ಶನಿವಾರ, ಅಕ್ಟೋಬರ್ 1, 2022
23 °C
ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಇಮ್ಮಡಿಸಿದ್ದು ಬೆಳಗಾವಿಯ ಅಧಿವೇಶನ, ಇಲ್ಲಿವೆ ಐತಿಹಾಸಿಕ ದಾಖಲೆಗಳು

ಬೆಳಗಾವಿ: ಶತಮಾನದ ಹೊಸ್ತಿಲಲ್ಲಿ ಕಾಂಗ್ರೆಸ್‌ ಅಧಿವೇಶನ

ಇಮಾಮ್‌ಹುಸೇನ್‌ ಗೂಡುನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ, ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬಾರದು’ ಎನ್ನುವ ನಿರ್ಣಯ ಅಂಗೀಕರಿಸಿದ್ದು ಬೆಳಗಾವಿಯ ಕಾಂಗ್ರೆಸ್‌ ಅಧಿವೇಶನದಲ್ಲಿ. 1924ಲ್ಲಿ ನಡೆದ ಆ ಅಧಿವೇಶನದ ಹೆಜ್ಜೆ ಗುರುತುಗಳು ಇಲ್ಲಿ ಇನ್ನೂ ಕಾಣಸಿಗುತ್ತವೆ.

ನಗರದ ಟಿಳಕವಾಡಿ ಪ್ರದೇಶದ ಬಯಲಲ್ಲಿ ನಡೆದ ಸ್ವಾತಂತ್ರ್ಯ ಯೋಧರ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಮಹಾತ್ಮ ಗಾಂಧಿ. ಗಾಂಧೀಜಿ ಅಧ್ಯಕ್ಷತೆ ವಹಿಸಿಕೊಂಡ ಮೊದಲ ಹಾಗೂ ಏಕಮಾತ್ರ ಅಧಿವೇಶನ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಅಧಿವೇಶನಕ್ಕೆ ಸಾಕ್ಷಿಯಾದ ನೆಲದಲ್ಲಿ ವೀರಸೌಧ ನಿರ್ಮಿಸಲಾಗಿದೆ. ಸಮಾವೇಶಗೊಳ್ಳಲು ಬಂದಿದ್ದ 30 ಸಾವಿರ ಮಂದಿಯ ಕುಡಿಯುವ ನೀರಿಗಾಗಿ ಬಾವಿ ಕೂಡ ತೋಡಲಾಗಿತ್ತು. ‘ಕಾಂಗ್ರೆಸ್‌ ಬಾವಿ’ ಎಂದೇ ಪ್ರಸಿದ್ಧವಾದ ಇದರಲ್ಲಿ ಈಗಲೂ ಶುದ್ಧ ನೀರಿದೆ.

ಅಧಿವೇಶನ ಅಂಗವಾಗಿ ಬೆಳಗಾವಿಯಲ್ಲೇ ತಾತ್ಕಾಲಿಕ ರೈಲು ನಿಲ್ದಾಣ ಕೂಡ ನಿರ್ಮಿಸಲಾಗಿತ್ತು. ಅದನ್ನು ಈಗ ಫೋಟೊದಲ್ಲಿ ಮಾತ್ರ ನೋಡಲು ಸಾಧ್ಯ.

ಗಾಂಧಿ ಅವರಿಂದ ‘ಕರ್ನಾಟಕದ ಸಿಂಹ’ ಎಂದೇ ಕರೆಸಿಕೊಂಡ ಹುದಲಿಯ ಗಂಗಾಧರರಾವ್‌ ದೇಶಪಾಂಡೆ ಪ್ರಯತ್ನದ ಫಲವಾಗಿ ಆ ಅಧಿವೇಶನ ನಡೆದಿತ್ತು. ಮೋತಿಲಾಲ್‌ ನೆಹರೂ, ಜವಾಹರಲಾಲ್‌ ನೆಹರೂ, ಮೌಲಾನಾ ಮಹಮ್ಮದ್‌ಅಲಿ, ಮೌಲಾನಾ ಶೌಕತ್‌ಅಲಿ, ಸರೋಜಿನಿ ನಾಯ್ಡು, ಲಾಲಾ ಲಜಪತ ರಾಯ್‌ ಅವರಂಥ ದಿಗ್ಗಜರ ತಂಡವೇ ಪಾಲ್ಗೊಂಡಿತ್ತು. ಕಪ್ಪು–ಬಿಳುಪಿನ ಕಾಲದ ಫೋಟೊಗಳು ಆ ರೋಮಾಂಚಕ ಕ್ಷಣಗಳನ್ನು ಈಗಲೂ ಹಿಡಿದಿಟ್ಟಿವೆ.

ಸ್ಮಾರಕವಾಗಿ ಅಭಿವೃದ್ಧಿ: ಕಾಂಗ್ರೆಸ್‌ ಅಧಿವೇಶನದ ಜಾಗವನ್ನು 2002ರಲ್ಲಿ ಸ್ಮಾರಕವಾಗಿ ಅಭಿವೃದ್ಧಿ ಮಾಡಲಾಗಿದೆ. ಸ್ವಾತಂತ್ರ್ಯಯೋಧ ಆರ್‌.ಎಚ್‌.ಕುಲಕರ್ಣಿ ನೇತೃತ್ವದಲ್ಲಿ ಹಲವು ಸೇನಾನಿಗಳೇ ಇದಕ್ಕೆ ವೀರಸೌಧ ರೂಪ ಕೊಟ್ಟಿದ್ದಾರೆ.

ಅತ್ಯಂತ ವಿರಳವಾದ, ಐತಿಹಾಸಿಕ ಕ್ಷಣದ ಹಲವು ಫೋಟೊಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಗಾಂಧಿ ಪ್ರತಿಮೆ ಹಾಗೂ ಮುಂಚೂಣಿ ನಾಯಕರ ಉಬ್ಬುಶಿಲ್ಪಗಳು ಗಮನ ಸೆಳೆಯುತ್ತವೆ.

ಗಾಂಧೀಜಿ ಬಾಲ್ಯ, ಅವರು ಕಲಿತ ಶಾಲೆ, ಬೆಳೆದ ಮನೆಯ ಚಿತ್ರಗಳಿವೆ. ಬೆಳಗಾವಿಯ ಮಣ್ಣು ಮುಟ್ಟಿ ನಮಸ್ಕರಿಸುವ ಅವರ ಫೋಟೊ ರೋಮಾಂಚನ ಉಂಟು ಮಾಡುವಂತಿದೆ. ಗಾಂಧಿ ಅವರೇ ‘ಗಾಂಧಿ ಟೋ‍ಪಿ’ ಧರಿಸಿದ ಏಕಮಾತ್ರ ಚಿತ್ರ ಲಭ್ಯವಿದ್ದು, ಅದನ್ನೂ ಇಲ್ಲಿ ಕಾಣಬಹುದು.

ಬೆಳಗಾವಿಯ ಅಧಿವೇಶನದಲ್ಲಿ ಪಾಲ್ಗೊಂಡ ಸ್ವಾತಂತ್ರ್ಯ ಯೋಧರ ಮನೆಗಳಿಂದಲೇ ಈ ಎಲ್ಲ ಚಿತ್ರಗಳನ್ನು ಸಂಗ್ರಹಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು