ನೀತಿ ಸಂಹಿತೆ ಉಲ್ಲಂಘನೆ: ರಾವುತ್ ವಿಚಾರಣೆ ಮುಂದೂಡಿಕೆ

ಬೆಳಗಾವಿ: ಮಹಾರಾಷ್ಟ್ರದ ರಾಜ್ಯಸಭೆ ಸದಸ್ಯ ಹಾಗೂ ಶಿವಸೇನೆ ರಾಜ್ಯ ವಕ್ತಾರ ಸಂಜಯ್ ರಾವುತ್ ಸೇರಿ ನಾಲ್ವರ ಮೇಲಿನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆಯನ್ನು, ಇಲ್ಲಿನ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯ 2023ರ ಫೆ. 7ಕ್ಕೆ ಮುಂದೂಡಿದೆ.
2018ರ ಮಾರ್ಚ್ 30ರಂದು ಇಲ್ಲಿನ ಭಾಗ್ಯ ನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ವೆಬ್‌ಸೈಟ್‌ವೊಂದರ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಸಂಜಯ ರಾವುತ್ ಕನ್ನಡಿಗರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದರು.
ರಾವುತ್, ಬೆಳಗಾವಿಯ ಪತ್ರಕರ್ತರಾದ ಕಿರಣ್ ಠಾಕೂರ, ಪ್ರಕಾಶ ಬಿಳಗೋಜಿ, ರಾಮನಾಥ ಮಂಗಲ ಕಾರ್ಯಾಲಯದ ಮಾಲೀಕ ಸುರೇಂದ್ರ ನಾಯಿಕ ವಿರುದ್ಧ ಟಿಳಕವಾಡಿ ಠಾಣೆ ಪೊಲೀಸರು ‘ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ’ ದೂರು ದಾಖಲಿಸಿದ್ದರು. ಡಿ.1ರಂದು ವಿಚಾರಣೆಗೆ ಹಾಜರಾಗುವಂತೆ ನಾಲ್ವರಿಗೂ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು.
ಆರೋಪಿಗಳ ಪರ ವಕಾಲತ್ತು ವಹಿಸಿದ ವಕೀಲರಾದ ಶಾಮಸುಂದರ ಪತ್ತಾರ್, ಮಾರುತಿ ಕಾಮನ್ನಾಚೆ, ಶ್ರೀಧರ ಕುಲಕರ್ಣಿ, ಭೈರು ಠಕ್ಕೇಕರ್ ಅವರು, ‘ವೈಯಕ್ತಿಕ ಕಾರಣದಿಂದ ನಮ್ಮ ಕಕ್ಷಿದಾರರಿಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಸಿಆರ್‌ಪಿಸಿ 205 ಸೆಕ್ಷನ್ ಪ್ರಕಾರ ವಿಚಾರಣೆಗೆ ಹಾಜರಾಗಲು ಮತ್ತೆ ಕಾಲಾವಕಾಶ ಕೊಡಬೇಕು’ ಎಂದು ಅರ್ಜಿ ಸಲ್ಲಿಸಿದರು. ಇದಕ್ಕೆ ನ್ಯಾಯಾಧೀಶರು ಸಮ್ಮತಿ ನೀಡಿ ಮುಂದಿನ ವಿಚಾರಣೆ ದಿನಾಂಕ ನಿಗದಿಗೊಳಿಸಿ ಆದೇಶಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.