕ್ತ ಬೀಳುವುದು ಮತ್ತು ತೂಕ ಕಡಿಮೆಯಾಗುವ ಲಕ್ಷಣಗಳು ಕಂಡುಬಂದರೆ ಕ್ಷಯ ರೋಗ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಕೋರಿದರು.

‘ಜಿಲ್ಲೆಯ 53.55 ಲಕ್ಷ ಜನಸಂಖ್ಯೆ ಇದ್ದು, ಶೇ. 20ರಷ್ಟು ಅಂದರೆ 11.13 ಲಕ್ಷ ಜನಸಂಖ್ಯೆ ಗುರುತಿಸಿ ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ’ ಎಂದು ಜಿಲ್ಲಾ ಕ್ಷಯ ರೋಗ ನಿಂತ್ರಣಾಧಿಕಾರಿ ಅನಿಲ್ ಕೊರಬು ಮಾಹಿತಿ ನೀಡಿದರು.

‘3,925 ಆರೋಗ್ಯ ಸಹಾಯಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರ ತಂಡಗಳನ್ನು ರಚಿಸಲಾಗುವುದು. ಅವುಗಳ ಮೂಲಕ ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಲಾಗುವುದು. ಕೋವಿಡ್-19 ಪರಿಸ್ಥಿತಿ ಇರುವುದರಿಂದಾಗಿ ಸೋಂಕಿತರು ಮತ್ತೆ ಗುಣಮುಖ ಆದಂಥವರನ್ನೂ ಕ್ಷಯ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ತಿಳಿಸಿದರು.

ಮಕ್ಕಳ ಮಾರಾಟ ತಡೆಗಟ್ಟುವುದು ಹಾಗೂ ದತ್ತು ಮಕ್ಕಳ ಸ್ವೀಕಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕ್ಷಯ ಜಾಗೃತಿ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.

ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಡಿಸಿಪಿ ಚಂದ್ರಶೇಖರ್ ನೀಲಗಾರ, ಡಿಎಚ್ಒ ಡಾ.ಎಸ್.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಸವರಾಜ ತುಕ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ, ಕಾರ್ಮಿಕ ಅಧಿಕಾರಿ ತರನ್ನುಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT