ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ತರಗತಿ ನಡೆಸಿ: ಎಂಜಿನಿಯರಿಂಗ್ ಕಾಲೇಜುಗಳಿಗೆ ವಿಟಿಯು ಕುಲಪತಿ

ಎಂಜಿನಿಯರಿಂಗ್ ಕಾಲೇಜುಗಳಿಗೆ ವಿಟಿಯು ಕುಲಪತಿ ಸೂಚನೆ
Last Updated 20 ಮಾರ್ಚ್ 2020, 15:13 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ವೈರಾಣು ಸೋಂಕು ಹರಡುವಿಕೆ ತಡೆಗಟ್ಟುವ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಇಲ್ಲಿನ ವಿಟಿಯುನಲ್ಲಿ ಕುಲಪತಿ ಪ್ರೊ.ಕರಿಸಿದ್ದ‍ಪ್ಪ ಅವರು ಶುಕ್ರವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಕಾಲೇಜುಗಳಿಗೆ ಹಲವು ಸೂಚನೆಗಳನ್ನು ನೀಡಿದರು. ‘ಮನೆಯಿಂದಲೇ ಕಲಿಯಿರಿ’ ಯೋಜನೆಯಡಿ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ತಿಳಿಸಿದರು.

ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಚಾರ್ಯರು, ವಿಭಾಗಗಳ ಮುಖ್ಯಸ್ಥರು ಹಾಗೂ ಕಾರ್ಯಾಧ್ಯಕ್ಷರೊಂದಿಗೆ ಇ-ಶಿಕ್ಷಣ ವೇದಿಕೆಯಲ್ಲಿ ವಿಡಿಯೊ ಸಂವಾದ ನಡೆಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 22ರಂದು ಕರೆ ನೀಡಿರುವ ‘ಜನತಾ ಕರ್ಫ್ಯೂ’ ಯಶಸ್ವಿಗೊಳಿಸಲು ಎಲ್ಲ ಸಂಸ್ಥೆಗಳು ಕ್ರಮ ವಹಿಸಬೇಕು. ಸಂಸ್ಥೆಗಳು ಎಲ್ಲ ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಕಳುಹಿಸಬೇಕು. ಕಚೇರಿ ಕೆಲಸಗಳು ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ಈಗಿನ ಗಂಭೀರತೆ ನೋಡಿದರೆ ವೈರಾಣುವಿನ ಭೀತಿ ಕಡಿಮೆಯಾಗಲು ಕಾಲಾವಕಾಶ ಬೇಕಾಗುವ ಸಾಧ್ಯತೆ ಇದೆ. ಹೀಗಾಗಿ, ಶೈಕ್ಷಣಿಕ ಚಟುವಟಿಕಗಳನ್ನು ಆನ್‌ಲೈನ್‌ನಲ್ಲಿ ಯೂಟ್ಯೂಬ್ ಲೈವ್, ಗೂಗಲ್ ಕ್ಲಾಸ್, ಜೂಮ್ ಆ್ಯಪ್‌ ಮೊದಲಾದ ವೇದಿಕೆಗಳ ಮುಖಾಂತರ ನಡೆಸಬೇಕು. ತರಗತಿ ಅನುಸಾರ ಮನೆಯಿಂದಲೇ ಪಾಠ ಹೇಳಿಕೊಡಬೇಕು. ಈ ನಿಟ್ಟಿನಲ್ಲಿ ಕಾಲೇಜು ಪ್ರಾಚಾರ್ಯರು ಕ್ರಮ ವಹಿಸಬೇಕು’ ಎಂದರು.

‘ಸಾರ್ವಜನಿಕರಿಗೆ ಅರಿವು ಮೂಡಿಡುವ ಕೆಲಸವನ್ನೂ ಮಾಡಬೇಕು. ಸಂಸ್ಥೆಗಳಲ್ಲಿ ಅರೋಗ್ಯ ಇಲಾಖೆ ನಿರ್ದೇಶನದಂತೆ ಸ್ವಚ್ಛತೆಗೆ ಗಮನ ಹರಿಸಬೇಕು. ಕಚೇರಿಗೆ ಬರುವವರು ಮಾಸ್ಕ್‌ ಧರಿಸಲು ತಿಳಿಸಬೇಕು. ಆಗಾಗ ಕೈತೊಳೆದುಕೊಳ್ಳಲು ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.

ಕುಲಸಚಿವ ಡಾ.ಆನಂದ ದೇಶಪಾಂಡೆ, ‘ವಿಶ್ವವಿದ್ಯಾಲಯದ ಇ-ಲರ್ನಿಂಗ್ ಕೇಂದ್ರದಿಂದ ನೇರ ಉಪನ್ಯಾಸಗಳ ಪ್ರಸಾರವನ್ನು ಯುಟ್ಯೂಬ್ ಚಾನೆಲ್ ಮೂಲಕ ಪಡೆಯಬಹದು ಹಾಗೂ ಫೇಸ್‌ಬುಕ್ ಲೈವ್ ಅನ್ನು ಸಹ ಉಪನ್ಯಾಸಕರು ಬಳಸಬಹುದು’ ಎಂದರು.

ಮೌಲ್ಯಮಾಪನ ಕುಲಸಚಿವ ಡಾ.ಸತೀಶ ಅಣ್ಣಿಗೇರಿ ಇದ್ದರು. 166 ಕಾಲೇಜುಗಳವರು ವಿಡಿಯೊ ಸಂವಾದದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT