ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ತಲ್ಲಣದಲ್ಲಿ 'ಪ್ರಕೃತಿಯ' ಚಿತ್ರಗಳ ಅನಾವರಣ 

Last Updated 9 ಮೇ 2021, 19:30 IST
ಅಕ್ಷರ ಗಾತ್ರ

ಮೂಡಲಗಿ: ಕೋವಿಡ್‌ ಕರ್ಫ್ಯೂ ಸಂದರ್ಭವನ್ನು ಇಲ್ಲಿನ ಎಸ್‌ಎಸ್‌ಆರ್‌ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸುಭಾಷ ಕುರಣೆ ದಿನಕ್ಕೊಂದು ‘ಪ್ರಕೃತಿ ಚಿತ್ರ’ ರಚಿಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಇಂತಹಸಂದಿಗ್ಧತೆಯಲ್ಲಿ ಚಿತ್ರಕಲೆ ಉಳಿಯಬೇಕು ಎಂಬ ಆಶಯದಿಂದ ಅವರು ನಿತ್ಯ ಚಿತ್ರವೊಂದನ್ನು ಬಿಡಿಸಿ ಹಂಚಿಕೊಳ್ಳುತ್ತಿದ್ದಾರೆ. ಶಿಕ್ಷಕರು, ಚಿತ್ರಕಲಾವಿದರು ಇರುವ ವಾಟ್ಸ್ಆ್ಯಪ್‌ ಗ್ರೂಪ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗಮನಸೆಳೆದಿದ್ದಾರೆ. ಈ ಮೂಲಕ ಜನರಲ್ಲಿ ಚಿತ್ರಕಲೆಯ ಅಭಿರುಚಿ ಬೆಳೆಸುತ್ತಿದ್ದಾರೆ. ವಿದ್ಯಾರ್ಥಿಗಳಿರುವ ಗ್ರೂಪಲ್ಲೂ ಹಂಚಿಕೊಳ್ಳುತ್ತಿದ್ದಾರೆ.

‘ಲಾಕ್‌ಡೌನ್‌ನಲ್ಲೂ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಜ್ಞಾನ ನಿರಂತರವಾಗಿದೆ. ಅದಕ್ಕೆ ಸುಭಾಷ ಕುರಣೆ ಅವರ ಇಚ್ಛಾಶಕ್ತಿ ಕಾರಣವಾಗಿದೆ’ ಎಂದು ಶಾಲೆಯ ಉಪಪ್ರಾಚಾರ್ಯ ಕೆ.ಎಸ್. ಹೊಸಟ್ಟಿ ಮತ್ತು ಸಿಬ್ಬಂದಿ ಹೆಮ್ಮೆಯಿಂದ ಹೇಳಿದರು.

ಬೆಟ್ಟ, ಗುಡ್ಡ, ನದಿ, ಕೆರೆ, ಪ್ರಾಣಿ, ಪಕ್ಷಿ ಸಂಕುಲ, ಗ್ರಾಮೀಣ ಪರಿಸರ, ಗಿಡ, ಮರ, ಕಾಡು ಹೀಗೆ... ಪ್ರಕೃತಿಯೇ ಸುಭಾಷ ಅವರ ಚಿತ್ರಗಳಿಗೆ ವಸ್ತು. 12 ಮತ್ತು 10 ಅಂಗುಲಗಳ ಉದ್ಗಗಲದ ಹಾಳೆಯಲ್ಲಿ ಅಕ್ರೆಲಿಕ್‌ ಮತ್ತು ಜಲವರ್ಣ, ಪೋಸ್ಟರ್‌ ಕಲರ್‌ಗಳನ್ನು ಬಳಸಿ ಚಿತ್ರ ಬಿಡಿಸುತ್ತಾರೆ. ‘ಚಿತ್ರಕ್ಕೆ ಸ್ಕೆಚ್‌ ಹಾಕಿ ಸೂಕ್ತ ಬಣ್ಣಗಳನ್ನು ಹಾಕಿ ರೂಪುಗೊಳ್ಳಬೇಕಾದರೆ 2ರಿಂದ 3 ಗಂಟೆ ಬೇಕಾಗುತ್ತದೆ’ ಎನ್ನುತ್ತಾರೆ ಸುಭಾಷ.

‘ಪ್ರಕೃತಿ ಉತ್ತಮವಾಗಿದ್ದರೆ ಜೀವಸಂಕುಲ ಉಳಿಯುತ್ತದೆ. ಪ್ರಕೃತಿಯ ವಿಕೃತಿಯಿಂದ ಕೊರೊನಾದಂತಹ ಸೋಂಕುಗಳು ಉದ್ಭವಿಸುತ್ತವೆ. ಪ್ರಕೃತಿ ಆರಾಧಿಸಿರಿ’ ಎಂದು ಕೋರುವಂತಿವೆ ಅವರ ಚಿತ್ರಗಳು.

‘ಸುಭಾಷ ಅವರು ನಿತ್ಯ ಚಿತ್ರಿಸುವ ಪ್ರಕೃತಿಯ ಚಿತ್ರಗಳನ್ನು ನೋಡಿದಾಗ ಉತ್ಸಾಹ ಇಮ್ಮಡಿ ಆಗುತ್ತದೆ. ಕೊರೊನಾ ಭೀತಿ, ಖಿನ್ನತೆಯಲ್ಲಿ ಪ್ರಕೃತಿಯ ಚಿತ್ರಗಳು ಮನಸ್ಸಿಗೆ ಮುದ ನೀಡುತ್ತವೆ’ ಎಂದು ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಹೋದ ವರ್ಷದ ಲಾಕ್‌ಡೌನ್‌ ವೇಳೆ ದಿನಕ್ಕೊಂದು ಚಿತ್ರ ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT