ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲು ಎದುರಿಸಿ ಸಾಧಿಸಿದ ವರ್ಷ

ಬಿಜೆಪಿ ಸರ್ಕಾರಕ್ಕೆ ವರ್ಷ: ಸಚಿವ ರಮೇಶ ಜಾರಕಿಹೊಳಿ ಹೇಳಿಕೆ
Last Updated 27 ಜುಲೈ 2020, 10:00 IST
ಅಕ್ಷರ ಗಾತ್ರ

ಬೆಳಗಾವಿ: ‘ನಮ್ಮ ಸರ್ಕಾರವು ಹಲವು ಸವಾಲುಗಳನ್ನು ಎದುರಿಸಿ ಸಾಧಿಸಿದ ವರ್ಷವಿದು’ ಎಂದು ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದರಾಜ್ಯ ಸರ್ಕಾರದ ವರ್ಷಾಚರಣೆ ಕಾರ್ಯಕ್ರಮವನ್ನು ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನೇರಪ್ರಸಾರದ ಮೂಲಕ ವೀಕ್ಷಿಸಿದ ನಂತರ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸರಣಿ ಸವಾಲುಗಳ ನಡುವೆಯೂ ಗಟ್ಟಿಯಾಗಿ ನಿಂತು ಜನರ ಮನಸ್ಸು ಗೆದ್ದಿದ್ದಾರೆ. ಮುಂದೆಯೂ ಉತ್ತಮ ಆಡಳಿತ ನೀಡಲಾಗುವುದು. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ತಮ್ಮ ಕೆಲಸ ಮಾಡಲಿ. ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಲಿ’ ಎಂದರು.

ಸರ್ಕಾರದ ವರ್ಷದ ಪ್ರಗತಿ ವರದಿಯ ಪುಸ್ತಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ‘ಜನಪದ’ ಹಾಗೂ ‘ಮಾರ್ಚ್ ಆಫ್ ಕರ್ನಾಟಕ’ ಮಾಸಿಕಗಳನ್ನು ಜನಪ್ರತಿನಿಧಿಗಳು ಬಿಡುಗಡೆ ಮಾಡಿದರು.

ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ರಾಮದುರ್ಗ ತಾಲ್ಲೂಕಿನ ನರಸಾಪುರದ ಶೇಕವ್ವ ಅರಭಾವಿ ಸಮಸ್ಯೆ ಕುರಿತು ಪುತ್ರಿ ಪವಿತ್ರಾ ಸಾಮಾಜಿಕ ಜಾಲತಾಣದ ಮೂಲಕ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ್ದ ಅವರು ಜಿಲ್ಲಾಧಿಕಾರಿಗೆ ನೀಡಿದ್ದ ಸೂಚನೆ ಮೇರೆಗೆ ಅಗತ್ಯ ಔಷಧಿಗಳನ್ನು ಪೂರೈಸಲಾಗಿತ್ತು. ಇದನ್ನು ನೇರ ಸಂವಾದದಲ್ಲಿ ನೆನೆದ ಪವಿತ್ರಾ, ತಮ್ಮ ಕೃತಜ್ಞತೆ ಸಲ್ಲಿಸಿದರು. ‘ಚಿಕಿತ್ಸೆಗಾಗಿ ಮತ್ತಷ್ಟು ನೆರವಾಗಬೇಕು’ ಎಂಬ ಕೋರಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅಗತ್ಯ ಸಹಾಯ ಮಾಡುವ ಭರವಸೆ ನೀಡಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ವಿಧಾನಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಶಾಸಕರಾದ ಮಹೇಶ ಕುಮಠಳ್ಳಿ, ಪಿ. ರಾಜೀವ್, ದುರ್ಯೋಧನ ಐಹೊಳೆ, ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪೊಲೀಸ್ ಆಯುಕ್ತ ತ್ಯಾಗರಾಜನ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಡಿ ಪಾಲ್ಗೊಂಡಿದ್ದರು.

ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಯೋಜನೆಗಳ ಫಲಾನುಭವಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT