ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲೂ ಬತ್ತದ ವಜ್ರಾ, ವಜ್ರಧಾರಾ: ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿವೆ ಜಲಪಾತ

Published 21 ಮೇ 2023, 6:39 IST
Last Updated 21 ಮೇ 2023, 6:39 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನಲ್ಲಿ ಮಳೆಗಾಲದಲ್ಲಿ ಕುಂಭದ್ರೋಣ ಮಳೆ ಸುರಿಯುತ್ತದೆ. ಆಗ ಜಲಪಾತಗಳೂ ಭೋರ್ಗರೆದು ಧುಮ್ಮಿಕ್ಕುತ್ತವೆ. ಆದರೆ, ಜಾಂಬೋಟಿ ಅರಣ್ಯ ಪ್ರದೇಶದಲ್ಲಿರುವ ವಜ್ರಾ ಜಲಪಾತ ಮತ್ತು ನಾಗರಗಾಳಿ ಅರಣ್ಯದ ವಜ್ರಧಾರಾ ಜಲಪಾತಗಳ ವೈಭವ ಬಿರು ಬೇಸಿಗೆಯಲ್ಲೂ ಕುಂದಿಲ್ಲ. ಈಗಲೂ ಹಾಲ್ನೊರೆಯಂತೆ ಧುಮ್ಮಿಕ್ಕಿ ಹರಿಯುತ್ತಿವೆ.

ವಜ್ರಾ ಜಲಪಾತದಲ್ಲಿ ನೀರು ಧುಮ್ಮಿಕ್ಕುವ ಭೂಪ್ರದೇಶ ಕರ್ನಾಟಕಕ್ಕೆ ಸೇರಿದ್ದರೆ, ಅದು ಹರಿಯುವ ಪ್ರಪಾತದ ಪ್ರದೇಶ ನೆರೆಯ ಗೋವಾ ರಾಜ್ಯಕ್ಕೆ ಒಳಪಟ್ಟಿದೆ. ಮತ್ತೊಂದೆಡೆ, ವಜ್ರಧಾರಾ ಜಲಪಾತದ ಮೇಲ್ಭಾಗ ಬೆಳಗಾವಿ ಜಿಲ್ಲೆಗೆ ಸೇರಿದ್ದರೆ, ಕೆಳಭಾಗ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ. ಹಾಗಾಗಿ ಇವೆರಡೂ ಜಲಪಾತಗಳ ನೀರು ರಾಜ್ಯ ಹಾಗೂ ಜಿಲ್ಲೆಗಳ ಗಡಿಯ ಎಲ್ಲೆ ಮೀರಿ ಹರಿಯುತ್ತಿದೆ.

ಇದೇ ಅರಣ್ಯದಲ್ಲಿ ಅಸಂಖ್ಯಾತ ಪಕ್ಷಿಗಳು, ವನ್ಯಜೀವಿಗಳು, ಜಲಚರಗಳು, ಸರಿಸೃಪಗಳು ನೆಲೆಸಿವೆ. ಆಗಸವನ್ನು ಚುಂಬಿಸುವಂತೆ ಆಳೆತ್ತರಕ್ಕೆ ಬೆಳೆದುನಿಂತ ಮರಗಳು, ಹೂಬಳ್ಳಿಗಳು ಕಾಡಿನ ನೈಸರ್ಗಿಕ ಶ್ರೀಮಂತಿಕೆ ಹೆಚ್ಚಿಸಿವೆ. ಇಲ್ಲಿ ಹರಿಯುವ ನದಿ, ಹಳ್ಳ–ಕೊಳ್ಳಗಳು ಕಾನನವಾಸಿಗಳ ದಾಹ ನೀಗಿಸುತ್ತಿವೆ. ಈ ಜಲಪಾತಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರ್ಗಮವಾಗಿದೆ. ಹಾಗಾಗಿ ಅವುಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ.

ಪೂರ್ವಾನುಮತಿ ಅಗತ್ಯ: ಹರ್ಷಭಾನು

‘ಖಾನಾಪುರ ತಾಲ್ಲೂಕಿನ ದಟ್ಟ ಅರಣ್ಯದಲ್ಲಿರುವ ವಿವಿಧ ಜಲಪಾತಗಳಿಗೆ ತೆರಳಲು ಐದಾರು ಕಿ.ಮೀ ದೂರ ಕಾಲ್ನಡಿಗೆ ಮೂಲಕ ಕ್ರಮಿಸಬೇಕು. ಜತೆಗೆ ಜಲಪಾತದ ಬಳಿ ಕಲ್ಲು ಮುಳ್ಳುಗಳಿಂದ ಕೂಡಿದ ಇಳಿಜಾರಿನ ರಸ್ತೆ ಇದ್ದು, ನೀರು ಹರಿಯುವ ಅಕ್ಕಪಕ್ಕದ ಪ್ರದೇಶದಲ್ಲಿ ಸುಗಮ ಸಂಚಾರ ಕಷ್ಟಕರ. ಜಲಪಾತದ ಬಳಿ ನೀರು ಕುಡಿಯಲು ವನ್ಯಪ್ರಾಣಿಗಳು, ಸರಿಸೃಪಗಳು ಬರುವ ಕಾರಣ, ಅವು ದಾಳಿ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹೀಗಾಗಿ ಜಲಪಾತಗಳ ಬಳಿ ಸಾರ್ವಜನಿಕರು ಭೇಟಿ ನಿಷೇಧಿಸಲಾಗಿದೆ. ಜನರು ಜಲಪಾತಗಳ ಬಳಿ ಮತ್ತು ಅರಣ್ಯದ ಒಳಗೆ ಹೋಗಬೇಕಾದರೆ ಪೂರ್ವಾನುಮತಿ ಅಗತ್ಯ’ ಎಂದು ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಪಿ.ಹರ್ಷಭಾನು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT