ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಗುಂದ: 7 ವರ್ಷವಾದರೂ ಪೂರ್ಣಗೊಳ್ಳದ ಕಾಮಗಾರಿ

ಹಳ್ಳ ಹಿಡಿದ ಯೋಜನೆ, ಜನರಿಗೆ ತೊಂದರೆ,
Last Updated 11 ಮಾರ್ಚ್ 2022, 20:00 IST
ಅಕ್ಷರ ಗಾತ್ರ

ಹಂದಿಗುಂದ (ಬೆಳಗಾವಿ): ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಜಾರಿಗೆ ತಂದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಇಲ್ಲಿ ಅನುಷ್ಠಾನಗೊಳ್ಳದೆ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

ರಾಯಬಾಗ ತಾಲ್ಲೂಕಿನ ಸುಲ್ತಾನಪುರ, ಕಪ್ಪಲಗುದ್ದಿ, ಪಾಲಬಾವಿ, ಮರಾಕುಡಿ ಹಾಗೂ ಹಂದಿಗುಂದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ₹ 20.50 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.ಕೃಷ್ಣಾ ನದಿಯಿಂದ ನೀರು ತಂದು ಪೂರೈಸುವುದು ಯೋಜನೆ. ತ್ವರಿತವಾಗಿ ಪೂರ್ಣಗೊಳಿಸಲು 2೦15ರ ಫೆ.2ರಂದೇ ಆದೇಶ ನೀಡಲಾಗಿತ್ತು. ಗುತ್ತಿಗೆದಾರರು ₹ 18 ಕೋಟಿ ವೆಚ್ಚದ ಕೆಲಸ ಪೂರ್ಣಗೊಳಿಸಿದ್ದಾರೆ; ಹಣ ಸಂದಾಯವಾಗಿದೆ. ₹ 2.50 ಕೋಟಿ ಕಾಮಗಾರಿ ಉಳಿದಿದೆ.

ಈ ಹಿಂದೆ ಪಾಲಬಾವಿಯಿಂದ ತೇರದಾಳ ಮಾರ್ಗವಾಗಿ ಹಳಂಗಳಿ ಕೃಷ್ಣಾ ನದಿಯಲ್ಲಿ ಜಾಕ್‌ವೆಲ್‌ ನಿರ್ಮಿಸಿದ್ದು, ಬಾಗಲಕೋಟೆ ಜಿಲ್ಲೆಯ ತೇರದಾಳ ಪುರಸಭೆಗೆ ನೀರು ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಜಾಕ್‌ವೆಲ್‌ ಸ್ಥಳಾಂತರಿಸಬೇಕು ಎಂದು ಒತ್ತಡ ಹೇರಲಾಗಿದೆ. ಇದರಿಂದಾಗಿ ವಿಳಂಬವಾಗಿದೆ ಎನ್ನಲಾಗಿದೆ. ಗಡಿ ಗ್ರಾಮಗಳ ಜನರು ನೀರಿಗೆ ಪರದಾಡುವಂತಾಗಿದೆ.

‘ತಮದಡ್ಡಿ ಭಾಗದಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ, ತೇರದಾಳ ಪಟ್ಟಣದ ಸರ್ವೇ ನಂ.552ರಲ್ಲಿ ಅರಣ್ಯ ಪ್ರದೇಶ ಇರುವುದರಿಂದ ಅರಣ್ಯ ಇಲಾಖೆ ಅನುಮತಿಗಾಗಿ ಈ ಯೋಜನೆ ವಿಳಂಬವಾಗಿದೆ’ ಎಂದು ರಾಯಬಾಗ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗ ಇಲಾಖೆಯ ಎಇಇ ಪದ್ಮಜಾ ಪಾಟೀಲ ತಿಳಿಸುತ್ತಾರೆ.

ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಯೋಜನೆಯೊಂದು ಹಳ್ಳ ಹಿಡಿದಿದೆ ಎನ್ನುವುದು ಜನರ ದೂರಾಗಿದೆ.

ಸುಲ್ತಾನಪುರದಲ್ಲಿ ಜಲಸಂಗ್ರಹಗಾರ, ಟ್ಯಾಂಕ್ ಹಾಗೂ ಶುದ್ಧೀಕರಣ ಘಟಕ ಪೂರ್ಣಗೊಂಡರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಟ್ಯಾಂಕ್‌ ಇದ್ದರೂ ನೀರಿಲ್ಲ. ಪರಿಣಾಮ ಅದರಿಂದ ಅನುಕೂಲವೇನೂ ಆಗಿಲ್ಲ. ಕೆಲವು ಕಡೆ ಇನ್ನೂ ಪೈಪ್‌ಗಳ ಜೋಡಣೆ ನಡೆದಿಲ್ಲ. ಕೆಲವು ಪೈಪ್‌ಗಳು ಎಲ್ಲೆಂದರಲ್ಲಿ ಬಿದ್ದು ಹಾಳಾಗುತ್ತಿವೆ.

‘ಬಾಗಲಕೋಟೆ ಜಿಲ್ಲೆಯ ತೇರದಾಳ ಉಪ ಕೇಂದ್ರದಿಂದ ತಮದಡ್ಡಿ ಜಾಕ್‌ವೆಲ್‌ಗೆ ಒಂದು ಲೈನ್‌ ಹೋಗುವುದಿದೆ. ಅರಣ್ಯ ಪ್ರದೇಶವಿದ್ದು ಕಾಮಗಾರಿಗೆ ಅನುಮತಿ ಕೋರಲಾಗಿದೆ. ಸಿಕ್ಕ ಕೂಡಲೇ ಕೆಲಸ ಪ್ರಾರಂಭಿಸಲಾಗುವುದು‘ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ರಾಯಬಾಗ ಉಪ ವಿಭಾಗದ ಜೆಇ ಎಸ್.ಎಸ್. ಕಂದಗಲ ‘ಪ್ರಜಾವಾಣಿ’ಗೆ ತಿಳಿಸಿದರು.

****

ಈ ಐದು ಹಳ್ಳಿಗಳಿಗೆ ನೀರೊದಗಿರುವ ಯೋಜನೆ ಕುರಿತು ಇಲಾಖೆಯ ಅಧಿಕಾರಿ ಜೊತೆ ಮಾತನಾಡಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಲಾಗುವುದು.

–ಪಿ. ರಾಜೀವ, ಶಾಸಕ, ಕುಡಚಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT