ಮಂಗಳವಾರ, ಮೇ 11, 2021
24 °C
ಕೋವಿಡ್ ನಡುವೆಯೇ ಮತ ಎಣಿಕೆಗೆ ಸಿದ್ಧತೆ; ಫಲಿತಾಂಶಕ್ಕೆ ಕ್ಷಣಗಣನೆ

ಫಲಿತಾಂಶಕ್ಕೆ ಕ್ಷಣಗಣನೆ: ಮಂಗಲಾಗೆ ಹೊಣೆಯೋ, ಸತೀಶಗೆ ಮಣೆಯೋ?

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿಯ ಹಣಾಹಣಿಗೆ ಸಾಕ್ಷಿಯಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.

ಮತ ಎಣಿಕೆ ಪ್ರಕ್ರಿಯೆಯು ಇಲ್ಲಿನ ಆರ್‌ಪಿಡಿ ಕಾಲೇಜಿನಲ್ಲಿ ಭಾನುವಾರ (ಮೇ 2) ಬೆಳಿಗ್ಗೆ 8ರಿಂದ ನಡೆಯಲಿದ್ದು, ಮತದಾರರು ಯಾರಿಗೆ ಮಣೆ ಹಾಕಿದ್ದಾರೆ ಎನ್ನುವುದು ಬಹಿರಂಗಗೊಳ್ಳಲು ಕ್ಷಣಗಣನೆ ಶುರುವಾಗಿದೆ. ಕ್ಷೇತ್ರದ ನೂತನ ಸಂಸದರನ್ನಾಗಿ ಜನರು ಯಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಪ್ರಶ್ನೆಗೂ ಉತ್ತರ ದೊರೆಯಲಿದೆ.

10 ಅಭ್ಯರ್ಥಿಗಳು: ಕೇಂದ್ರ ಸಚಿವರೂ ಆಗಿದ್ದ, ಕ್ಷೇತ್ರದಲ್ಲಿ ಸತತ 4ನೇ ಬಾರಿಗೆ ಸಂಸದರಾಗಿದ್ದ ಬಿಜೆಪಿಯ ಸುರೇಶ ಅಂಗಡಿ ಅವರು ಕೋವಿಡ್–19ನಿಂದ ನಿಧನರಾದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಏ.17ರಂದು ಮತದಾನ ನಡೆದಿತ್ತು. ದಿವಂಗತ ಸುರೇಶ ಅಂಗಡಿ ಪತ್ನಿ ಮಂಗಲಾ ಸುರೇಶ ಅಂಗಡಿ (ಬಿಜೆಪಿ) ಮತ್ತು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ (ಕಾಂಗ್ರೆಸ್‌) ಪ್ರಮುಖ ಅಭ್ಯರ್ಥಿಗಳಾಗಿದ್ದರು. ಇವರಲ್ಲದೆ, ಇನ್ನೂ 8 ಮಂದಿ ಕಣದಲ್ಲಿದ್ದರು. ಶೇ 56.02ರಷ್ಟು ಮತದಾನ ಆಗಿತ್ತು. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಮತದಾನ ಪ್ರಮಾಣ ಬಹಳ ಕಡಿಮೆಯಾಗಿದೆ. ಹೀಗಾಗಿ, ಯಾರೇ ಜಯಿಸಿದರೂ ಗೆಲುವಿನ ಅಂತರ ಕಡಿಮೆಯೇ ಇರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಯಾರ ಮಡಿಲಿಗೆ?:

ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಹಾಗೂ ಕಸಿದುಕೊಳ್ಳಲು ಕಾಂಗ್ರೆಸ್‌ ತುರುಸಿನ ಪೈಪೋಟಿ ನಡೆಸಿದ್ದವು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಘಟಾನುಘಟಿ ನಾಯಕರು ಪ್ರಚಾರ ಕಣಕ್ಕಿಳಿದಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿಗಳೇ ಬಂದಿದ್ದರು. ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದ ಏ.15ರಂದೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಚಾರ ಮಾಡಿದ್ದರು. ಜ್ವರದ ನಡುವೆಯೂ ರೋಡ್‌ ಷೋ ನಡೆಸಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದರು. ಕಾಂಗ್ರೆಸ್‌ ಪಾಳೆಯದಿಂದಲೂ ಪೈಪೋಟಿ ಕಂಡುಬಂದಿತ್ತು. ಇವೆಲ್ಲದರಿಂದಾಗಿ ಉಪ ಸಮರವು ರಾಜ್ಯದ ಗಮನಸೆಳೆದಿತ್ತು. ಕೋವಿಡ್ ನಡುವೆಯೂ ಅಬ್ಬರದ ಪ್ರಚಾರ ನಡೆದಿತ್ತು. ಹೀಗಾಗಿ, ಮತದಾರರು ‘ಅನುಕಂಪದ ಅಲೆ’ಗೆ ಜೈ ಎಂದಿದ್ದಾರೆಯೋ ಅಥವಾ ವರ್ಚಸ್ಸಿಗೆ ಸೈ ಎಂದಿದ್ದಾರೆಯೋ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಇಲ್ಲಿ ಮಹಿಳೆ ಈವರೆಗೂ ಗೆದ್ದಿಲ್ಲ:

ವೀರಶೈವ ಲಿಂಗಾಯತ ಸಮಾಜದ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿ ಇದುವರೆಗೂ ಗೆದ್ದಿಲ್ಲ. ಅದೇ ಸಮಾಜದ ಮಂಗಲಾ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಅವರು ಇದೇ ಮೊದಲಿಗೆ ಚುನಾವಣಾ ರಾಜಕಾರಣಕ್ಕೆ ಬಂದಿದ್ದರು. ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಮರಾಠಾ ಸಮಾಜದೊಂದಿಗೆ ಅಹಿಂದ ಮತಗಳನ್ನು ನೆಚ್ಚಿಕೊಂಡಿದ್ದಾರೆ. ಅನುಭವ ಕೈಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಎಂಇಎಸ್ (ಮಹಾರಾಷ್ಟ್ರ ಏಕೀರಕಣ ಸಮಿತಿ) ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಶೆಳಕೆ ಕೂಡ ವ್ಯಾಪಕ ಪ್ರಚಾರ ನಡೆಸಿದ್ದರು. ಅವರ ಪ್ರಯತ್ನಕ್ಕೆ ಸಿಕ್ಕಿರುವ ಮನ್ನಣೆ ಎಷ್ಟು ಎನ್ನುವುದು ತಿಳಿದುಬರಲಿದೆ. ಯಾರು ಯಾರಿಗೆ ಬೆಂಬಲ ಕೊಟ್ಟಿದ್ದಾರೆ ಎನ್ನುವುದು ನಿರ್ಧಾರವಾಗಿದ್ದು, ಬಹಿರಂಗ ಆಗುವುದಷ್ಟೆ ಭಾನುವಾರ ನಡೆಯಲಿದೆ. ಜಾರಕಿಹೊಳಿ ಸಹೋದರರ ವರ್ಚಸ್ಸಿನ ಪಾತ್ರವೇನು ಎನ್ನುವುದು ಕೂಡ ಸ್ಪಷ್ಟವಾಗಲಿದೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಪ್ರಾಬಲ್ಯ ಹೊಂದಿದ್ದಾರೆ ಎನ್ನುವುದಕ್ಕೆ ಕನ್ನಡಿ ಹಿಡಿಯಲಿದೆ. ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರ ಅಭಿಪ್ರಾಯ ಎನ್ನುವುದು ಕೂಡ ಈ ಜನತಂತ್ರದ ಹಬ್ಬದಿಂದ ಗೊತ್ತಾಗಲಿದೆ.

ಕೋವಿಡ್–19 ವ್ಯಾಪಿಸುತ್ತಿರುವ ನಡುವೆಯೇ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಮತ ಎಣಿಕೆ ಕೇಂದ್ರದಲ್ಲಿ ಏಕಕಾಲದಲ್ಲಿ ಕಡಿಮೆ ಸಿಬ್ಬಂದಿ ಹಾಗೂ  ಟೇಬಲ್‌ಗಳನ್ನು ಬಳಸಲಾಗುತ್ತಿದೆ. ಪರಿಣಾಮ, ಅಧಿಕೃತ ಫಲಿತಾಂಶ ಪ್ರಕಟಗೊಳ್ಳುವುದಕ್ಕೆ ರಾತ್ರಿ ಆಗಬಹುದು ಎಂದು ಅಧಿಕಾರಿಗಳು ತಿಳಿಸುತ್ತಾರೆ.

***

‘ಸಿದ್ಧತೆ ಪೂರ್ಣಗೊಂಡಿದೆ’

‘ಕೊಠಡಿಯಲ್ಲಿ ಹಿಂದಿನಂತೆ 14 ಟೇಬಲ್‌ ಬದಲಿಗೆ ಕೇವಲ 2 ಟೇಬಲ್‌ಗಳನ್ನು ಬಳಸಲಾಗುತ್ತಿದೆ. ತಲಾ ಕೊಠಡಿಯಲ್ಲಿ ಎಣಿಕೆ ಸಿಬ್ಬಂದಿ ಸೇರಿ ಒಟ್ಟು 15 ಮಂದಿ ಮಾತ್ರವೇ ಇರಲಿದ್ದಾರೆ. ಮಧ್ಯಾಹ್ನ 2ರವರೆಗೆ ಒಂದು ಹಾಗೂ ಮಧ್ಯಾಹ್ನ 2ರಿಂದ 8ರವರೆಗೆ ಮತ್ತೊಂದು ಪಾಳಿಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಫಲಿತಾಂಶ ದೊರೆಯುವುದಕ್ಕೆ ರಾತ್ರಿ 8ರವರೆಗೆ ಆಗುವ ನಿರೀಕ್ಷೆ ಇದೆ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕೆ. ಹರೀಶ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಸೂಕ್ತ ಬಂದೋಬಸ್ತ್ ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. 450 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು