ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕಾಗೋ ಭಾಷಣ ಯುವಕರಿಗೆ ದಿಕ್ಸೂಚಿ: ಸೂಲಿಬೆಲೆ

ಮತ್ತೊಮ್ಮೆ ದಿಗ್ವಿಜಯ ಯಾತ್ರೆ;
ಫಾಲೋ ಮಾಡಿ
Comments

ಬೆಳಗಾವಿ: ಒಂದು ಭಾಷಣಕ್ಕೆ 125 ವರ್ಷದ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದರೆ ಆ ಭಾಷಣದ ಮಹತ್ವ ಅರ್ಥೈಸಿಕೊಳ್ಳಬಹುದಾಗಿದೆ. ಈ ಭಾಷಣ ವಿವೇಕಾನಂದರ ಶ್ರೇಷ್ಠ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಯುವಾ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ‘ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ಜಗತ್ತಿನ ಶ್ರೇಷ್ಠ ಭಾಷಣವಾಗಿದ್ದು, ಯುವಕರಿಗೆ ದಿಕ್ಸೂಚಿಯಾಗಿದೆ. ವಿವೇಕಾನಂದರು ಹೊಳೆಯುವ ಸೂರ್ಯ, ಶಕ್ತಿಯ ಕೇಂದ್ರ ಎಂದರು.

ವಿವೇಕಾನಂದರು ಶಿಕಾಗೋ ನಂತರ ಬೆಳಗಾವಿಗೆ ಆಗಮಿಸಿದ್ದರು. 1892ರ ಅಕ್ಟೋಬರ್‌ 16ರಿಂದ 27ರವರೆಗೆ ಇಲ್ಲಿ ವಾಸವಾಗಿದ್ದರು. ಇದೇ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ರಥಯಾತ್ರೆ ಸಂಚರಿಸುತ್ತಿದೆ ಎಂಬುದು ಸಂತಸದ ಸಂಗತಿ. ರಥಯಾತ್ರೆ 28ರಂದು ಬಾಗಲಕೋಟೆಯಲ್ಲಿ ಮುಕ್ತಾಯವಾಗಲಿದೆ. ಈ ನಡುವೆ ಗೋವಾದಲ್ಲಿಯೂ 5 ದಿನಗಳ ಕಾಲ ರಥಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ. ರಾಜಪ್ಪ ಉದ್ಘಾಟಿಸಿ ಮಾತನಾಡಿ, ಸೂರ್ಯನ ಕಿರಣಗಳು ಎಲ್ಲ ಸ್ಥಳಗಳಲ್ಲಿ ಬಿದ್ದರೂ ಶುಭ್ರವಾಗೆ ಇರುತ್ತವೆ. ಅದೇ ರೀತಿ ವಿವೇಕಾನಂದರ ಶಿಕಾಗೋ ಭಾಷಣ ಘನತೆ ಕಾಯ್ದುಕೊಂಡಿದೆ ಎಂದು ಹೇಳಿದರು.

ಬದುಕನ್ನು ಪ್ರೀತಿಸಬೇಕೆಂದರೆ ಮೊದಲು ಅರ್ಥೈಸಿಕೊಳ್ಳಬೇಕು. ಕಷ್ಟಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು. ದೃಢಸಂಕಲ್ಪ ಹೊಂದಿರಬೇಕು. ಮಾನವೀಯತೆ ಅಳವಡಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ದಾವಣಗೆರೆ ರಾಮಕೃಷ್ಣ ಆಶ್ರಮದ ಸ್ವಾಮಿ ತ್ಯಾಗಿಶ್ವರಾನಂದ ಸ್ವಾಮೀಜಿ ಮಾತನಾಡಿ, ಸಹೋದರಿ ನಿವೇದಿತಾ ವಿದೇಶದಿಂದ ಭಾರತಕ್ಕೆ ಬಂದು ಭಾರತೀಯರ ಸೇವೆ ಮಾಡಿದಳು. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವುದಕ್ಕೆ ಭದ್ರ ಬುನಾದಿ ಹಾಕಿದವರು ಸಹೋದರಿ ನಿವೇದಿತಾ ಎಂದು ಹೇಳಿದರು.

ನಿವೇದಿತಾ ಪ್ಲೇಗ್ ರೋಗಿಗಳ ಆರೈಕೆ ಮಾಡಿದಳು. ಶಿಕ್ಷಣ ಪ್ರಜ್ಞೆ ಮೂಡಿಸಿದಳು. ಭಾರತೀಯರಲ್ಲಿನ ಸ್ವಾಭಿಮಾನವನ್ನು ಎಚ್ಚರಿಸಿ, ರಾಷ್ಟ್ರೀಯ ಭಾವ ಮೂಡಿಸಿದಳು. ಇಂದಿನ ಮಹಿಳೆಯರು ನಿವೇದಿತಾ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಬಹುಮಾನ
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರಿಗೆ ಸ್ಮರಣಿಕೆ ನೀಡಲಾಯಿತು.

ಸ್ಥಳೀಯ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದಜೀ ಮಹಾರಾಜ್, ಅಂತರರಾಷ್ಟ್ರೀಯ ಕ್ರೀಡಾಪಟು ಶೀತಲ್ ಕೊಲ್ಹಾಪುರೆ, ಸಂಸದ ಸುರೇಶ ಅಂಗಡಿ, ರಾಮನಾಥ ಕೊಂಡೋಸ್ಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT