ಗುರುವಾರ , ಡಿಸೆಂಬರ್ 12, 2019
27 °C

ಅಧಿಕಾರ ಹೋದರೂ ಮೌಢ್ಯ ವಿರುದ್ಧದ ಹೋರಾಟ ಮುಂದುವರಿಕೆ: ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ‘ಅಧಿಕಾರ ಹೋದರೂ ಮೌಢ್ಯಗಳ ವಿರುದ್ಧದ ಹೋರಾಟ ಮುಂದುವರಿಸುತ್ತೇನೆ’ ಎಂದು ಶಾಸಕ, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಹೇಳಿದರು.

‌ತಮ್ಮ ನೇತೃತ್ವದ ಮಾನವ ಬಂಧುತ್ವ ವೇದಿಕೆಯಿಂದ ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಗುರುವಾರ ಆಯೋಜಿಸಿದ್ದ ಮೌಢ್ಯ ವಿರೋಧಿ ಪರಿವರ್ತನಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ವಿಚಾರಗಳನ್ನು ಹಳ್ಳಿ‌ಹಳ್ಳಿಗೆ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ಇದಕ್ಕಾಗಿ ವೇದಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು. ಮುಖ್ಯವಾಗಿ ಸಂವಿಧಾನ ಉಳಿಸಿಕೊಳ್ಳಲು ಹೋರಾಟ ಮುಂದುವರಿಸಲಾಗುವುದು’ ಎಂದರು.

‘ಸಂವಿಧಾನ ಬರೆದವರು, ವಚನ ಬರೆದವರು ನಾವು. ಆದರೆ ಮಾರ್ಕೆಟಿಂಗ್ ಬೇರೆಯವರು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬರೆದಿರುವ ನಾವೂ ಓದಿ ತಿಳಿದುಕೊಳ್ಳಬೇಕು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಡಿಮೆ ಖರ್ಚು ಮಾಡಿ: ‘ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಹಳ ಕಡಿಮೆ ಖರ್ಚು ಮಾಡಿ ಗೆದ್ದ ಅಭ್ಯರ್ಥಿ ಇದ್ದರೆ ಅದು ನಾನು ಮಾತ್ರ. ₹ 2 ಕೋಟಿಗೂ ಕಡಿಮೆ ಖರ್ಚು ಮಾಡಿ ಗೆದ್ದಿದ್ದೇನೆ. ಬುದ್ಧ, ಬಸವ, ಅಂಬೇಡ್ಕರ್ ವಿಚಾರ ಹಾಗೂ ಆದರ್ಶಗಳು ಇದಕ್ಕೆ ಕಾರಣ. ಮದ್ಯ ಹಂಚದೆಯೂ ಗೆದ್ದಿದ್ದೇನೆ. ಗೆಲುವಿನ ಅಂತರ ಕಡಿಮೆಯಾಗಲು ಬೇರೆ ಕಾರಣಗಳಿವೆ. ನಾನು ಪ್ರಚಾರಕ್ಕೆ ‌ಹೋಗದಿದ್ದರೂ ಜನರು ಗೆಲ್ಲಿಸಿರುವುದು ವಿಶೇಷ. ಮುಂದಿನ ದಿನಗಳಲ್ಲಿ ಲೀಡ್ ಎಷ್ಟಿರುತ್ತದೆ ಎನ್ನುವುದನ್ನು ತೋರಿಸುತ್ತೇನೆ. ಆ ರಾಜಕಾರಣವೂ ಗೊತ್ತು; ಈ ರಾಜಕಾರಣವೂ ತಿಳಿದಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ಇಂದಿನ ದಿನಗಳಲ್ಲಿ ಅಭ್ಯರ್ಥಿಯ ಕುಟುಂಬದವರು, ಅತ್ತೆ, ಮಾವ, ಸೊಸೆ ಎಲ್ಲರೂ ಬಂದು ಪ್ರಚಾರ ಮಾಡುತ್ತಾರೆ. ಆದರೆ, ನಾನಾಗಲೀ, ಕುಟುಂಬದವರಾಗಲೀ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಲಿಲ್ಲ. ನಾನು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದೆ. ನನ್ನ ವಿರುದ್ಧ ನಿಂತಿದ್ದವರು ಪೂಜೆ– ಪುನಸ್ಕಾರ ಮಾಡಿಸಿ ನಾಮಪತ್ರ ಹಾಕಿದ್ದರು. ಅವರು ಗೆದ್ದರಾ?’ ಎಂದು ಕೇಳಿದರು.

‘ಮುಂಬರುವ ಚುನಾವಣೆಯಲ್ಲೂ ಮತ್ತೆ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸಿ, ಹೆಚ್ಚು ಮತಗಳ ಅಂತರದಿಂದ ಗೆದ್ದು ತೋರಿಸುತ್ತೇನೆ. ವಾಮಮಾರ್ಗ ಬೇಡವೆಂದು ಈ ಬಾರಿ ಸುಮ್ಮನಿದ್ದೆ’ ಎಂದರು.

‘ಸ್ಮಶಾನದಲ್ಲಿ ಕಾರ್ಯಕ್ರಮ ಮಾಡಿದೆನೆಂದು ನನಗೆ ಕೆಟ್ಟದಾಗಿಲ್ಲ. ಕೇವಲ 11 ತಿಂಗಳಲ್ಲಿ ₹ 200 ಕೋಟಿ ವೆಚ್ಚದಲ್ಲಿ, ಸಕ್ಕರೆ ಕಾರ್ಖಾನೆ ಕಟ್ಟಿದ್ದೇನೆ. ಹೆಲಿಕಾಪ್ಟರ್ ಖರೀದಿಸಿದ್ದೀನಿ. ಅದಕ್ಕಿಂತ ಇನ್ನೇನು ಬೇಕು?’ ಎಂದು ಕೇಳಿದರು.

‘ಭಾಷಣ ಸ್ಪರ್ಧೆಯಲ್ಲಿ ಚೆನ್ನಾಗಿ ಭಾಷಣ ಮಾಡಿದವರಿಗೆ ಒಂದು ತಾಸು ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಲಾಗುವುದು. ಬುದ್ಧ, ಬಸವ, ಅಂಬೇಡ್ಕರ್, ಛತ್ರಪತಿ ಶಿವಾಜಿ, ಟಿಪ್ಪು ಸುಲ್ತಾನ್ ಮೊದಲಾದವರ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡುವ ಶಾಲಾ–ಕಾಲೇಜು ಮಕ್ಕಳಿಗೆ ಈ ಅವಕಾಶ ದೊರೆಯುತ್ತದೆ. ಹೆಲಿಕಾಪ್ಟರ್‌ ಅನ್ನು ಈ ವಿಷಯದಲ್ಲಿ ಬಳಸಿಕೊಳ್ಳಬಹುದು’ ಎಂದು ವೇದಿಕೆಯ ಪದಾಧಿಕಾರಿಗಳಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು