ಗುರುವಾರ , ಆಗಸ್ಟ್ 22, 2019
26 °C
ಮನೆ–ಶೆಡ್‌ಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಸಾಮಗ್ರಿಗಳಿಗೆ ಹಾನಿ

ಮಳೆಗೆ ನೇಕಾರರ ಬದುಕು ಅತಂತ್ರ

Published:
Updated:
Prajavani

ಬೆಳಗಾವಿ: ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ನಗರ ಸೇರಿ ಜಿಲ್ಲೆಯ ವಿವಿಧೆಡೆಯ ನೇಕಾರರ ಮನೆ ಹಾಗೂ ಶೆಡ್‌ಗಳಿಗೆ ನೀರು ನುಗ್ಗಿ, ಕೈಮಗ್ಗ ಸೇರಿ ಇನ್ನಿತರ ಸಾಮಗ್ರಿಗಳು ಹಾಳಾಗಿರುವುದರಿಂದ ಅವರ ಬದುಕು ಅತಂತ್ರವಾಗಿದೆ. 

ಈಗಲೂ ಅನೇಕ ನೇಕಾರರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಬದುಕಿಗೆ ಆಧಾರವಾಗಿದ್ದ ಉದ್ಯೋಗವನ್ನೇ ಮಳೆ ಕಸಿದುಕೊಂಡಿರುವುದರಿಂದ ಇಡೀ ಕುಟುಂಬವೇ ಕಂಗಾಲಾಗಿದ್ದು, ಮುಂದಿನ ಜೀವನ ಹೇಗೆ ಎಂದು ಚಿಂತೆಗೀಡಾಗಿದ್ದಾರೆ.

ಕೈಮಗ್ಗಗಳು ಜಲಾವೃತ: ಇಲ್ಲಿನ ಖಾಸಬಾಗದ ಸಾಯಿ ನಗರ, ದೇವಾಂಗ ಕಾಲೊನಿ, ಕನಕದಾಸ ನಗರ, ಕಲ್ಯಾಣ ನಗರದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ನೇಕಾರಿಕೆಯಲ್ಲಿ ತೊಡಗಿದ್ದು, 1,800 ಕೈಮಗ್ಗಗಳನ್ನು ಹೊಂದಿದ್ದರು. ಬಳ್ಳಾರಿ ನಾಲೆ ಹಾಗೂ ಚರಂಡಿಗಳು ತುಂಬಿ ಹರಿದ ನೀರು ಮನೆಗಳಿಗೆ ನುಗ್ಗಿದ್ದರಿಂದ ಕೈಮ್ಗಗಳು ಜಲಾವೃತವಾಗಿದ್ದವು. ದಾರ, ಬಿಂಬ್‌, ತಯಾರಿಸಿದ್ದ ಸೀರೆ ಸೇರಿ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ನೀರು ಪಾಲಾಗಿವೆ.

ಮನೆಗಳಲ್ಲಿ 3 ರಿಂದ 4 ಅಡಿ ನೀರು ತುಂಬಿಕೊಂಡಿತ್ತು. ಮೋಟಾರ್‌ ಮೂಲಕ ನೀರು ಹೊರಹಾಕಲು ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ರಾಮದುರ್ಗ ಹಾಗೂ ಸುರೇಬಾನದಲ್ಲಿಯೂ ನೇಕಾರರಿಗೆ ಹೆಚ್ಚಿನ ಹಾನಿಯಾಗಿದೆ. ಗೋಕಾಕ, ಸವದತ್ತಿ, ಅಥಣಿ ತಾಲ್ಲೂಕಿನಲ್ಲಿಯೂ ಕೆಲವರಿಗೆ ಸಮಸ್ಯೆಯಾಗಿದೆ.

ಗಾಯದ ಮೇಲೆ ಬರೆ: ಮೊದಲೇ ಉದ್ಯಮಕ್ಕೆ ಹೊಡೆತ ಬಿದ್ದಿದ್ದರಿಂದ ನೇಕಾರರು ಆರ್ಥಿಕ ಸಂಕಷ್ಟದಲ್ಲಿದ್ದರು. ಈಗ ಮಳೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

‘ಕೈಮಗ್ಗಗಳು ಹಾಳಾಗಿರುವುದರಿಂದ ಅವುಗಳನ್ನು ದುರಸ್ತಿ ಮಾಡಿಸಬೇಕಾಗುತ್ತದೆ. ಸಂಪೂರ್ಣ ಹಾಳಾಗಿದ್ದರೆ ಹೊಸ ಯಂತ್ರ ಖರೀದಿಸಬೇಕಾಗುತ್ತದೆ. ಸೀರೆ ನೇಯುವುದಕ್ಕಾಗಿ ಮತ್ತೆ ಮಗ್ಗಗಳನ್ನು ಹೊಂದಿಸಿಕೊಳ್ಳಲು ತಿಂಗಳಿಂದ ಎರಡು ತಿಂಗಳೇ ಬೇಕಾಗುತ್ತದೆ. ಅಗತ್ಯ ಸಾಮಗ್ರಿಗಳ ಖರೀದಿಗೆ ತಕ್ಷಣ ನಮಗೆ ಹಣಕಾಸಿನ ನೆರವು ಯಾರು ನೀಡುತ್ತಾರೆ’ ಎಂದು ಸಂತ್ರಸ್ತ ವಿಠ್ಠಲ ಬುಚಡಿ ಕಳವಳ ವ್ಯಕ್ತಪಡಿಸಿದರು.

ಕಿರುಕುಳ ತಪ್ಪಿಸಿ: ನೇಕಾರರಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತವೆ. ಹೀಗಾಗಿ, ಕಚ್ಚಾ ಸಾಮಗ್ರಿಗಳನ್ನು ಖರೀದಿಸಲು ನೇಕಾರರು ಫೈನಾನ್ಸ್‌ಗಳಿಂದ ಸಾಲ ಪಡೆದಿದ್ದಾರೆ. ಈಗ ಇಂತಹ ಪರಿಸ್ಥಿತಿ ಎದುರಾಗಿರುವುದರಿಂದ ಸಾಲ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಫೈನಾನ್ಸ್‌ಗಳ ಸಿಬ್ಬಂದಿ ಸಾಲ ಪಾವತಿಸಲು ಕಿರುಕುಳ ನೀಡದಂತೆ ಸರ್ಕಾರ ಸೂಚಿಸಬೇಕು. ಕೈಮಗ್ಗ, ಪಾವರಲೂಮ್‌ ಹಾಗೂ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲು ಕೂಡಲೇ ಸಹಾಯಧನ ಒದಗಿಸಬೇಕು’ ಎಂದು ಮುಖಂಡ ಶ್ರೀನಿವಾಸ ತಾಳೂಕರ ಆಗ್ರಹಿಸಿದರು. 

Post Comments (+)