ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ನಿಷೇಧ ಕಾಯ್ದೆ ಅಗತ್ಯವಿಲ್ಲ: ಬಿಷಪ್ ಡೆರಿಕ್ ಫರ್ನಾಂಡೀಸ್

Last Updated 23 ಅಕ್ಟೋಬರ್ 2021, 9:50 IST
ಅಕ್ಷರ ಗಾತ್ರ

ಬೆಳಗಾವಿ: ‘ಮತಾಂತರ ನಿಷೇಧ ಕಾಯ್ದೆ ಅಗತ್ಯವಿಲ್ಲವಾದ್ದರಿಂದ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಬೆಳಗಾವಿ ಧರ್ಮಪ್ರಾಂತ್ಯದ ಬಿಷಪ್ ಡೆರಿಕ್ ಫರ್ನಾಂಡೀಸ್ ಒತ್ತಾಯಿಸಿದರು.

ಇಲ್ಲಿನ ಕ್ಯಾಂಪ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ನಾವು ಬಲವಂತದ ಹಾಗೂ ಆಮಿಷಗಳನ್ನು ಒಡ್ಡಿ ಮಾಡುವ ಮತಾಂತರದ ಕಡು ವಿರೋಧಿಗಳಾಗಿದ್ದೇವೆ. ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದಕ್ಕೆ ಸಂವಿಧಾನದಲ್ಲಿ ಈಗಾಗಲೇ ಹಲವು ರೀತಿಯ ಕ್ರಮಗಳನ್ನು ನೀಡಲಾಗಿದೆ. ಭಾರತೀಯ ದಂಡ ಸಂಹಿತೆ(ಐಪಿಸಿ)ಯೂ ಇದೆ. ಹೀಗಾಗಿ, ಪ್ರತ್ಯೇಕ ಕಾಯ್ದೆಯ ಔಚಿತ್ಯವಾದರೂ ಏನು?’ ಎಂದು ಕೇಳಿದರು.

‘ಆಮಿಷಗಳನ್ನು ಒಡ್ಡಿ ಅಥವಾ ಬಲವಂತದಿಂದ ಮತಾಂತರ ಮಾಡುವುದು ಪಾಪದ ಕೆಲಸ. ಯಾರನ್ನು ಯಾರೂ ಆ ರೀತಿ ಮಾಡಬಾರದು. ಕ್ರೈಸ್ತ ಧರ್ಮದ ಕಾನೂನಿನ ಪ್ರಕಾರವೂ ಇದನ್ನು ನಿಷೇಧಿಸಲಾಗಿದೆ. ಯೇಸು ಕ್ರಿಸ್ತ ಕೂಡ ಯಾರನ್ನು ತಮ್ಮತ್ತ ಬಲವಂತವಾಗಿ ಕರೆಯಲಿಲ್ಲ; ತಮ್ಮನ್ನು ಅನುಸರಿಸುವಂತೆ ಹೇರಲಿಲ್ಲ. ಇದನ್ನು ನಾವೂ ಅನುಸರಿಸಿಕೊಂಡು ಬಂದಿದ್ದೇವೆ’ ಎಂದು ತಿಳಿಸಿದರು.

‘ಕ್ಯಾಥೊಲಿಕ್ ಕ್ರಿಸ್ತ ಸಭೆಯು ಅಂತರ್ಜಾತಿ ಅಥವಾ ಕ್ರೈಸ್ತರಲ್ಲದವರೊಂದಿಗೆ ವಿವಾಹವನ್ನು ಪ್ರೋತ್ಸಾಹಿಸುತ್ತದೆ. ಆದರೆ, ಮತಾಂತರವಾಗಬೇಕು ಎಂದು ಹೇಳುವುದಿಲ್ಲ. ಅವರವರ ಧರ್ಮವನ್ನು ಅನುಸರಿಸುವುದಕ್ಕೆ ಅವಕಾಶವಿದೆ. ಪರಸ್ಪರರ ನಂಬಿಕೆ ಹಾಗೂ ಧರ್ಮಾಚರಣೆಯನ್ನು ಗೌರವಿಸಲಾಗುತ್ತದೆ’ ಎಂದು ಹೇಳಿದರು.

‘ಮತಾಂತರ ನಿಷೇಧ ಕಾಯ್ದೆಯನ್ನು, ಕೆಲವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಕಾಯ್ದೆಗಿಂತಲೂ ಅದನ್ನು ಅಸ್ತ್ರವಾಗಿ ಮಾಡಿಕೊಂಡು ತೊಂದರೆ ಕೊಡುವವರ ಬಗ್ಗೆ ನಮಗೆ ಕಳವಳವಿದೆ. ಸುಳ್ಳು ಆಪಾದನೆ ಮಾಡುವುದು, ಜನರಿಗೆ ತೊಂದರೆ ಕೊಡುವುದು ಅಥವಾ ಮತಾಂತರ ಮಾಡಲಾಗುತ್ತಿದೆ ಅನವಶ್ಯವಾಗಿ ಗುಲ್ಲೆಬ್ಬಿಸಿ ಶಾಂತಿ ಕದಡುವ ಕೆಲಸಗಳು ನಡೆಯುವ ಸಾಧ್ಯತೆ ಇರುತ್ತದೆ. ಅಲ್ಲದೇ, ಯಾರನ್ನೂ ಯಾರೂ ಬಲವಂತದಿಂದ ಮತಾಂತರ ಮಾಡಲು ಬರುವುದಿಲ್ಲ. ಅದು, ಆಯಾ ವ್ಯಕ್ತಿಯ ಆಂತರಿಕ ಸಂಗತಿಯಾಗಿದೆ. ಯಾರದೋ ವೈಯಕ್ತಿಕ ಹಿತಾಸಕ್ತಿ ಕಾಯುವುದಕ್ಕಾಗಿ ಸರ್ಕಾರ ಮಣಿಯಬಾರದು’ ಎಂದು ಕೋರಿದರು.

‘ನೂರಾರು ಶಾಲಾ–ಕಾಲೇಜುಗಳನ್ನು, ಆಸ್ಪತ್ರೆಗಳನ್ನು ನಾವು ನಡೆಸುತ್ತಿದ್ದೇವೆ. ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿದ್ದೇವೆ. ನಮ್ಮ ಯಾವುದಾದರೂ ಶಾಲೆ ಅಥವಾ ಕಾಲೇಜುಗಳಲ್ಲಿ ಬಲವಂತದ ಅಥವಾ ಏನಾದರೂ ಆಮಿಷ ಒಡ್ಡಿ ಮತಾಂತರ ಮಾಡಿದ ಉದಾಹರಣೆಗಳಿದ್ದರೆ ತೋರಿಸಿದರೆ, ಕೂಡಲೇ ಅಂತಹ ಸಂಸ್ಥೆಗಳನ್ನು ಮುಚ್ಚುತ್ತೇವೆ’ ಎಂದು ಸವಾಲು ಹಾಕಿದರು.

‘ಅಲ್ಪಸಂಖ್ಯಾತರಾದ ನಮಗೆ ರಕ್ಷಣೆ ಕೊಡುವ ಬದಲಿಗೆ ಮೂಲೆಗುಂಪು ಮಾಡುವುದು ಅಥವಾ ಗುರಿಯಾಗಿಸುವುದು ಸರಿಯಲ್ಲ’ ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತ ಗಮನಹರಿಸಬೇಕು. ಸಂವಿಧಾನದ ಆಶಯಗಳ ಪ್ರಕಾರ ಕೆಲಸ ಮಾಡುತ್ತಿರುವ ನಮಗೆ ತೊಂದರೆ ಕೊಡುವುದು ಸಲ್ಲದು. ನಮ್ಮ ಧ್ವನಿಯಲ್ಲಿನ ದುಗುಡವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT