ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕ ಚಿಂತನೆ, ಸಮಾಜಮುಖಿ ಜೀವನ ಸಾರ್ಥಕ: ಡಾ.ಅಲ್ಲಮಪ್ರಭು ಸ್ವಾಮೀಜಿ

Last Updated 11 ಜನವರಿ 2021, 16:49 IST
ಅಕ್ಷರ ಗಾತ್ರ

ಬೆಳಗಾವಿ: ‘ವೈಚಾರಿಕ ಚಿಂತನೆಗಳುಳ್ಳ ಸಮಾಜಮುಖಿ ಜೀವನವೇ ಸಾರ್ಥಕ ಜೀವನ’ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಬಸವ ಭೀಮ ಸೇನೆಯಿಂದ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನ ಹಾಗೂ ‘ಅಕ್ಷರ ತಾಯಿ’ ಸೇರಿದಂತೆ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾರ್ಥಕ ಜೀವನದಿಂದ ವೈಚಾರಿಕ ನೆಲೆಯಲ್ಲಿ ಹೊಸ ಸಮಾಜ ಸೃಷ್ಟಿ ಮಾಡಿರುವುದರಿಂದಲೇ ಬಸವಾದಿ ಶರಣರ ಕ್ರಾಂತಿಯು ಇಂದಿನ ಆಧುನಿಕ ಜಗತ್ತಿಗೂ ಮಾದರಿಯಾಗಿದೆ. ಬಸವ-ಅಂಬೇಡ್ಕರ್ ಅವರನ್ನು ಸಮೀಕರಿಸಿ, ವೈಚಾರಿಕ ಚಿಂತನೆಗಳ ಸಮಾಜವನ್ನು ಮರು ಸೃಷ್ಟಿಸಲು ಯತ್ನಿಸುತ್ತಿರುವ ಬಸವ ಭೀಮ ಸೇನೆಯ ಹೋರಾಟಕ್ಕೆ ಶ್ರೀಮಠದ ಸಂಪೂರ್ಣ ಬೆಂಬಲವಿದೆ’ ಎಂದರು.

ಉದ್ಘಾಟಿಸಿದ ಪತ್ರಕರ್ತ ದಿಲೀಪ ಕುರಂದವಾಡೆ, ‘ತಮ್ಮ ವೈಚಾರಿಕ ಚಿಂತನೆಗಳಿಂದ ಸಮಾಜಮುಖಿ ಹೋರಾಟಕ್ಕೆ ಹೊಸ ಆಯಾಮ ನೀಡಿರುವ ದರ್ಗೆ ಅವರಿಗೆ ಸಮಾಜವು ಇನ್ನಷ್ಟು ಶಕ್ತಿ ತುಂಬಬೇಕು’ ಎಂದು ಆಶಿಸಿದರು.

ಅರಣ್ಯ ಸಂಚಾರಿ ದಳದ ರೋಹಿಣಿ ಪಾಟೀಲ, ‘ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆ ಅಡಗಿದೆ. ಯಾವೊಬ್ಬ ವಿದ್ಯಾರ್ಥಿಯನ್ನು ಶಿಕ್ಷಕಿಯರು ನಿರ್ಲಕ್ಷಿಸಬಾರದು. ಬಾಲ್ಯದಲ್ಲಿ ನನ್ನ ಗುರುಗಳು ಮನೋಬಲ ತುಂಬಿದರಿಂದಲೆ ನಾನು ಅಧಿಕಾರಿಯಾಗಲು ಸಾಧ್ಯವಾಗಿದೆ’ ಎಂದರು.

ಶಿಕ್ಷಕಿ ಸುಶೀಲಾ ಗುರವ, ‘ಸಾವಿತ್ರಿಬಾಯಿ ಫುಲೆ ಅವರು ಶಾಲೆಗಳನ್ನು ಆರಂಭಿಸಿದ ಮತ್ತು ಅಂದಿನ ಮಕ್ಕಳಿಗೆ ಶಿಕ್ಷಣ ನೀಡಿದ ಪರಿಯು ಪ್ರತಿ ಶಿಕ್ಷಕಿಗೆ ಮಾದರಿಯಾಗಿದೆ’ ಎಂದು ತಿಳಿಸಿದರು.

ಶಿಕ್ಷಕಿ ಪ್ರಭಾವತಿ ಹಾಲಣ್ಣವರ ಮಾತನಾಡಿದರು.

ಶಿಕ್ಷಕಿಯರಾದ ಎಂ. ಸುಧಾ, ಜಯಶ್ರೀ ಕಡಕೋಳ, ಸುಮಾ ದೊಡಮನಿ, ವಂದನಾ ಗಾವಡೆ, ಗೀತಾ ಜಮಖಂಡಿ, ಸುರೇಖಾ ಮಿರ್ಜೆ, ಸುವರ್ಣಾ ದಶವಂತ, ಕಿರಣ ಗಾಯಕವಾಡ, ಲೀಲಾವತಿ ದೊಡಮನಿ, ಶಿವಬಾಯವ್ವ ಮಠದ, ಪ್ರೇಮಾ ಜಡಗಿ, ಅನ್ನಪೂರ್ಣಾ ವಜ್ರಮಟ್ಟಿ, ನೂತನ ಕಾಗತಿ, ಎಂ.ಐ. ಬೇಪಾರಿ ಮತ್ತು ಎಸ್.ಕೆ. ಕವಿಶೆಟ್ಟಿ ಅವರಿಗೆ ‘ಅಕ್ಷರ ತಾಯಿ ಸಾವಿತ್ರಿಬಾಯಿ ಫುಲೆ’ ಪ್ರಶಸಿ ಪ್ರದಾನ ಮಾಡಲಾಯಿತು. ಡಾ.ಅನ್ನಪೂರ್ಣಾ ಕಾರಿ ಮತ್ತು ಲೀಲಾ ಪಾಟೀಲ ಅವರಿಗೆ ‘ನಾರಿಕುಲ ಚೇತನ ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ, ಗೀತಾ ಬಸವರಾಜ ಕೋಲ್ಕಾರ ದಂಪತಿಗೆ ಸಾವಿತ್ರಿಬಾಯಿ ಜ್ಯೋತಿಬಾ ಫುಲೆ ಆದರ್ಶ ದಂಪತಿ ಪ್ರಶಸ್ತಿ, ಡಾ.ಮಲ್ಲಪ್ಪ ಬಾಗೇವಾಡಿ ಅವರಿಗೆ ಜ್ಯೋತಿಭಾ ಫುಲೆ ಜೀವಮಾನದ ಸಾಧನಾ ಪ್ರಶಸ್ತಿ, ಮಹಾದೇವ ತೋಟಗಿ, ಧರೆಪ್ಪ ಠಕ್ಕಣ್ಣವರ ಮತ್ತು ರಮೇಶ ಕೊಪ್ಪದ ಅವರಿಗೆ ಜ್ಯೋತಿಬಾ ಫುಲೆ ಸಮಾಜ ಸೇವಾ ಪ್ರಶಸಿ ಪ್ರದಾನ ಮಾಡಲಾಯಿತು.

ಸೇನೆಯ ಅಧ್ಯಕ್ಷ ಆರ್.ಎಸ್. ದರ್ಗೆ ಇದ್ದರು. ಸುರೇಶ ಮರಲಿಂಗಣ್ಣವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT