ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಥಣಿ: ಕಾಗವಾಡ ಶಾಸಕ ಶ್ರೀಮಂತ ಪಾಟೀಲರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

Published : 27 ಜೂನ್ 2022, 13:50 IST
ಫಾಲೋ ಮಾಡಿ
Comments

ಅಥಣಿ (ಬೆಳಗಾವಿ ಜಲ್ಲೆ): ನಿಮ್ಮ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದಾಗ ನಿಂದಿಸಿ ಕಳಿಸಿದ್ದೀರಿ. ಈಗ ಏಕೆ ನಮ್ಮೂರಿಗೆ ಬಂದಿದ್ದೀರಿ? ನಿಮ್ಮಿಂದ ಇದುವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಿಲ್ಲ..!

ಅಥಣಿ ತಾಲ್ಲೂಕಿನ ಕಿರಣಗಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರನ್ನು ಗ್ರಾಮಸ್ಥರೇ ತರಾಟೆ ತೆಗೆದಕೊಂಡ ರೀತಿ ಇದು.

ವಿವಿಧ ಕಾಮಗಾರಿಗೆ ಚಾಲನೆ ನೀಡಲು ಶಾಸಕರು ಕಿರಣಗಿಗೆ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಶಾಸಕರ ಮೇಲೆ ಹರಿಹಾಯ್ದರು.

ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಕಿರಣಗಿ ಗ್ರಾಮಸ್ಥರು, ಕೆಂಪವಾಡ ಕಾರ್ಖಾನೆಯಲ್ಲಿರುವ ಶ್ರೀಮಂತ ಪಾಟೀಲ ಕಚೇರಿಗೆ ತೆರಳಿದ್ದರು. ‘ಇಲ್ಲೇಕೆ ನಿಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದೀರಿ?’ ಎಂದು ಶಾಸಕರ ಆಪ್ತ ಸಹಾಯಕ ನಿಂದಿಸಿದ್ದರಿಂದ ಗ್ರಾಮಸ್ಥರು ಅಸಮಾಧಾನಗೊಂಡು ಮರಳಿದ್ದರು.

‘ನೀರಿನ ಸಮಸ್ಯೆ ಬಗೆಹರಿಸುವಂತೆ ನಿಮ್ಮ ಬಳಿ ಬಂದಾಗ, ಆಪ್ತ ಸಹಾಯಕ ನಮ್ಮನ್ನು ನಿಂದಿಸಿದ್ದಾರೆ. ನಮ್ಮೂರಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ಅದನ್ನು ಯಾವಾಗ ಬಗೆಹರಿಸುತ್ತೀರಿ?’ ಎಂದು ಪ್ರಶ್ನಿಸಿದರು.

‘ನೀವು ಶಾಸಕರಾದ ಮೇಲೆ ಯಾವುದೇ ಅಭಿವೃದ್ಧಿ ಕೆಲಸ ಕೈಗೊಂಡಿಲ್ಲ’ ಎಂದೂ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ, ‘ಕೋವಿಡ್‌–19 ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸಮರ್ಪಕ ಅನುದಾನ ಬಂದಿಲ್ಲ. ಹಂತ–ಹಂತವಾಗಿ ಅಭಿವೃದ್ಧಿ ಕೆಲಸ ಕೈಗೊಳ್ಳುತ್ತೇನೆ’ ಎಂದು ಸಮಜಾಯಿಷಿ ನೀಡಲು ಮುಂದಾದರು. ಆದರೆ, ಗ್ರಾಮಸ್ಥರು ಪಟ್ಟು ಸಡಿಲಿಸಲಿಲ್ಲ.

ಕೊನೆಗೆ ಗ್ರಾಮದ ಮುಖಂಡರು ಪರಿಸ್ಥಿತಿ ತಿಳಿಗೊಳಿಸಿ, ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT