ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯ 2 ಸಂಸದರಿಗೆ ದಕ್ಕಿದ ಸಚಿವ ಸ್ಥಾನ ಭಾಗ್ಯ!

Last Updated 30 ಏಪ್ರಿಲ್ 2019, 14:19 IST
ಅಕ್ಷರ ಗಾತ್ರ

ಬೆಳಗಾವಿ: ಇದುವರೆಗೆ ಒಂದು ಉಪಚುನಾವಣೆ ಸೇರಿದಂತೆ 16 ಸಾರ್ವತ್ರಿಕ ಚುನಾವಣೆಗಳನ್ನು ಬೆಳಗಾವಿ ಲೋಕಸಭಾ ಕ್ಷೇತ್ರ ಕಂಡಿದೆ. ಒಂಬತ್ತು ಜನ ಸಂಸದರು ವಿವಿಧ ಅವಧಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಕೇಂದ್ರ ಮಂತ್ರಿಯಾಗುವ ಭಾಗ್ಯ ಇಬ್ಬರಿಗೆ ಮಾತ್ರ ದೊರೆತಿದೆ. ಕಾಂಗ್ರೆಸ್ಸಿನ ಬಿ.ಎನ್‌. ದತಾರ್‌ ಹಾಗೂ ಬಿಜೆಪಿಯ ಬಾಬಾಗೌಡ ಪಾಟೀಲ ಮಂತ್ರಿಯ ರುಚಿ ಸವಿದವರು.

ಬಲವಂತರಾವ್‌ ಎನ್‌. ದತಾರ್‌ ಅವರು ಮೂಲತಃ ಮಹಾರಾಷ್ಟ್ರದ ಪುಣೆಯ ನಿವಾಸಿ. ರಾಜ್ಯಗಳ ಪುನರ್‌ವಿಂಗಡಣೆಗಿಂತ ಮೊದಲು ಬೆಳಗಾವಿ– ಧಾರವಾಡ ಮುಂಬೈ ಪ್ರಾಂತ್ಯಕ್ಕೆ ಸೇರಿತ್ತು. ಆ ಅವಧಿಯಲ್ಲಿ ಅವರು ಬೆಳಗಾವಿ, ಧಾರವಾಡ ಜೊತೆ ನಿಕಟ ಸಂಪರ್ಕ ಹೊಂದಿದ್ದರು. 1948ರಲ್ಲಿ ಅವರು ಕರ್ನಾಟಕ ವಿಶ್ವವಿದ್ಯಾಲಯ ಸಮಿತಿಯ ಸದಸ್ಯರೂ ಆಗಿದ್ದರು. ಕಾಂಗ್ರೆಸ್‌ ಸದಸ್ಯರಾಗಿದ್ದರು.

1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿ, ಜಯಗಳಿಸಿದ್ದರು. ನಂತರ ಅವರು ತಮ್ಮ ವಾಸ್ತವ್ಯವನ್ನು ಬೆಳಗಾವಿಗೆ ಸ್ಥಳಾಂತರಿಸಿದರು. ಅಂದಿನ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರ ಮಂತ್ರಿ ಮಂಡಲದಲ್ಲಿ 1952ರಿಂದ 1955ರವರೆಗೆ ಗೃಹ ಖಾತೆಯ ಉಪ–ಸಚಿವರಾಗಿದ್ದರು.

43ವರ್ಷಗಳ ನಂತರ:

ದತಾರ್‌ ಅವರ ನಂತರ ಬೆಳಗಾವಿ ಸಂಸದರಿಗೆ ಮಂತ್ರಿ ಸ್ಥಾನ ಪುನಃ ಸಿಗಲು 43 ವರ್ಷ ಕಾಯಬೇಕಾಯಿತು. 1998ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಬಾಬಾಗೌಡ ಪಾಟೀಲ ಅವರು ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಖಾತೆಯ ರಾಜ್ಯ ಸಚಿವರಾದರು.

ಬಾಬಾಗೌಡರು ಇದಕ್ಕೂ ಮೊದಲು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಮೂರನೇ ಪ್ರಯತ್ನದಲ್ಲಿ ಜಯಗಳಿಸಿದ್ದರು. ವಾಜಪೇಯಿ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದರ ಫಲವಾಗಿ ಸಚಿವರಾಗಿಯೂ ನಿಯುಕ್ತಿಗೊಂಡಿದ್ದರು.

4 ಸಲ ಗೆದ್ದವರಿಗೂ ದಕ್ಕದ ಸಚಿವ ಸ್ಥಾನ;

ಬಾಬಾಗೌಡರಿಗೆ ಇದ್ದಂತಹ ಅದೃಷ್ಟ ಕಾಂಗ್ರೆಸ್‌ನ ಎಸ್‌.ಬಿ. ಸಿದ್ನಾಳ ಅವರಿಗೆ ಇರಲಿಲ್ಲ. 1980ರಿಂದ ಸತತ ನಾಲ್ಕು ಚುನಾವಣೆಗಳಲ್ಲಿ ಜಯಗಳಿಸಿದ್ದರು. ಪಕ್ಷದ ಅಧ್ಯಕ್ಷೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಅವರ ಜೊತೆ ನಿಕಟ ಸಂಪರ್ಕವನ್ನೂ ಹೊಂದಿದ್ದರು. ಆದರೂ, ಸಚಿವ ಸ್ಥಾನ ದಕ್ಕಿಸಿಕೊಳ್ಳುವಲ್ಲಿ ಸಫಲರಾಗಲಿಲ್ಲ.

ಅಂಗಡಿ ಹೆಸರು ಮುನ್ನೆಲೆಗೆ;

ಹಾಲಿ ಸಂಸದ, ಬಿಜೆಪಿಯ ಸುರೇಶ ಅಂಗಡಿ 2004ರಿಂದ ಸತತ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಅವಧಿಯಲ್ಲಿ ಕೇಂದ್ರದಲ್ಲಿ ಹಲವು ಬಾರಿ ಸಚಿವ ಸಂಪುಟ ಪುನರ್‌ರಚನೆಗೊಂಡಾಗ ಅಂಗಡಿಯವರ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ, ಅದೇಕೋ ಕೈಗೂಡಲಿಲ್ಲ. ಅಂಗಡಿಯವರು ಈಗ ನಾಲ್ಕನೇ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT