ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಚುನಾವಣೆಗೆ ಶುಕ್ರವಾರ ನಡೆದ ಮತದಾನದ ವೇಳೆ ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ ತೂರಿದ್ದು ಬಹುತೇಕ ಮತಗಟ್ಟೆಗಳಲ್ಲಿ ಕಂಡುಬಂತು.
ಕೋವಿಡ್ ಮಾರ್ಗಸೂಚಿ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬರಲಿಲ್ಲ. ಮತದಾರರು ಅಲ್ಲಲ್ಲಿ ಮಾಸ್ಕ್ ಕೂಡ ಧರಿಸದೆ ಬಂದಿದ್ದರು. ಪರಸ್ಪರ ಅಂತರವನ್ನೂ ಕಾಯ್ದುಕೊಳ್ಳದೆ ಸರದಿ ಸಾಲಿನಲ್ಲಿ ನಿಂತಿದ್ದು ಕೂಡ ಕಂಡುಬಂದಿತು.
ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು. ಅವರು, ಮತದಾರರನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸುವುದು ಹಾಗೂ ಸ್ಯಾನಿಟೈಸರ್ ನೀಡುವ ಕೆಲಸ ಮಾಡಿದರು. ಪೊಲೀಸರು ಭದ್ರತೆಯ ಕಡೆಗೆ ನಿಗಾ ವಹಿಸಿದ್ದರು. ಆದರೆ, ಕೋವಿಡ್ ನಿಯಮಾವಳಿ ಪಾಲನೆಗೆ ಗಮನಹರಿಸದಿರುವುದು ಸಾಮಾನ್ಯವಾಗಿತ್ತು.
ಮತಗಟ್ಟೆಗಳ ನೂರು ಮೀಟರ್ ಹೊರಗಿನ ಸ್ಥಳಗಳಲ್ಲಿ ಅಭ್ಯರ್ಥಿಗಳ ಕಡೆಯವರು ಅಥವಾ ರಾಜಕೀಯ ಪಕ್ಷದವರು ಟೇಬಲ್‌ಗಳನ್ನು ಹಾಕಿಕೊಂಡು ಕುಳಿತು ಮತದಾರರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದರು. ಈ ವೇಳೆಯೂ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಯಿತು. ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರು ಅಥವಾ ಗೃಹರಕ್ಷಕ ದಳದ ಸಿಬ್ಬಂದಿ ಅಸಹಾಯಕ ಸ್ಥಿತಿಯಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.