ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಯಿಂದ ನೊಂದವರಿಗೆ ನೆರವಾಗಲು ಆಗ್ರಹ

ಭಾರತೀಯ ಕೃಷಿಕ‌ ಸಮಾಜ ಪದಾಧಿಕಾರಿಗಳಿಂದ ಮನವಿ
Last Updated 27 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ನೆರೆಯಿಂದ ನೊಂದಿರುವ ರೈತರ ಬದುಕನ್ನು ಮತ್ತೆ ಕಟ್ಟಿಕೊಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕೃಷಿಕ‌ ಸಮಾಜ(ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ನೇತೃತ್ವದಲ್ಲಿ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ. ಬೂದೆಪ್ಪ ಅವರಿಗೆ ಮನವಿ ಸಲ್ಲಿಸಿದರು.

‘ಈ ಬಾರಿ ಆಗಿರುವ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರವು ಹೆಚ್ಚಿನ ಅನುದಾನ ನೀಡಬೇಕು. ಮಳೆ, ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಸರ್ಕಾರವೇ ಸಂಪೂರ್ಣವಾಗಿ ನಿರ್ಮಿಸಿಕೊಡಬೇಕು. ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ನೆರೆಯಲ್ಲಿ ದಾಖಲೆಗಳು ಕೊಚ್ಚಿ ಹೋಗಿರುವದರಿಂದ ಸುಲಭವಾಗಿ ಮತ್ತೆ ಸಿಗುವ ದಾಖಲೆಗಳನ್ನು ಮಾತ್ರ ಪರಿಗಣಿಸಬೇಕು. ಎಕರೆಗೆ ಕನಿಷ್ಠ ₹50 ಸಾವಿರ ಬೆಳೆ ಪರಿಹಾರ ನೀಡಬೇಕು. ಮೃತರ ಕುಟುಂಬದವರಿಗೆ ₹ 25 ಲಕ್ಷ ಹಾಗೂ ಜಾನುವಾರುಗಳ ಹಾನಿಗೆ ₹ 2 ಲಕ್ಷ ಪರಿಹಾರ ಒದಗಿಸಬೇಕು. ಈ ಬಗ್ಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಪಡಿತರ ಚೀಟಿ, ಆಧಾರ್‌ ಕಾರ್ಡ್, ಮಾಸಾಶನ ದಾಖಲೆ, ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳು, ಪಹಣಿ ಪತ್ರಗಳನ್ನು ತಕ್ಷಣ ಒದಗಿಸಬೇಕು. ಹಿಂಗಾರಿನಲ್ಲಿ ಮಳೆ ಅಭಾವದಿಂದ ಮತ್ತು ಮುಂಗಾರಿನ ನೆರೆ ಹಾವಳಿಯಿಂದ ಹಾನಿಗೆ ಒಳಗಾಗಿರುವ ಬೆಳೆಗಳ ಸಮೀಕ್ಷೆಗಾಗಿ ಅಧಿಕಾರಿಗಳು ಖುದ್ದಾಗಿ ಹೊಲಗಳಿಗೆ ತೆರಳಿ ವಾಸ್ತವಿಕ ಸಮೀಕ್ಷೆ ನಡೆಸಿ, ಪರಿಹಾರಕ್ಕಾಗಿ ವೈಜ್ಞಾನಿಕ ವರದಿ ನೀಡಬೇಕು. ಬೆಳೆ ನಷ್ಟದಿಂದಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ಈ ಸಮಸ್ಯೆ ಪರಿಹರಿಸಬೇಕು. ನದಿ ಪಾತ್ರದ ಜನರ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಮತ್ತು ವಿಶೇಷ ಪ್ಯಾಕೇಜ್ ಘೋಷಿಸಬೇಕು’ ಎಂದರು.

‘ನೆರೆಯಿಂದ ವಿದ್ಯುತ್ ಸರಬರಾಜು ವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚಿವೆ. ಕೆಲ ವಿದ್ಯುತ್ ಕಂಬಗಳು ಅಪಾಯದ ಅಂಚಿನಲ್ಲಿವೆ. ವಿದ್ಯುತ್ ಅವಘಡ ಸಂಭವಿಸುವ ಅಪಾಯ ಇರುವುದರಿಂದ ಕೂಡಲೇ ದುರಸ್ತಿ ಕಾರ್ಯ ಆರಂಭಿಸಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಪ್ರವಾಹಪೀಡಿತ ಗ್ರಾಮಗಳ ರೈತರಿಗೆ ಹಿಂಗಾರು ಬಿತ್ತನೆಗಾಗಿ ಬೀಜ, ರಸಗೊಬ್ಬರ, ಔಷಧಗಳನ್ನು ಉಚಿತವಾಗಿ ಪೂರೈಸಬೇಕು.
ರೈತರ ಪಂಪ್‍ಸೆಟ್‍ ಹಾಗೂ ಬಾವಿಗಳನ್ನು ಸರ್ಕಾರವೇ ದುರುಸ್ತಿ ಮಾಡಿಕೊಡಬೇಕು. ಸಂಪೂರ್ಣ ರಿಯಾಯಿತಿಯಲ್ಲಿ ಹನಿ ನೀರಾವರಿ ಸೌಲಭ್ಯ ಒದಗಿಸಬೇಕು’ ಎಂದು ಕೋರಿದರು.

ಗೌರವಾಧ್ಯಕ್ಷ ಜಯಪ್ಪ ಬಸರಕೋಡ, ಜಿಲ್ಲಾ ಘಟಕದ ಅಧ್ಯಕ್ಷ ದುಂಡಯ್ಯ ಪೂಜಾರ, ಪ್ರಧಾನ ಕಾರ್ಯದರ್ಶಿ ಸುರೇಶ ಮರಲಿಂಗಣ್ಣವರ, ದುಂಡನಗೌಡ ಪಾಟೀಲ, ಸಂತೋಷ ರುದ್ರಪ್ಪಗೋಳ, ಗಂಗಾಧರ ಪಾಟೀಲ, ನಿರ್ವಾಣಿ ಶಿರೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT