ಸೋಮವಾರ, ಜನವರಿ 17, 2022
21 °C
ಬಾತ್‌ರೂಂನಲ್ಲಿ ಬಿದ್ದು ಗಾಯಗೊಂಡಿದ್ದ ಶ್ರೀಗಳು

ಸಿದ್ದೇಶ್ವರ ಸ್ವಾಮೀಜಿಗೆ ಚಿಕಿತ್ಸೆ ಮುಂದುವರಿಕೆ: ಆರೋಗ್ಯ ವಿಚಾರಿಸಿದ ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಬಸವನಾಳಗಡ್ಡೆಯಲ್ಲಿರುವ ಭಕ್ತರಾದ ಮಗದುಮ್ ಅವರ ತೋಟದ ಮನೆಯಲ್ಲಿ ಸೋಮವಾರ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

‘ಶ್ರೀಗಳ ಬಲ ಭುಜ ಹಾಗೂ ತೊಡೆಯ ಮೇಲ್ಭಾಗದ ಮೂಳೆಯಲ್ಲಿ ಮುರಿತ ಕಂಡುಬಂದಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಶ್ರೀಗಳು ಅದಕ್ಕೆ ಸಮ್ಮತಿಸಿಲ್ಲ. ಲವಲವಿಕೆಯಿಂದ ಇದ್ದೇನೆ; ಶಸ್ತ್ರಚಿಕಿತ್ಸೆ ಮಾಡದೆಯೂ ಗುಣಪಡಿಸುವ ಮಾರ್ಗ ತಿಳಿಸುವಂತೆ ವೈದ್ಯರಿಗೆ ತಿಳಿಸಿದ್ದಾರೆ. ವೈದ್ಯರು ಅವರ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಪೂಜಾ ಕೈಂಕರ್ಯದಲ್ಲಿ ಎಂದಿನಂತೆ ತೊಡಗಿದ್ದಾರೆ. ಆಹಾರ ಸೇವನೆ ಮಾಡುತ್ತಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ದಿನಗಳವರೆಗೆ ಅವರು ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಈ ನಡುವೆ, ಶ್ರೀಗಳು ಗಾಯಗೊಂಡಿರುವ ಸುದ್ದಿ ತಿಳಿದು ಭಕ್ತ ಸಮೂಹ ಆಘಾತ ಮತ್ತು ಆತಂಕಕ್ಕೆ ಒಳಗಾಗಿದೆ. ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸಿ ಜನಪ್ರತಿನಿಧಿಗಳು, ರಾಜಕಾರಣಿಗಳು, ಅನುಯಾಯಿಗಳು ಮತ್ತು ಭಕ್ತರು ಟ್ವೀಟ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದಾರೆ.

‘ಆಧ್ಮಾತ್ಮಿಕ ಗುರುಗಳಾದ ಸಿದ್ದೇಶ್ವರ ಸ್ವಾಮೀಜಿ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಗಾಯಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ಶ್ರೀಗಳೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಶ್ರೀಗಳು, ಈ ಹಿಂದೆ 2 ಬಾರಿ ಪೆಟ್ಟು ಬಿದ್ದು ಮೂಳೆ ಮುರಿದಾಗಲೂ ಶಿಷ್ಯರು ಹಾಗೂ ವೈದ್ಯರ ಮಾತಿಗೆ ಮನ್ನಣೆ ಕೊಡದೆ ಅಲೋಪತಿ ಔಷಧಿಗಳಿಂದ ದೂರವಿದ್ದರು. ‘ಶರೀರದಲ್ಲಿ ತಪ್ಪುಗಳಾದರೆ ಅದನ್ನು ಸರಿಪಡಿಸುವ ಶಕ್ತಿ, ಸಾಮರ್ಥ್ಯ ಸ್ವತಃ ಶರೀರಕ್ಕೆ ಇದೆ’ ಎಂದು ಹೇಳಿದ್ದರು. ನಿಸರ್ಗ ಚಿಕಿತ್ಸೆಯಲ್ಲಿ ಅವರು ನಂಬಿಕೆ ಇಟ್ಟಿದ್ದಾರೆ. ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಪ್ರೀತಿಗೆ ಮಣಿದು ಆಸ್ಪತ್ರೆಗೆ ದಾಖಲಾಗಲು ಸಮ್ಮತಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.

ಈ ನಡುವೆ, ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರು ಬಸವಲಿಂಗ ಸ್ವಾಮೀಜಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದು, ‘ಶ್ರೀಗಳ ಬಲಗಾಲಿಗೆ ಸ್ವಲ್ಪ ಪೆಟ್ಟಾಗಿದೆ. ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರವೇ ಗುಣಮುಖವಾಗಲಿದ್ದರೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಯಾರೂ ಗಾಬರಿಯಾಗಬಾರದು. ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ಕಿವಿಕೊಡಬಾರದು’ ಎಂದು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು