ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ | ದೇವಸ್ಥಾನ, ಸಮುದಾಯ ಭವನಗಳಲ್ಲಿ ತರಗತಿ!

ಇನ್ನೂ ಆರಂಭಗೊಳ್ಳದ ಶಾಲೆಗಳ ದುರಸ್ತಿ ಕಾಮಗಾರಿ
Last Updated 13 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಸುಸಜ್ಜಿತ ಕಟ್ಟಡ, ಬೆಂಚು, ಕರಿಬೋರ್ಡು, ಗಂಟೆ, ಬಿಸಿಯೂಟ, ಶಾಲಾ ಮೈದಾನ... ಇವೆಲ್ಲವೂ ಈಗ ಬೆಳಗಾವಿ ಜಿಲ್ಲೆಯ ಬಹುತೇಕ ಮಕ್ಕಳಿಗೆ ನೆನಪು ಮಾತ್ರ. ಸದ್ಯ ಮರದ ಕೆಳಗೆ, ಬಿಸಿಲಿದ್ದರೂ ಕೂರಬೇಕು. ಮಳೆ ಬಂದರೆ ರಜೆ. ದೇಗುಲದ ಪ್ರಾಂಗಣದಲ್ಲಿ ಪಾಠ ಕೇಳಬೇಕು. ಎರಡೆರಡು ತರಗತಿಗೆ ಒಟ್ಟೊಟ್ಟಾಗಿ ಹೇಳುವುದರಿಂದ ಒಬ್ಬರಿಗೆ ಒಬ್ಬರು ಅಂಟಿಕೊಂಡೇ ಕೂರಬೇಕು.

ನೆರೆ ಬಂದು ಹೋಗಿ ಎರಡು ತಿಂಗಳಾದವು. ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ದುರಸ್ತಿ ಕಾಮಗಾರಿ ಆರಂಭಗೊಳ್ಳದೇ ಇರುವುದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಆಗಸ್ಟ್‌ ಮೊದಲ ವಾರದಿಂದ ಉಂಟಾದ ಪ್ರವಾಹವು ‘ಜ್ಞಾನ ದೇಗುಲ’ಗಳನ್ನು ಕೂಡ ‘ಬಲಿ’ ಪಡೆದಿದೆ. ಎಲ್ಲ ತಾಲ್ಲೂಕುಗಳಲ್ಲೂ ಶಾಲೆಗಳು ಹಾನಿಗೊಳಗಾಗಿವೆ. ಖಾನಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 561 ಕೊಠಡಿಗಳು ಹಾಳಾಗಿವೆ. ಮಲಪ್ರಭಾ ನದಿ ಪ್ರವಾಹದಿಂದಾಗಿ ರಾಮದುರ್ಗ (445) ಹಾಗೂ ಸವದತ್ತಿ (447) ತಾಲ್ಲೂಕಿನಲ್ಲಿ ಕೊಠಡಿಗಳು ಬಿದ್ದಿವೆ. ಒಟ್ಟು ₹ 316 ಕೋಟಿ ಹಾನಿಯಾಗಿದೆ. ಸದ್ಯ ದುರಸ್ತಿಗೆಂದು ಪ್ರತಿ ಶಾಲೆಗೆ ₹ 2 ಲಕ್ಷದಂತೆ ₹ 46.14 ಕೋಟಿ ಅನುದಾನ ಕೋರಿ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಶಿಥಿಲಗೊಂಡ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸುತ್ತಿಲ್ಲ. ಶಾಲೆಯಲ್ಲಿ ಲಭ್ಯವಿರುವ ಕೊಠಡಿಗಳಲ್ಲಿ ಎರಡೆರಡು ತರಗತಿಗಳನ್ನು ಸಂಯೋಜಿಸಿ (ಕಂಬೈನ್ಡ್‌) ಪಾಠ ಮಾಡಲಾಗುತ್ತಿದೆ! ಕೆಲವೆಡೆ ವರಾಂಡ, ಆವರಣದ ಮರಗಳ ನೆರಳಿನಲ್ಲಿ, ಸಮೀಪದ ಅಂಗನವಾಡಿ, ಸಮುದಾಯ ಭವನ ಹಾಗೂ ದೇವಸ್ಥಾನಗಳ ಆವರಣವೇ ‘ಪಾಠ ಶಾಲೆ’ಗಳಾಗಿವೆ. ಅಥಣಿ ತಾಲ್ಲೂಕಿನ ನದಿಇಂಗಳಗಾವ ಮೊದಲಾದ ಕಡೆ ತಗಡಿನ ಶೆಡ್‌ಗಳಲ್ಲಿ ಶಾಲೆ ನಡೆಸಲಾಗುತ್ತಿದೆ. ಅ.6ರಿಂದ 20ರವರೆಗೆ ದಸರಾ ರಜೆ ಕೊಡಲಾಗಿದೆ.

ಬಯಲನ್ನೇ ಆಶ್ರಯಿಸಬೇಕು:

ಬಿಸಿಯೂಟ ಅಡುಗೆ ಮನೆಗಳು, ಶೌಚಾಲಯಗಳು, ಕೆಲವೆಡೆ ಲ್ಯಾಬ್‌ಗಳು ಹಾನಿಗೊಳಗಾಗಿವೆ. ಪೀಠೋಪಕರಣ, ಪಾಠೋಪಕರಣಗಳು ಕೊಚ್ಚಿ ಹೋಗಿವೆ. ‘ಪರವಾಗಿಲ್ಲ’ ಎನ್ನಬಹುದಾದ ಕೊಠಡಿಗಳನ್ನು ಸ್ವಚ್ಛ ಮಾಡಿಕೊಂಡು ತರಗತಿ ನಿರ್ವಹಿಸಲಾಗುತ್ತಿದೆ. ಶೌಚಾಲಯ ವ್ಯವಸ್ಥೆ ಇಲ್ಲದೇ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಬೇಕಾದ ಸ್ಥಿತಿ ಇದೆ!

ಈವರೆಗೂ ಸರ್ಕಾರದಿಂದ ಅನುದಾನ ಬಿಡುಗಡೆ ಆಗಿಲ್ಲ. ಹೀಗಾಗಿ, ರಜೆಯಲ್ಲಿ ದುರಸ್ತಿ ಕಾಮಗಾರಿ ನಡೆಯುವುದು ಅನುಮಾನ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಬಹುತೇಕ ಕಡೆಗಳಲ್ಲಿ ಎಲ್ಲ ಕೊಠಡಿಗಳನ್ನೂ ಕೆಡವಿ ಹೊಸದಾಗಿ ನಿರ್ಮಿಸುವ ಅಗತ್ಯವಿದೆ ಎನ್ನುತ್ತಾರೆ ಅವರು.

ಬೆಳಗಾವಿಗೆ (974) ಹೋಲಿಸಿದರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ (2,307) ಶಾಲೆಗಳಿಗೆ ಹಾನಿಯಾಗಿದೆ. ಕೊಠಡಿಗಳ ಸಂಖ್ಯೆ ಪರಿಗಣಿಸಿದರೆ ಚಿಕ್ಕೋಡಿಗಿಂತ (1,796) ಬೆಳಗಾವಿ (2,662) ಹೆಚ್ಚು ಹಾನಿಗೊಳಗಾಗಿದೆ.

ಅಂಕಿ–ಅಂಶ

ಬೆಳಗಾವಿ ಶೈಕ್ಷಣಿಕ ಜಿಲ್ಲೆ

ತಾಲ್ಲೂಕು; ಹಾನಿಗೊಳಗಾದ ಶಾಲೆಗಳು; ಕೊಠಡಿಗಳು

ಬೆಳಗಾವಿ ನಗರ; 138; 384

ಬೆಳಗಾವಿ ಗ್ರಾಮೀಣ; 130; 287

ಬೈಲಹೊಂಗಲ; 108; 314

ಕಿತ್ತೂರ; 64; 224

ಖಾನಾಪುರ; 236; 561

ರಾಮದುರ್ಗ; 138; 445

ಸವದತ್ತಿ; 160; 447

ಚಿ‌ಕ್ಕೋಡಿ ಶೈಕ್ಷಣಿಕ ಜಿಲ್ಲೆ

ಅಥಣಿ; 225; 327

ಕಾಗವಾಡ; 62; 100

ಚಿಕ್ಕೋಡಿ; 184; 248

ನಿ‍ಪ್ಪಾಣಿ; 156; 182

ಗೋಕಾಕ; 106; 153

ಮೂಡಲಗಿ; 193; 235

ಹುಕ್ಕೇರಿ; 249; 260

ರಾಯಬಾಗ; 158; 291

ಒಟ್ಟು; 2,307; 4458

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT