ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸ್ವಾಭಿಮಾನದ ಬದುಕಿಗಾಗಿ ಕಾಯ್ದೆ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

Last Updated 25 ಡಿಸೆಂಬರ್ 2020, 12:03 IST
ಅಕ್ಷರ ಗಾತ್ರ

ಬೆಳಗಾವಿ: ‘ರೈತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಮತ್ತುಕಷ್ಟಪಟ್ಟು ಬೆಳೆಗಳನ್ನು ಬೆಳೆಯುವ ಅವರ ಶ್ರಮ ದಲ್ಲಾಳಿಗಳ ಪಾಲಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನು ರೂಪಿಸಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದಿಂದ ತಾಲ್ಲೂಕಿನ ಪಂತ ಬಾಳೇಕುಂದ್ರಿಯ ಶಿವಾಲಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ವಾಜಪೇಯಿ ಜನ್ಮ ದಿನಾಚರಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ‘ಕಿಸಾನ್ ಸಮ್ಮಾನ್’ 7ನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗೆ ಮುನ್ನ ಅವರು ಮಾತನಾಡಿದರು.

‘ಪ್ರಸ್ತುತ ರೈತರು ದಲ್ಲಾಳಿಗಳ ಹಿಡಿತದಲ್ಲಿ ಸಿಲುಕಿದ್ದಾರೆ. ತಮ್ಮದೆ ಬೆಳೆ ಮಾರಾಟ ಮಾಡಿದರೂ ಮುಂಗಡ ಹಣಕ್ಕೆ ಬಡ್ಡಿ ಕಟ್ಟಿ ಸಾಲದ ಸುಳಿಯಲ್ಲಿರುವ ಅವರ ನೈಜ ಸ್ಥಿತಿಯನ್ನರಿತು ಮುಕ್ತ ಮಾರಾಟ ವ್ಯವಸ್ಥೆ ಜಾರಿಗೆ ತರಲಾಗಿದೆ. ಕೇವಲ ದಲ್ಲಾಳಿಗಳ ಮೂಲಕವೇ ಕೃಷಿ ಉತ್ಪನ್ನಗಳ ಮಾರಾಟವನ್ನು ಎಪಿಎಂಸಿಯಲ್ಲಿ ಮಾಡುವುದನ್ನು ತಪ್ಪಿಸಿ, ದೇಶದ ಯಾವ ಭಾಗದಲ್ಲಿ ಬೇಕಾದರೂ ಮಾರಬಹುದಾಗಿದೆ’ ಎಂದರು.

ಎಪಿಎಂಸಿ ಮುಚ್ಚುವುದಿಲ್ಲ:‘ಎಪಿಎಂಸಿಗಳನ್ನು ಮುಚ್ಚುವ ಹಾಗೂ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ರದ್ದತಿ ಮಾಡುವ ಯಾವುದೇ ಅಂಶಗಳು ಈ ಕಾನೂನಿನಲ್ಲಿ ಇಲ್ಲ. ಬಿಜೆಪಿ ರೈತಪರ ಸರ್ಕಾರ. ರೈತರನ್ನು ದಾರಿ ತಪ್ಪಿಸುವ ವಿರೋಧ ಪಕ್ಷದವರ ಮಾತುಗಳಿಗೆ ಕಿವಿಕೊಡಬಾರದು’ ಎಂದು ಕೋರಿದರು.

ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘ವಾಜಪೇಯಿ ಅವರು ಅಜಾತ ಶತ್ರುವಾಗಿ, ಸತ್ಯದ ದಾರಿಯಲ್ಲಿ, ತತ್ವ–ಸಿದ್ಧಾಂತದ ತಳಹದಿಯಲ್ಲಿ ಸಾಗಿ ಬಂದ ರಾಜಕೀಯ ಸಂತ. ತಮ್ಮ ಜೀವನವನ್ನೇ ಭಾರತಾಂಬೆಯ ಸೇವೆಗೆ ಮುಡಿಪಾಗಿಟ್ಟಿದ್ದರು. ಅವರ ಕಾಯಕಮಯ ಜೀವನ ನಮಗೆ ಆದರ್ಶವಾಗಿದೆ’ ಎಂದರು.

ರೈತರ ಸಂಕಷ್ಟಕ್ಕೆ ಸ್ಪಂದಿಸಲು:ಅಧ್ಯಕ್ಷತೆ ವಹಿಸಿದ್ದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ರೈತರ ಸಂಕಷ್ಟಕ್ಕೆ ಸ್ಪಂದಿಸಲು ಪ್ರಧಾನಿ ಮೋದಿ ಕಿಸಾನ್‌ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದಾರೆ. ರೈತರ ಖಾತೆಗಳಿಗೆ ನೆರವಾಗಿ ಹಣ ಜಮೆ ಆಗುವಂತೆ ಮಾಡಿದ್ದಾರೆ. ದೇಶವು ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಂತ್ರಿಕವಾಗಿ ಎಷ್ಟು ಮುಂದುವರಿದಿದೆ ಹಾಗೂ ಜನಧನ್ ಖಾತೆಯಿಂದ ಜನಸಾಮಾನ್ಯರ ಬಾಳು ಹೇಗೆ ಹಸನಾಗುತ್ತಿದೆ ಎನ್ನುವುದು ತಿಳಿಯುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೊಹಿತೆ, ರಾಜು ಚಿಕ್ಕನಗೌಡರ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಮಾಧ್ಯಮ ಪ್ರಮುಖ ಎಫ್.ಎಸ್. ಸಿದ್ದನಗೌಡರ, ಉಪಾಧ್ಯಕ್ಷ ಯುವರಾಜ ಜಾಧವ, ಮುಖಂಡರಾದ ಡಾ.ಗುರು ಕೋತಿನ, ರಾಜು ದೇಸಾಯಿ, ಶಂಕರ ಜತ್ರಾಟಿ, ಅಭಯ ಅವಲಕ್ಕಿ, ವೀರಭದ್ರ ಪೂಜಾರ, ಅಡವೇಶ ಅಂಗಡಿ, ನೀತಿನ ಚೌಗಲೆ, ಮಹೇಶ ಜತ್ರಾಟಿ, ಕಮಲಾಕರ ಕೋಲಕಾರ ಇದ್ದರು.

ವಾಜಪೇಯಿ ಫೋಟೊಗೆ ಪುಷ್ಪನಮನ ಸಲ್ಲಿಸಲಾಯಿತು. ತಾಲ್ಲೂಕಿನ ಪ್ರಗತಿಪರ ರೈತರನ್ನು ಸತ್ಕರಿಸಲಾಯಿತು.

ಯಲ್ಲೇಶ ಕೋಲಕಾರ ನಿರೂಪಿಸಿದರು. ಡಾ.ಗುರು ಕೋತಿ‌ನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT