ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯ ಕರ್ಫ್ಯೂ: ಬೆಳಗಾವಿ ಸ್ತಬ್ಧ

ಸೋಮವಾರ ಬೆಳಿಗ್ಗೆ 5ರವರೆಗೂ ನಿರ್ಬಂಧ
Last Updated 7 ಆಗಸ್ಟ್ 2021, 8:17 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್–19 ನಿಯಂತ್ರಣ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ವಾರಾಂತ್ಯ ಕರ್ಫ್ಯೂಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಶುಕ್ರವಾರ ರಾತ್ರಿ 9ರಿಂದಲೇ ವಾರಾಂತ್ಯ ಕರ್ಫ್ಯೂ ಆರಂಭವಾಗಿದ್ದು, ಸೋಮವಾರ ಬೆಳಿಗ್ಗೆ 5ವರೆಗೆ ಜಾರಿಯಲ್ಲಿರಲಿದೆ. ಈ ಹಿನ್ನೆಲೆಯಲ್ಲಿ ಜನರ ಓಡಾಟ ನಿರ್ಬಂಧಿಸಲಾಗಿತ್ತು. ಶನಿವಾರ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಬೆಳಿಗ್ಗೆ 5ರಿಂದ ಮಧ್ಯಾಹ್ನದವರೆಗೆ ಮಾತ್ರ ಹಾಲು, ತರಕಾರಿ, ಮಾಂಸ, ದಿನಸಿ ಪದಾರ್ಥಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ನಂತರ ಬಹುತೇಕ ಲಾಕ್‌ಡೌನ್ ವಾತಾವರಣ ಕಂಡುಬಂತು. ಎನ್‌ಡಬ್ಲ್ಯುಕೆಆರ್‌ಟಿಸಿಯ ಬಸ್‌ಗಳ ಸಂಚಾರ ಇತ್ತಾದರೂ ಪ್ರಯಾಣಿಕರು ಹೆಚ್ಚಾಗಿ ಇರಲಿಲ್ಲ. ಆಟೊರಿಕ್ಷಾಗಳ ಓಡಾಟವೂ ವಿರಳವಾಗಿತ್ತು.

ಮಧ್ಯಾಹ್ನದ ನಂತರ ಬಹುತೇಕ ಮುಖ್ಯ ರಸ್ತೆಗಳು ಹಾಗೂ ವೃತ್ತಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ನಗರವೂ ಸೇರಿದಂತೆ ಜಿಲ್ಲೆಯು ಬಹುತೇಕ ಸ್ತಬ್ಧಗೊಂಡಿದೆ.

ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಕರ್ಫ್ಯೂ ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಂಡಿದ್ದ ಪೊಲೀಸರು ಆಸ್ಪತ್ರೆ, ಮೆಡಿಕಲ್‌ ಸ್ಟೋರ್‌ ಮೊದಲಾದ ಅವಶ್ಯ ಕೆಲಸಗಳಿಗೆ ಹೋಗುವವರಿಗೆ ಮಾತ್ರವೇ ಅವಕಾಶ ನೀಡಿದರು. ಅನವಶ್ಯವಾಗಿ ದ್ಚಿಚಕ್ರವಾಹನದಲ್ಲಿ ಸಂಚರಿಸುತ್ತಿದ್ದವರಿಗೆ ಬುದ್ಧಿವಾದ ಹೇಳಿ ವಾಪಸ್ ಕಳುಹಿಸಿದರು.

ಅಗತ್ಯ ವಸ್ತುಗಳನ್ನು ಖರೀದಿಸಿದ ಜನರು ಬಳಿಕ ಮನೆಗಳಿಂದ ಹೊರಬರದೆ ಕರ್ಫ್ಯೂ ಯಶಸ್ಸಿಗೆ ಸ್ವಯಂಪ್ರೇರಿತವಾಗಿ ಸಹಕಾರ ನೀಡಿದರು.

ಕರ್ಫ್ಯೂ ಅನುಷ್ಠಾನ ಹಾಗೂ ಮಾರ್ಗಸೂಚಿ ಪಾಲನೆಯ ಕುರಿತು ಡಿಸಿಪಿ ವಿಕ್ರಂ ಅಮಟೆ ರಾಣಿ ಚನ್ನಮ್ಮ ವೃತ್ತದಲ್ಲಿ ಕೆಲ ಕಾಲ ಇದ್ದು ಪರಿಶೀಲಿಸಿದರು.

ಜಿಲ್ಲಾ ಪೊಲೀಸ್ ವತಿಯಿಂದಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಯಿತು. ಅದರಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿರುವ ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ರಾಯಬಾಗ, ಅಥಣಿ, ಬೆಳಗಾವಿ ತಾಲ್ಲೂಕುಗಳ ಗಡಿಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಮಹಾರಾಷ್ಟ್ರದಿಂದ ಬರುವವರು 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿ ಪ್ರಸ್ತುತಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರತಿ ವಾಹನದಲ್ಲಿನ ಪ್ರತಿಯೊಬ್ಬರಿಂದಲೂ ವರದಿಯನ್ನು ಪೊಲೀಸರು ಪರಿಶೀಲಿಸಿದರು. ಇಲ್ಲದಿದ್ದವರನ್ನು ವಾಪಸ್ ಕಳುಹಿಸುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT