ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಠ್ಯದೊಂದಿಗೆ ಬದುಕಿನ ಪಾಠವನ್ನೂ ಕಲಿಸಿ’

ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭ
Last Updated 5 ಸೆಪ್ಟೆಂಬರ್ 2019, 12:45 IST
ಅಕ್ಷರ ಗಾತ್ರ

ಬೆಳಗಾವಿ: ‘ಶಿಕ್ಷಕರು ‌ಪುಸ್ತಕಗಳಲ್ಲಿ ಇರುವುದನ್ನು ಮಾತ್ರವೇ ಕಲಿಸದೇ ಬದುಕಿನ ಪಾಠವನ್ನೂ ಹೇಳಿಕೊಡಬೇಕು. ಸಕಾರಾತ್ಮಕ ವಿಚಾರಗಳ ಮೂಲಕ ಸಮಾಜದಲ್ಲಿ ಬದಲಾವಣೆಗಳನ್ನು ತರಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಜಿಲ್ಲಾ ಪಂಚಾಯ್ತಿ, ಡಿಡಿಪಿಐ ಹಾಗೂ ನಗರ ವಲಯ ಬಿಇಒ ಕಚೇರಿ ಸಹಯೋಗದಲ್ಲಿ ಇಲ್ಲಿನ ಗಾಂಧಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಸ್ಕೃತಿ, ಸಂಸ್ಕಾರ, ಅಧ್ಯಾತ್ಮದ ಪುಣ್ಯ ಭೂಮಿಯಾದ ಭಾರತದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಎಂದು ಭಾವಿಸಬೇಕು. ನಮ್ಮ ಸಂಸ್ಕೃತಿಯಲ್ಲಿ ಗುರುವನ್ನು ದೇವರ ಸ್ಥಾನದಲ್ಲಿ ನೋಡುತ್ತೇವೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಹಾಗುರು ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಆದರ್ಶ, ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು. ಪವಿತ್ರವಾದ ವೃತ್ತಿಗೆ ಗೌರವ ಸಲ್ಲಿಸಬೇಕು’ ಎಂದು ತಿಳಿಸಿದರು.

‘ವೈದ್ಯ, ಎಂಜಿನಿಯರ್, ವಿಜ್ಞಾನಿ, ವಕೀಲ, ಪ್ರಧಾನಿ ಯಾರೇ ಇದ್ದರೂ ಅವರನ್ನು ರೂಪಿಸಿದರು ಶಿಕ್ಷಕರು ಎನ್ನುವುದನ್ನು ಮರೆಯಲಾಗದು. ಕಲ್ಲನ್ನು ಕೆತ್ತಿ ಸುಂದರವಾದ ಮೂರ್ತಿ ಮಾಡುವ ಶಕ್ತಿ ಗುರುಗಳಿಗಿದೆ. ಮಕ್ಕಳ ‌ಭವಿಷ್ಯ ಪ್ರಜ್ವಲಿಸುವಂತಾಗಲು ಗುರುಗಳಾದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದರು.

‘ಶಿಕ್ಷಕರಿಗೂ ಅನೇಕ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕುಂದುಕೊರತೆಗಳನು ನನ್ನ ಗಮನಕ್ಕೆ ತಂದರೆ, ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.

‘ಮಕ್ಕಳಿಗೆ ಪುಸ್ತಕದ ಜ್ಞಾನದೊಂದಿಗೆ ಇತರ ಜ್ಞಾನವನ್ನೂ ಕೊಡಬೇಕು. ಆಧುನಿಕ ತಂತ್ರಜ್ಞಾನಗಳ ಬಳಕೆಗೂ ಮುಂದಾಗಬೇಕು. ಎಲ್ಲ ಮಕ್ಕಳನ್ನೂ ಸಮಾನವಾಗಿ, ಪ್ರೀತಿಯಿಂದ ಕಾಣಬೇಕು. ಮನೆಯಂತಹ ವಾತಾವರಣ ಶಾಲೆಗಳಲ್ಲೂ ಇರಬೇಕು. ಹೊಸತುಗಳನ್ನು ಮಾಡುತ್ತಿರಬೇಕು’ ಎಂದರು.

ಬೆಳಿಗ್ಗೆ 10ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ 11.30ರ ನಂತರ ಆರಂಭವಾಯಿತು. ಇದನ್ನು ಪ್ರಸ್ತಾಪಿಸಿದ ಸಚಿವರು, ‘ನಾನು ನಿಗದಿತ ಸಮಯಕ್ಕೆ ಬಂದಿದ್ದೆ. ಆದರೆ, ಶಿಕ್ಷಕರೇ ಬಂದಿರಲಿಲ್ಲ. ನೀವೇ ಸಮಯಪಾಲನೆ ಮಾಡದಿದ್ದರೆ ಹೇಗೆ?’ ಎಂದು ಕೇಳಿದರು. ‘ಮುಂದಿನ ವರ್ಷ ಹೀಗಾಗದಂತೆ ನೋಡಿಕೊಳ್ಳಬೇಕು. ಗಣ್ಯರು ಬರುವಂತೆ ನಾನು ನೋಡಿಕೊಳ್ಳುತ್ತೇನೆ; ಶಿಕ್ಷಕರು ಬರುವಂತೆ ನೀವು ನೋಡಿಕೊಳ್ಳಬೇಕು’ ಎಂದು ಸಂಘಟಕರಿಗೆ ತಿಳಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಗೋರಲ, ಡಿಡಿಪಿಐ ಎ.ಬಿ. ಪುಂಡಲೀಕ, ಶಿಕ್ಷಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT