ಸೋಮವಾರ, ಸೆಪ್ಟೆಂಬರ್ 27, 2021
21 °C
ಹಿಂದಿನ ಶಾಸಕರ ಅವಧಿಯಲ್ಲಿ ಭ್ರಷ್ಟಾಚಾರ ಆರೋಪ

ರಾಮದುರ್ಗ: ಸಾಮಾನ್ಯ ಸಭೆಯಲ್ಲಿ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮದುರ್ಗ: ಕಳೆದ ಹತ್ತು ವರ್ಷಗಳಲ್ಲಿ ಹಿಂದಿನ ಶಾಸಕರ ಅವಧಿಯಲ್ಲಿ ಸಾಕಷ್ಟು ನುಂಗಿ ಹಾಕಲಾಗಿದೆ ಎಂದು ಬಿಜೆಪಿ ಸದಸ್ಯರೊಬ್ಬರು ಆರೋಪಿಸಿದಾಗ ಕಾಂಗ್ರೆಸ್‌ನ ಸದಸ್ಯರು ಗದ್ದಲ ಮಾಡಿದ ಘಟನೆ ಸೋಮವಾರ ಜರುಗಿತು.

ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಮಶಾನದಲ್ಲಿ ವಿದ್ಯುತ್‌ ಬಲ್ಬ್‌ಗಳು ಉರಿಯುತ್ತಿಲ್ಲ. ಅವುಗಳನ್ನು ಅಳವಡಿಸಬೇಕು ಎಂದು ಕಾಂಗ್ರೆಸ್‌ನ ಹುಸೇನಸಾಬ ಐನಾಪೂರ ಸಭೆಯ ಗಮನ ಸೆಳೆಯುತ್ತಿದ್ದಂತೆ, ಬಿಜೆಪಿಯ ರಘುನಾಥ ರೇಣಕೆ ಹಿಂದಿನ ಹತ್ತು ವರ್ಷಗಳಲ್ಲಿ ಕಾಂಗ್ರೆಸ್‌ಆಡಳಿತದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಈಗ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಗದ್ದಲ ಎದ್ದಿತು.

ಬಿಜೆಪಿಯವರು ವಿನಾಕಾರಣ ಸಭೆಯನ್ನು ಹಾಳು ಮಾಡಲು ರಾಜಕೀಯ ಮಾಡುತ್ತಿದ್ದಾರೆ. ಹಿಂದಿನ ಸದಸ್ಯರು ಲೂಟಿ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅದನ್ನು ಸಾಬೀತು ಪಡಿಸಬೇಕು ಎಂದು ಹುಸೇನಸಾಬ ಐನಾಪೂರ ಕೂಗಾಡಿದರು.

‘ಸಭೆಯಲ್ಲಿಯೇ ಪಕ್ಷದ ಶಾಸಕರ ಕಾರ್ಯವನ್ನು ಪ್ರಶ್ನಿಸಿದರೆ ನಾವು ಸುಮ್ಮನಿರಲ್ಲ. ಲೂಟಿ ಆಗಿರುವುದನ್ನು ಸಾಬೀತು ಪಡಿಸುವ ತನಕ ಸಭೆ ನಡೆಯಲು ಬಿಡುವುದಿಲ್ಲ’ ಎಂದು ಹುಸೇನಸಾಬ ಐನಾಪೂರ ಮತ್ತು ಇತರ ಕಾಂಗ್ರೆಸ್‌ ಸದಸ್ಯರು ಏರು ದನಿಯಲ್ಲಿ ಒತ್ತಾಯಿಸಿದರು. ಕೈಕೈ ಮಿಲಾಯಿಸುವ ಹಂತಕ್ಕೂಕೆಲವರು ತಲುಪಿದರು.

ಸಭೆಯಲ್ಲಿದ್ದ ಶಾಸಕ ಮಹಾದೇವಪ್ಪ ಮಾತ್ರ ಮೌನ ಮುರಿಯಲಿಲ್ಲ. ಪುರಸಭೆ ಸಿಬ್ಬಂದಿಯೇ ಗದ್ದಲವನ್ನು ಹತೋಟಿಗೆ ತಂದರು.

‘ಸ್ಮಾಶಾನದಲ್ಲಿ ಒಂದು ಲೈಟ್‌ಹಾಕಿಸಲು ಆಗುತ್ತಿಲ್ಲ. ರಸ್ತೆಗೆ ಡಾಂಬರ್‌ ಹಾಕಿಸುವುದು ದೂರದ ಮಾತು. ಕನಿಷ್ಠ ಮಣ್ಣು ಹಾಕಿಸಲು ಸಾಧ್ಯವಾಗುತ್ತಿಲ್ಲ. ಹಿಂದಿನ ಅವಧಿಯ ಶಾಸಕರು ಮತ್ತು ಈಗಿನ ಶಾಸಕರು ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಮೊದಲು ಅಭಿವೃದ್ಧಿ ಕಡೆಗೆ ಗಮನ ನೀಡಿ’ ಎಂದು ಕಾಂಗ್ರೆಸ್‌ ಸದಸ್ಯರಾದ ಇಮಾಮ್‌ಸಾಬ ಕಲಾದಗಿ, ರಾಜೇಶ್ವರಿ ಮೆಟಗುಡ್ಡ, ದುರಗಪ್ಪ ಬಂಡಿವಡ್ಡರ, ಶಂಕರ ಸೂಳಿಭಾವಿ ಪರೋಕ್ಷವಾಗಿ ಕುಟುಕಿದರು.

ಪುರಸಭೆ ಅಧ್ಯಕ್ಷ ಶಂಕರ ಬೆನ್ನೂರ, ಉಪಾಧ್ಯಕ್ಷ ರಾಘವೇಂದ್ರ ದೊಡಮನಿ ಸಭೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.