ಭಾನುವಾರ, ಮೇ 29, 2022
21 °C
ಸತೀಶ ಜಾರಕಿಹೊಳಿ ಪ್ರತಿಷ್ಠಾನದಿಂದ ವಿತರಣೆ

56,856 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜಿಲ್ಲೆಯ 915 ಪ್ರೌಢಶಾಲೆಗಳ 56,856 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೆ ಅನುಕೂಲ ಆಗಲೆಂದು ₹ 13 ಲಕ್ಷ ಮೊತ್ತದಲ್ಲಿ 15ಸಾವಿರ ‘ಗೆಲುವಿನನತ್ತ ನಮ್ಮ ಪಯಣ’ ಅಭ್ಯಾಸ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಸತೀಶ ಜಾರಕಿಹೊಳಿ ಪ್ರತಿಷ್ಠಾನದಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ವಿತರಣೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೂಡಲಗಿ ವಲಯವು 2ನೇ ಮತ್ತು 3ನೇ ಸ್ಥಾನ ಗಳಿಸುತ್ತಿದೆ. ಇದಕ್ಕೆ ಅಲ್ಲಿನ ಶಿಕ್ಷಕರ ಪ್ರಯತ್ನ ಕಾರಣ. ಆ ಶಿಕ್ಷಕರಿಂದಲೇ ಅಭ್ಯಾಸ ಪುಸ್ತಕಗಳನ್ನು ರೂಪಿಸಿದ್ದೇವೆ’ ಎಂದು ತಿಳಿಸಿದರು.

ಸದ್ಬಳಕೆ ಮಾಡಿಕೊಳ್ಳಿ:

‘ಬೆಳಗಾವಿಯು ಶೈಕ್ಷಣಿಕವಾಗಿ ಪ್ರಥಮ ಸ್ಥಾನದಲ್ಲಿರಬೇಕು ಎನ್ನುವುದು ನನ್ನ ಆಶಯ. ಇದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಅಂಕ ಗಳಿಸಬೇಕು’ ಎಂದು ಸಲಹೆ ನೀಡಿದರು.

‘ಯಮಕನಮರಡಿ ಕ್ಷೇತ್ರದ ಶಾಲೆಗಳಿಗೆ ಶಾಸಕರ ಅನುದಾನದಲ್ಲಿ 4ಸಾವಿರ ಡೆಸ್ಕ್‌ಗಳನ್ನು ವಿತರಿಸಿದ್ದು ದಾಖಲೆಯಾಗಿದೆ. ಕಂಪ್ಯೂಟರ್‌, ವಿಜ್ಞಾನ ಕಲಿಕೆ ಸಾಮಗ್ರಿಗಳನ್ನೂ ನೀಡಿದ್ದೇನೆ. ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಇತರರಿಗೆ 2 ವರ್ಷದಲ್ಲಿ ಲಕ್ಷ ಮಾಸ್ಕ್‌ಗಳನ್ನು ವಿತರಿಸಲಾಗಿದೆ’ ಎಂದು ಹೇಳಿದರು.

‘ಕೆಲವು ರಾಜಕಾರಣಿಗಳು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸುತ್ತಾರೆ. ಆದರೆ, ಮಕ್ಕಳಾದ ರಾಹುಲ್‌ ಮತ್ತು ಪ್ರಿಯಾಂಕಾಗೆ ಸ್ಥಳೀಯವಾಗಿ ಸಾಮಾಜಿಕ ಕೆಲಸದಲ್ಲಿ ತೊಡಗಲು ಸಲಹೆ ನೀಡಿದ್ದೇನೆ’ ಎಂದು ತಿಳಿಸಿದರು.

ನಮಗೂ ಮಾದರಿ:

ಮುಖಂಡ ಡಿ.ಎಂ. ಚಂದ್ರಪ್ಪ, ‘ಬಡವರು, ಹಿಂದುಳಿದವರ ಪರ ಸತೀಶ ಅವರಿಗೆ ಇರುವ ಕಾಳಜಿಯು ನಮಗೂ ಮಾದರಿಯಾಗಿದೆ’ ಎಂದು ಶ್ಲಾಘಿಸಿದರು.

ಶಾಸಕರಾದ ಪ್ರಸಾದ್ ಅಬ್ಯಯ್ಯ, ಗಣೇಶ ಹುಕ್ಕೇರಿ, ಡಾ.ಅಂಜಲಿ ನಿಂಬಾಳ್ಕರ್, ಟಿ. ರಘುಮೂರ್ತಿ, ವಿಧಾನಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡರಾದ ಅಶೋಕ ಪಟ್ಟಣ, ಎಸ್.ಬಿ. ಘಾಟಗೆ, ರಮೇಶ ಕುಡಚಿ, ಕಾಕಾಸಾಹೇಬ ಪಾಟೀಲ, ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ವೀರಕುಮಾರ ಪಾಟೀಲ, ಮುಖಂಡರಾದ ರಾಹುಲ್ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ, ಗಜಾನನ ಮಂಗಸೂಳಿ, ಬಿ.ಸೋಮಶೇಖರ್‌, ಅಶೋಕ ಪೂಜಾರಿ, ವಿಶ್ವಾಸ ವ್ಯೆದ್ಯ, ಬೆಳಗಾವಿ ಡಿಡಿಪಿಐ ಬಸವರಾಜ ನಾಲವತವಾಡ, ಚಿಕ್ಕೋಡಿ ಡಿಡಿಪಿಐ ಮೋಹನ ಹಂಚಾಟೆ ಇದ್ದರು.

ಪಕ್ಷದ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಸ್ವಾಗತಿಸಿದರು.

ನಾವೂ ರೂಢಿಸಿಕೊಳ್ಳುತ್ತೇವೆ: ಎಂ.ಬಿ. ಪಾಟೀಲ

ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ವಿತರಿಸುತ್ತಿರುವುದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಸೇನೆ, ಪೊಲೀಸ್‌ ಹುದ್ದೆ ಆಕಾಂಕ್ಷಿಗಳಿಗೆ ಅವರು ತರಬೇತಿ ಕೊಡುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆ ತರಬೇತಿಯನ್ನೂ ನೀಡಲಿ. ಆ ಸಾಮರ್ಥ್ಯ ಅವರಿಗಿದೆ. ಅದನ್ನೂ ನಾವೂ ರೂಢಿಸಿಕೊಳ್ಳುತ್ತೇವೆ’ ಎಂದು ಹೇಳಿದರು.

‘ಬುದ್ಧ, ಬಸವ, ಅಂಬೇಡ್ಕರ್‌ ದಾರಿಯಲ್ಲಿ ಸಾಗುತ್ತಿರುವ ಸತೀಶ ಮಾರ್ಗದಲ್ಲಿ ನಾವೂ ಸಾಗೋಣ. ರಾಜಕೀಯದ ಜತೆ ಸಾಮಾಜಿಕ ಕಾರ್ಯದಲ್ಲಿ ತೊಡಗುವುದನ್ನು ಅವರಿಂದ ಕಲಿಯಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಸತೀಶ ಅವರ ಜೀವನ ಸರಳತೆಯಿಂದ ಕೂಡಿದ್ದರೂ ಅವರ ವಿಚಾರಗಳು ಎತ್ತರದ ಸ್ಥಾನದಲ್ಲಿಇರುತ್ತವೆ. ಅವರ ದೂರದೃಷ್ಟಿ ಮತ್ತು ಮುಂದಾಲೋಚನೆಯಲ್ಲಿ ಸಮಾಜದ ಕಳಕಳಿ ಇರುತ್ತದೆ. ಶೈಕ್ಷಣಿಕ ರಂಗದಲ್ಲಿ ಜಿಲ್ಲೆಗೆ ಅವರ ಕೊಡುಗೆ ಅಪಾರವಾಗಿದೆ. ಅವರ ಕಾರ್ಯಗಳಿಗೆ ಮಕ್ಕಳಾದ ರಾಹುಲ್‌, ಪ್ರಿಯಾಂಕಾ ಸಾಥ್‌ ನೀಡುತ್ತಿರುವುದು ಅಭಿನಂದನಾರ್ಹ’ ಎಂದು ತಿಳಿಸಿದರು.

ಸರ್ಕಾರ ರಾಜ್ಯದಾದ್ಯಂತ ಮಾಡಲಿ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅನುಕೂಲವಾಗುವ ಪುಸ್ತಕ ವಿತರಣೆ ಕಾರ್ಯವನ್ನು ಸತೀಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಮಾಡುತ್ತಿದ್ದಾರೆ. ಸರ್ಕಾರ ಈ ಕಾರ್ಯವನ್ನು ರಾಜ್ಯದಾದ್ಯಂತ ಮಾಡಲಿ.

–ಎಂ.ಬಿ. ಪಾಟೀಲ, ಶಾಸಕ

ಅರ್ಥಪೂರ್ಣವಾಗಿರುತ್ತದೆ

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಏಕೈಕ ರಾಜಕಾರಣಿ ಏಂದರೆ ಸತೀಶ ಜಾರಕಿಹೊಳಿ. ಅವರು ಯಾವುದೇ ಕಾರ್ಯಕ್ರಮ ಮಾಡಿದರೂ ಬಹಳ ಅರ್ಥಪೂರ್ಣವಾಗಿರುತ್ತದೆ.

–ಲಕ್ಷ್ಮಿ ಹೆಬ್ಬಾಳಕರ, ಶಾಸಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.