ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ

ವಿಧಾನಪರಿಷತ್ ಚುನಾವಣೆ: ಏಜೆಂಟರ ಸಭೆ
Last Updated 4 ಡಿಸೆಂಬರ್ 2021, 13:34 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಧಾನಪರಿಷತ್ ಚುನಾವಣಾ ಅಭ್ಯರ್ಥಿಗಳ ಮತಗಟ್ಟೆ ಏಜೆಂಟರು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ್ ತಿಳಿಸಿದರು.

ಏಜೆಂಟರೊಂದಿಗೆ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಮತ ಚಲಾಯಿಸುವ ಉದ್ದೇಶಕ್ಕಾಗಿ ಚುನಾವಣಾಧಿಕಾರಿಯು ಮತಪತ್ರದೊಡನೆ ನೀಡುವ ನೇರಳೆ ಬಣ್ಣದ ಪೆನ್‌ ಅನ್ನು ಮಾತ್ರ ಬಳಸಬೇಕು. ಬೇರಾವುದೇ ರೀತಿಯ ಪೆನ್‌, ಬಾಲ್ ಪಾಯಿಂಟ್ ಪೆನ್‌ ಅಥವಾ ಗುರುತು ಮಾಡುವ ಯಾವುದೇ ಇತರ ಸಾಧನ ಬಳಸಿ ಮತ ಚಲಾಯಿಸಿದರೆ, ಆ ಮತವನ್ನು ಅಸಿಂಧು ಎಂದು ಪರಿಗಣಿಸಲಾಗುವುದು’ ಎಂದರು.

‘ಮೊದಲನೇ, ಪ್ರಾಶಸ್ತ್ಯವಾಗಿ ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರಿನ ಮುಂದೆ ಒದಗಿಸಲಾಗಿರುವ ಪ್ರಾಶಸ್ತ್ಯ ಕ್ರಮ ಎಂದು ಗುರುತು ಮಾಡಲಾಗಿರುವ ಅಂಕಣದಲ್ಲಿ ಅಂಕಿ ‘1’ನ್ನು ಬರೆದು ಮತ ನೀಡಿಬೇಕು. ಈ ಅಂಕಿಯನ್ನು ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು’ ಎಂದು ತಿಳಿಸಿದರು.

ಖಚಿತಪಡಿಸಿಕೊಳ್ಳಬೇಕು:

‘ಉಳಿದ ಅಭ್ಯರ್ಥಿಗಳಿಗೆ ಮುಂದಿನ ಪ್ರಾಶಸ್ತ್ರಗಳನ್ನು ಗುರುತು ಹಾಕಲು ಅಂತಹ ಅಭ್ಯರ್ಥಿಗಳ ಹೆಸರುಗಳ ಮುಂದೆ ಒದಗಿಸಲಾದ ಪ್ರಾಶಸ್ತ್ಯ ಕ್ರಮ ಎಂಬ ಅಂಕಣದಲ್ಲಿ 2, 3, 4, 5 ಎಂದು ಪ್ರಾಶಸ್ತ್ಯದ ಕ್ರಮದಲ್ಲಿ ಗುರುತು ಹಾಕುವ ಮೂಲಕ ಮತ ನೀಡಬಹುದು’ ಎಂದು ಮಾಹಿತಿ ನೀಡಿದರು.

‘ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಕೇವಲ ಒಂದು ಅಂಕಿಯನ್ನು ಮಾತ್ರ ಗುರುತು ಹಾಕಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅದೇ ಅಂಕಿಯನ್ನು ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳ ಮುಂದೆ ಗುರುತು ಹಾಕಿಲ್ಲ ಎನ್ನುವುದನ್ನೂ ಖಾತ್ರಿ ಮಾಡಿಕೊಳ್ಳಬೇಕು. ಪ್ರಾಶಸ್ತ್ಯವನ್ನು ಅಂಕಿಗಳ ಮೂಲಕ 1, 2, 3 ರೀತಿಯಲ್ಲಿ ಮಾತ್ರ ಹಾಕಬೇಕು. ಒಂದು, ಎರಡು, ಮೂರು ಎಂದು ಅಕ್ಷರಗಳ ರೂಪದಲ್ಲಿ ಬರೆಯಬಾರದು’.

‘ಅಂಕಿಗಳನ್ನು ರೋಮನ್ ಅಂಕಿಗಳ ರೂಪದಲ್ಲಿ ಅಥವಾ ಸಂವಿಧಾನದ 8ನೇ ಅನುಸೂಚಿಯಲ್ಲಿ ಮಾನ್ಯ ಮಾಡಲಾಗಿರುವ ದೇಶದ ಯಾವುದೇ ಭಾಷೆಯಲ್ಲಿ ಬಳಸಲಾಗವ ಅಂಕಿಗಳ ರೂಪದಲ್ಲಿ ಗುರುತು ಹಾಕಬಹುದಾಗಿದೆ. ಮತಪತ್ರದ ಮೇಲೆ ಮತದಾರ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬಾರದು. ಸಹಿ ಅಥವಾ ಇನ್ಶಿಯಲ್, ಹೆಬ್ಬೆಟ್ಟಿನ ಗುರುತು ಹಾಕಬಾರದು. ಒಂದು ವೇಳೆ ಹಾಕಿದ್ದರೆ ಆ ಮತ ಅಸಿಂಧು ಎಂದು ಪರಿಗಣಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಮತದಾರರ ಪ್ರಾಶಸ್ತ್ಯವನ್ನು ಸೂಚಿಸುವುದಕ್ಕಾಗಿ ಅವರ ಆಯ್ಕೆಯ ಅಭ್ಯರ್ಥಿಗಳ ಹೆಸರಿನ ಮುಂದೆ ಅಂಕಿಯನ್ನಲ್ಲದೆ ಇನ್ನಾವುದೇ ಚಿಹ್ನೆ ಅಥವಾ ಗುರುತು ಹಾಕಬಾರದು. ಹಾಕದಲ್ಲಿ ಆ ಮತಪತ್ರವನ್ನು ತಿರಸ್ಕರಿಸಲಾಗುವುದು’ ಎಂದು ತಿಳಿಸಿದರು.

‘ಮತಪತ್ರವನ್ನು ಒಂದು ಎಂದು ಪರಿಗಣಿಸುವುದಕ್ಕಾಗಿ, ಅಭ್ಯರ್ಥಿಗಳ ಪೈಕಿ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಅಂಕಿ ‘1’ನ್ನು ಹಾಕುವ ಮೂಲಕ ಮತದಾರ ಮೊದಲ ಪ್ರಾಶಸ್ತ್ಯ ಸೂಚಿಸುವುದು ಅವಶ್ಯಕವಾಗಿದೆ. 2ನೇ ಅಥವಾ ನಂತರದ ಪ್ರಾಶಸ್ತ್ಯವನ್ನು ಸೂಚಿಸಬಹುದಾಗಿದೆ ಅಥವಾ ಸೂಚಿಸದೆ ಇರಲೂಬಹುದು’.

‘ದೃಷ್ಟಿ ದೋಷವುಗಳ್ಳವರು, ದುರ್ಬಲರು ಅಥವಾ ಅನಕ್ಷರಸ್ಥ ಮತದಾರರು ಮತದಾನ ವೇಳೆ ಸಹಾಯಕ್ಕಾಗಿ ಜೊತೆಗಾರ ಅಗತ್ಯವಿದ್ದಲ್ಲಿ ಡಿ.6ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ ವಣಕ್ಯಾಳ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಹಾಗೂ ಅಭ್ಯರ್ಥಿಗಳ ಪರ ಏಜೆಂಟರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT