ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಕಾರಜೋಳ

Last Updated 15 ಆಗಸ್ಟ್ 2021, 6:16 IST
ಅಕ್ಷರ ಗಾತ್ರ

ಬೆಳಗಾವಿ: ‘ಸ್ವಾತಂತ್ರ್ಯ ಎಂದರೆ ಸ್ವಾಭಿಮಾನ. ತಮ್ಮ ಪ್ರಾಣ ಪಣಕ್ಕಿಟ್ಟು ದೇಶದ ಜನರಿಗೆ ಸ್ವಾಭಿಮಾನ ತಂದುಕೊಟ್ಟ ಮಹನೀಯರನ್ನು ನಾವೆಲ್ಲರೂ ಹೆಮ್ಮೆಯಿಂದ ಸ್ಮರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲಾಡಳಿತದಿಂದ ಇಲ್ಲಿನ ನೆಹರೂ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಬ್ರಿಟಿಷರ ದರ್ಪ, ದೌರ್ಜನ್ಯದಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಅಸಂಖ್ಯಾತ ಮಂದಿ ಹೋರಾಡಿದ್ದಾರೆ. ನಮ್ಮ ಪೂರ್ವಜರ ತ್ಯಾಗ, ಬಲಿದಾನ, ಆತ್ಮಾರ್ಪಣೆಯ ಪ್ರತಿಫಲದಿಂದ ನಾವಿಂದು ಸ್ವತಂತ್ರ ಭಾರತದಲ್ಲಿದ್ದೇವೆ. ತ್ಯಾಗ, ಬಲಿದಾನ, ಧೈರ್ಯ, ಶೌರ್ಯ, ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್‍ಚಂದ್ರ ಭೋಸ್, ಸರ್ದಾರ್ ವಲ್ಲಭಬಾಯಿ ಪಟೇಲ್, ಭಗತ್‍ಸಿಂಗ್, ಚಂದ್ರಶೇಖರ ಆಜಾದ್, ವೀರಸಾವರ್ಕರ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಪಂಡಿತ್ ಜವಾಹರಲಾಲ್ ನೆಹರೂ ಅವರಂತಹ ಸಾವಿರಾರು ಹೋರಾಟಗಾರರನ್ನು ಶುದ್ಧ ಮನಸ್ಸಿನಿಂದ ಸ್ಮರಿಸಬೇಕು’ ಎಂದರು.

ಜಗತ್ತಿಗೆ ಮಾದರಿ:

‘ಅಹಿಂಸೆ ಎಂಬ ಅಸ್ತ್ರ ಬಳಸಿ ಭಾರತವನ್ನು ಬ್ರಿಟಿಷರಿಂದ ಬಂಧಮುಕ್ತಗೊಳಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೋರಾಟ ಜಗತ್ತಿಗೆ ಮಾದರಿಯಾಗಿದೆ. ‘ಇತಿಹಾಸ ಮರೆತವರು ಭವಿಷ್ಯ ಸೃಷ್ಟಿಸಲಾರರು’ ಎಂಬ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಾತು ಎಲ್ಲ ಕಾಲಕ್ಕೂ ಮಾರ್ಗದರ್ಶಿಯಾಗಿದೆ. ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ಅಖಂಡತೆ ಪ್ರತಿಪಾದಿಸುವ ನಮ್ಮ ದೇಶ ಸಾಮರಸ್ಯದ ಬದುಕಿಗೆ ಹೆಸರುವಾಸಿ’ ಎಂದು ಹೇಳಿದರು.

‘ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡಿಗರ ಕೊಡುಗೆ ಅಪಾರ. ಜಿಲ್ಲೆಯ ಪಾತ್ರವೂ ಪ್ರಮುಖವಾಗಿದೆ. ಅಪ್ರತಿಮ ಹೋರಾಟಗಾರರು, ಅಪ್ಪಟ ದೇಶಭಕ್ತರು, ಸ್ವಾಭಿಮಾನಿ ಸೇನಾನಿಗಳನ್ನು ದೇಶಕ್ಕೆ ಕೊಡುಗೆ ನೀಡಿರುವ ನಮ್ಮ ಜಿಲ್ಲೆಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು.
ಕಿತ್ತೂರು ರಾಣಿ ಚನ್ನಮ್ಮ ಮೊಳಗಿಸಿದ ಸ್ವಾತಂತ್ರ್ಯದ ಕಹಳೆಯು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು’ ಎಂದು ಸ್ಮರಿಸಿದರು.

‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅರಿವು ಮೂಡಿಸಲು ಪ್ರಬಂಧ, ಬೀದಿ ನಾಟಕ, ಆನ್‍ಲೈನ್ ವಿನ್ಯಾಸ, ಚಿತ್ರಕಲೆ ಸ್ಪರ್ಧೆಗಳು, ಕವನ ವಾಚನಗೋಷ್ಠಿ ನಡೆಸಲಾಗುವುದು’ ಎಂದು ತಿಳಿಸಿದರು.

ನಿಯಂತ್ರಣಕ್ಕೆ ಕ್ರಮ:‘ನಮ್ಮ ಸರ್ಕಾರವು ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿ ನಿರ್ವಹಣೆಯ ಸವಾಲುಗಳ ನಡುವೆಯೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಕೊರೊನಾ ಸಂಕಷ್ಟದಿಂದ ಪಾರು ಮಾಡಿ, ಸಣ್ಣ, ಅತಿ ಸಣ್ಣ ಉದ್ಯಮಿಗಳಿಗೆ, ಎಲ್ಲಾ ವರ್ಗದವರ ಏಳಿಗೆಗಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಪರೀಕ್ಷೆ, ಚಿಕಿತ್ಸೆ ಹಾಗೂ ಸಮೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘‌ಜಿಲ್ಲೆಯಲ್ಲಿ ನೆರೆ ಮತ್ತು ಅತಿವೃಷ್ಟಿಯಿಂದ ₹ 2,800 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. 1,15,661 ಹೆಕ್ಟೇರ್ ಪ್ರದೇಶ ಬಾಧಿತ ಕ್ಷೇತ್ರವೆಂದು ಅಂದಾಜಿಸಲಾಗಿದ್ದು, ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ’ ಎಂದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 309-ಬಿ ಅನ್ವಯ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಅನ್ವಯವಾಗುವಂತೆ ದೂರದೃಷ್ಟಿ ಯೋಜನೆ ತಯಾರಿಸಿ ‘ಜನರ ಯೋಜನೆ’ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ ಇದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಮಕ್ಕಳಿಂದ ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT