ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಅಂಕಪಟ್ಟಿ: 51 ವಿದ್ಯಾರ್ಥಿಗಳಿಗೆ ವಿಟಿಯು ಪ್ರವೇಶ ನಿರಾಕರಣೆ

Published 16 ಮೇ 2023, 21:22 IST
Last Updated 16 ಮೇ 2023, 21:22 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ನಕಲಿ ಅಂಕಪಟ್ಟಿಗಳ ಕಾರಣ ನೀಡಿ 51 ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದೆ.

ವಿಟಿಯು ಮೊದಲ ವರ್ಷದ ಎಂಜಿನಿಯರಿಂಗ್ ಕೋರ್ಸ್‌ಗೆ ಈ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರು. ಆದರೆ, ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಒಎಸ್) ನೀಡಿದ ಪ್ರಮಾಣಪತ್ರಗಳು ನಕಲಿ ಎಂದು ಸಾಬೀತಾದ ಕಾರಣ, ಪ್ರವೇಶ ಪಡೆಯಲು ಅವಕಾಶ ನೀಡಿಲ್ಲ’ ಎಂದು ವಿಟಿಯು ಮೂಲಗಳು ಖಚಿತಪಡಿಸಿವೆ.

ಇದಕ್ಕೂ ಮುನ್ನ ತಾಂತ್ರಿಕ ಶಿಕ್ಷಣ ಇಲಾಖೆ ಈ ಎಲ್ಲ ಅಂಕಪಟ್ಟಿಗಳನ್ನೂ ಮಾನ್ಯ ಮಾಡಿದೆ. ಆದರೆ, ವಿಟಿಯು ಕಾಲೇಜುವಾರು ಅನುಮೋದನೆ ನೀಡುವಾಗ ಅಮಾನ್ಯ ಮಾಡಿದೆ.

‘ಈ ನಕಲಿ ಅಂಕಪಟ್ಟಿಗಳ ಹಿಂದೆ ದೊಡ್ಡ ಹಗರಣ ನಡೆದಿರುವ ಶಂಕೆ ಇದೆ. ಹಾಗಾಗಿ ಎಲ್ಲ ವಿದ್ಯಾರ್ಥಿಗಳ ಈವರೆಗಿನ ಪ್ರಮಾಣಪತ್ರಗಳು, ದಾಖಲೆಗಳ ಬಗ್ಗೆಯೂ ಪರಿಶೀಲನೆ ಮಾಡುವುದು ಅಗತ್ಯ. ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಎನ್‌ಐಒಎಸ್‌ಗೂ ಪತ್ರ ಬರೆಯಲು ಉದ್ದೇಶಿಸಲಾಗಿದೆ’ ಎಂದೂ ವಿಟಿಯು ಮೂಲಗಳು ಹೇಳಿವೆ.

‘ಎನ್ಐಒಎಸ್‌ನಿಂದ ಈ ವಿದ್ಯಾರ್ಥಿಗಳು ಪಡೆದ ಪಿಯು ದ್ವಿತೀಯ ವರ್ಷದ ತರಗತಿಯ ಅಂಕಗಳ ಕಾರ್ಡ್‌ಗಳಲ್ಲಿ ಮುದ್ರಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಲಾಯಿತು. ಅಂಕಪಟ್ಟಿಗಳು ನಕಲಿ ಎಂಬುದನ್ನು ವೆಬ್‌ಸೈಟ್‌ ದೃಢಪಡಿಸಿದೆ’ ಎಂದು ತಿಳಿದು ಬಂದಿದೆ.

ಈ ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಸೀಟುಗಳನ್ನು ಪಡೆದಿದ್ದಾರೆ. ಅವರಲ್ಲಿ ಹೆಚ್ಚಿನವರು ತುಮಕೂರು ಮತ್ತು ಚಿಕ್ಕಬಳ್ಳಾಪುರದವರು. 

ಬೆಂಗಳೂರಿನ ಬಿಎಂಎಸ್‌ ಕಾಲೇಜ್ ಆಫ್ ಎಂಜಿನಿಯರಿಂಗ್, ದಯಾನಂದ ಸಾಗರ ಕಾಲೇಜ್ ಆಫ್ ಎಂಜಿನಿಯರಿಂಗ್, ಸಿಟಿ ಎಂಜಿನಿಯರಿಂಗ್ ಕಾಲೇಜು, ಈಸ್ಟ್ ವೆಸ್ಟ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗೋಪಾಲನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌, ಕೆಎಸ್‌  ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಎಂಸಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT