ಸವದತ್ತಿ: ಇಲ್ಲಿನ ಪುರಸಭೆ ಎದುರಿಗಿನ ಲಿಂಗರಾಜ ಪ್ರತಿಮೆ ಮುಂಭಾಗದಲ್ಲಿ ಪುರಸಭೆ ವ್ಯಾಪ್ತಿಯಲ್ಲಿನ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿಗಳು ಅವೈಜ್ಞಾನಿಕವಾಗಿವೆ ಎಂದು ಸ್ಥಳೀಯರು ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಎಂ.ಯು. ಬೀಳಗಿ ಮಾತನಾಡಿ, ಪುರಸಭೆ ಮತ್ತು ಪಿಡಬ್ಲುಡಿಗಳಿಂದ ಇಲ್ಲಿನ ಎಪಿಎಮ್‌ಸಿಯಿಂದ ಲಿಂಗರಾಜ ಸರ್ಕಲ್, ಬಸ್ ನಿಲ್ದಾಣ, ಎಲ್‌ಐಸಿ, ಎಸ್ಎಲ್ಎಒ ಕ್ರಾಸ್, ಬಸವೇಶ್ವರ ವೃತ್ತ, ಶಿವಾಜಿ ವೃತ್ತದಿಂದ ಭಗೀರಥ ವೃತ್ತದವರೆಗೂ ರಸ್ತೆಗಳ ಮಧ್ಯ 6 ತಿಂಗಳ ಹಿಂದೆ ಅಳವಡಿಸಿದ ವಿದ್ಯುತ್ ಕಂಬಗಳನ್ನು ಬದಲಾಯಿಸುತ್ತಿರುವುದು ಏಕೆ, ₹3 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ 30 - ಹೆಮ್ಮಡಗಾ - ಸಿಂಧನೂರು ಹೆದ್ದಾರಿ ರಸ್ತೆಯ ಭಾಗವಾದ ಎಪಿಎಂಸಿಯಿಂದ ಆಲಂಕಾರಿಕ ವಿದ್ಯುತ್ ದೀಪಗಳ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ಬೀದಿ ವ್ಯಾಪಾರಸ್ಥರು ಮಳಿಗೆ ನಿರ್ಮಿಸಿಕೊಂಡಿದ್ದು ಪಾದಚಾರಿಗಳ ಮಾರ್ಗವನ್ನು ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿದರು.
‘ಈ ಕುರಿತು ಸಮೀಕ್ಷೆ ನಡೆಸುವವರೆಗೂ ವಿದ್ಯುತ್ ಕಂಬಗಳನ್ನು ಅಳವಡಿಸಬಾರದೆಂದು ಎಚ್ಚರಿಸಿದರೂ ಕಾಮಗಾರಿ ತೀವ್ರ ಗತಿಯಲ್ಲಿದೆ. ಇದರಿಂದ ನಗರಕ್ಕೆ ಬರುವ ವಾಹನಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ಜನತೆಗೆ ಸಮಸ್ಯೆಯಾಗಿದೆ’ ಎಂದರು.
‘ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಪುರಸಭೆಯಿಂದ ರಸ್ತೆ ವಿಸ್ತರಣೆ ಕುರಿತು ಸರ್ವೆ ನಡೆಸಲು ತಿಳಿಸಿದರು ಕಾಮಗಾರಿ ನಡೆದಿದೆ. ರಸ್ತೆ ಬದಿ ಪಾದಚಾರಿ ಮಾರ್ಗ, ಚರಂಡಿ ವ್ಯವಸ್ಥೆ ಕಲ್ಪಿಸಿ ಸಮರ್ಪಕ ಸಂಚಾರಕ್ಕೆ ಮಾರ್ಗ ಕಲ್ಪಿಸಲಿ. ಈ ಕುರಿತು ರಾಮದುರ್ಗ ಡಿವೈಎಸ್‌ಪಿ ಅವರಿಗೆ ತಿಳಿಸಲಾಗಿತ್ತು. ಅವರು ಸಮಸ್ಯೆ ಸರಿಪಡಿಸಲು ಪುರಸಭೆಗೆ ಸೂಚಿಸಿದ್ದರು. ಈ ವರೆಗೆ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.
‘ಪುರಸಭೆಯಿಂದ ನನೆಗುದಿಗೆ ಬಿದ್ದ ಕಾಮಗಾರಿಗಳು, ಮಳಿಗೆಗಳ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಕಳೆದ 4 ವರ್ಷಗಳಿಂದ 20 ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ ನಡೆದಿಲ್ಲ. ರಾಜ ಕಾಲುವೆ ಅತಿಕ್ರಮಣ ನಡೆದು ಮಳೆ ನೀರು ಸಾಗಲು ದಾರಿಯಿಲ್ಲದಾಗಿದೆ. ಜಿಲ್ಲಾಧಿಕಾರಿ ಬರುವವರೆಗೂ ಧರಣಿ ಮುಂದುವರೆಯಲಿದೆ’ ಎಂದರು.
ಲಾಲಸಾಬ ಅಪರಾಧನವರ, ಉಮೇಶ ಭೀಮಣ್ಣವರ, ಸುರೇಶ ತಿಗಡಿ, ಶ್ರೀಧರ ಬಸರಗಿ, ಸೋಮು ಹದ್ಲಿ, ರಿಯಾಜ ನಿಪ್ಪಾಣಿ ಹಾಗೂ ಸ್ಥಳೀಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.