ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಸಮರ್ಪಕವಾಗಿ ಕುಡಿಯುವ ನೀರು ಪೂರೈಸಿ: ನಿವಾಸಿಗಳಿಂದ ಪ್ರತಿಭಟನೆ

ನ್ಯೂ ವೈಭವ ನಗರದ ಸತೀಶ ಕಾಲೊನಿ ನಿವಾಸಿಗಳಿಂದ ಪ್ರತಿಭಟನೆ
Published 25 ಫೆಬ್ರುವರಿ 2024, 15:48 IST
Last Updated 25 ಫೆಬ್ರುವರಿ 2024, 15:48 IST
ಅಕ್ಷರ ಗಾತ್ರ

ಬೆಳಗಾವಿ: ‘ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು’ ಎಂದು ಒತ್ತಾಯಿಸಿ ತಾಲ್ಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನ್ಯೂ ವೈಭವದ ನಗರದ ಸತೀಶ ಕಾಲೊನಿ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಮಹಿಳೆಯರು, ‘ನಾವು 30 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಅಂದಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಇದ್ದೇ ಇದೆ. ಈ ಹಿಂದೆ ಐದು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು. ಈಗ ತಿಂಗಳಿಗೊಮ್ಮೆ ಬಿಡುತ್ತಿರುವುದರಿಂದ ಹೈರಾಣಾಗಿದ್ದೇವೆ. ಹನಿ ನೀರಿಗೂ ಪರದಾಡುತ್ತಿದ್ದೇವೆ’ ಎಂದು ದೂರಿದರು.

‘ಇಲ್ಲಿ ಮನೆಗೊಂದು ನಲ್ಲಿ ಇವೆ. ಆದರೆ, ನೀರು ಬಿಡದ ಕಾರಣ ಟ್ಯಾಂಕರ್‌ ಮೊರೆ ಹೋಗಿದ್ದೇವೆ. ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಮಗೆ, ಈಗ ನೀರಿಗಾಗಿ ಹೆಚ್ಚಿನ ಹಣ ವ್ಯಯಿಸುವುದು ಸಂಕಷ್ಟ ತಂದಿದೆ’ ಎಂದು ಅಳಲು ತೋಡಿಕೊಂಡರು.‌

‘ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಿದ್ದೇವೆ. ಆದರೆ, ನ್ಯಾಯ ಸಿಕ್ಕಿಲ್ಲ’ ಎಂದು ದೂರಿದರು.

‘ಆರ್ಥಿಕವಾಗಿ ಸಬಲರಾಗಿರುವವರು ಹೇಗೋ ಟ್ಯಾಂಕರ್‌ ನೀರು ತರಿಸುತ್ತಿದ್ದಾರೆ. ಆದರೆ, ಬಡವರ ಮಕ್ಕಳು ಶಾಲಾ–ಕಾಲೇಜಿಗೆ ಹೋಗದೆ, ನಿತ್ಯ ನೀರು ತರುವುದಕ್ಕೆ ವಿವಿಧೆಡೆ ಅಲೆದಾಡುತ್ತಿದ್ದಾರೆ. ಸೈಕಲ್‌ ಮೇಲೆ ನೀರು ಪ್ರಯಾಸಪಡುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಉಗ್ರಹೋರಾಟ ಮಾಡಬೇಕಾಗುತ್ತದೆ’ ಎಂದು ಮಲ್ಲವ್ವ ಸರದಾರ ಎಚ್ಚರಿಕೆ ಕೊಟ್ಟರು.

ಬೆಳಗಾವಿಯ ನ್ಯೂ ವೈಭವದ ಸತೀಶ ಕಾಲೊನಿಯಲ್ಲಿ ನೀರಿಗಾಗಿ ಜನರು ಟ್ಯಾಂಕರ್‌ ತರಿಸಿರುವುದು
ಬೆಳಗಾವಿಯ ನ್ಯೂ ವೈಭವದ ಸತೀಶ ಕಾಲೊನಿಯಲ್ಲಿ ನೀರಿಗಾಗಿ ಜನರು ಟ್ಯಾಂಕರ್‌ ತರಿಸಿರುವುದು

ಶೀಘ್ರ ಸಮಸ್ಯೆ ಬಗೆಹರಿಯಲಿದೆ: ಪಿಡಿಒ

‘ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆಯಿಂದ ನ್ಯೂ ವೈಭವ ನಗರದ ಸತೀಶ ಕಾಲೊನಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಕಾಕತಿಯಿಂದ ಇಲ್ಲಿಗೆ ನೀರು ಪೂರೈಸುವ ಪೈಪ್‌ಲೈನ್‌ ಇತ್ತೀಚೆಗೆ ಹಾಳಾಗಿತ್ತು. ವಿವಿಧ ಪರಿಕರಗಳೂ ಸುಟ್ಟಿದ್ದವು. ಈಗ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರ ಸಮಸ್ಯೆ ಬಗೆಹರಿಯಲಿದೆ. ಇನ್ಮುಂದೆ ನಿವಾಸಿಗಳಿಗೆ ಸಮಪರ್ಕವಾಗಿ ಕುಡಿಯುವ ನೀರು ಪೂರೈಸಲಾಗುವುದು’ ಎಂದು ಪಿಡಿಒ ಗೋವಿಂದ ರಂಗಪ್ಪಗೋಳ ‘ಪ್ರಜಾವಾಣಿ’ಗೆ ತಿಳಿಸಿದರು.

ವಿವಿಧ ಬಡಾವಣೆಗಳಲ್ಲೂ ಸಮಸ್ಯೆ

ಎಲ್ ಆ್ಯಂಡ್‌ ಟಿ ಕಂಪನಿಯಿಂದ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ ಸುಭಾಷ ನಗರ ವೀರಭದ್ರ ನಗರ ಶಿವಾಜಿ ನಗರ ಹನುಮಾನ ನಗರ ಮತ್ತಿತರ ಬಡಾವಣೆಗೆ ಸಮರ್ಪಕವಾಗಿ ನೀರು ಪೂರೈಕೆಯಾಗದ ಕಾರಣ ಅಲ್ಲಿನ ನಿವಾಸಿಗಳೂ ಟ್ಯಾಂಕರ್‌ ತರಿಸುತ್ತಿರುವುದು ಕಂಡುಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT