ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಬಳಕೆ: ವಕೀಲರಿಗೆ ಸಲಹೆ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
Last Updated 20 ನವೆಂಬರ್ 2020, 15:09 IST
ಅಕ್ಷರ ಗಾತ್ರ

ಬೆಳಗಾವಿ: ‘ತೀವ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಯುವ ವಕೀಲರು ಕಾನೂನು ಅಧ್ಯಯನದ ಜೊತೆಗೆ ತಂತ್ರಜ್ಞಾನ ಬಳಕೆಯ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯವಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ಎಂ. ಜೋಶಿ ಹೇಳಿದರು.

ಇಲ್ಲಿನ ಕರ್ನಾಟಕ ಕಾನೂನು ಸಮಿತಿಯ ರಾಜಾ ಲಖಮಗೌಡ ಕಾನೂನು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಕ್ರವಾರ ಪುರಸ್ಕಾರ ವಿತರಿಸುವ ಸಾಂಕೇತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನ್ಯಾಯಾಂಗವೂ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ. ವಕೀಲರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಭಾರತ ಸುಪ್ರೀಂ ಕೋರ್ಟ್ ಚಿಂತನೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಿ, ಬೆಳಗಾವಿಯ ನ್ಯಾಯಾಲಯಗಳು ಕೂಡ ಮುಂದಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡುವ ತಯಾರಿಯಲ್ಲಿವೆ’ ಎಂದು ಹೇಳಿದರು.

ಕೌಶಲ ಅಗತ್ಯ:

‘ಕಾನೂನು ವಿದ್ಯಾರ್ಥಿಗಳು ಸಂವಹನ ಕೌಶಲ ಮತ್ತು ಸರ್ವಾಂಗೀಣ ವ್ಯಕ್ತಿತ್ವ ಅಭಿವೃದ್ಧಿಯ ಹೊರತಾಗಿ ಆಧುನಿಕ ತಂತ್ರಜ್ಞಾನದ ಬಳಕೆಯಂತಹ ಹೊಸ ಕೌಶಲಗಳನ್ನೂ ಕಲಿತುಕೊಳ್ಳಬೇಕು. ‘ವೃತ್ತಿಗಳ ಭವಿಷ್ಯ’ ಎನ್ನುವ ಪುಸ್ತಕ ಬರೆದ ರಿಚರ್ಡ್ ಸಸ್ಕೈಂಡ್‌ನಂತಹ ಚಿಂತಕರು ಮುಂದಿನ ವರ್ಷಗಳಲ್ಲಿ ವಕೀಲರು ಕನಿಷ್ಠ ಶೇ 60ರಷ್ಟು ವ್ಯಾಜ್ಯಗಳನ್ನು ಆನ್‌ಲೈನ್‌ನಲ್ಲಿ ಮಂಡಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ’ ಎಂದು ತಿಳಿಸಿದರು.

‘ಆಧುನಿಕ ತಂತ್ರಜ್ಞಾನದಲ್ಲಿನ ಬದಲಾವಣೆಗಳಷ್ಟು ವೇಗವಾಗಿ ಶಿಕ್ಷಣ ವ್ಯವಸ್ಥೆ ಮತ್ತು ಕಾನೂನು ಕ್ಷೇತ್ರವು ಬದಲಾಗುತ್ತಿಲ್ಲ ಎಂದು ಕೆಲವರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಯುವ ಪದವೀಧರರು ಕಾನೂನು ಮತ್ತು ತಾಂತ್ರಿಕ ಬೆಳವಣಿಗೆಗಳನ್ನು ತಿಳಿದಿರಬೇಕು’ ಎಂದು ಸಲಹೆ ನೀಡಿದರು.

‘ಆರ್.ಎಲ್. ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಎಂ ಕೋರ್ಸ್ ಪ್ರಾರಂಭಿಸಲು ನಿರ್ಧರಿಸಲಾಗಿದೆ’ ಎಂದು ಕಾಲೇಜಿನ ಆಡಳಿತ ಮಂಡಳಿ ಸದಸ್ಯ ವಿವೇಕ ಕುಲಕರ್ಣಿ ತಿಳಿಸಿದರು.

ಎಂ.ಕೆ. ನಂಬಿಯಾರ್ ಸ್ಮಾರಕ ಚಿನ್ನದ ಪದಕವನ್ನು ‘ಸಾಂವಿಧಾನಿಕ ಕಾನೂನು’ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿಜಯ್ ಕುಮಾರ್ ಬುದರಿ ಅವರಿಗೆ ನೀಡಿದರು. ಆ ಪದಕವನ್ನು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ತಂದೆಯ ಸ್ಮರಣಾರ್ಥ ಸ್ಥಾಪಿಸಿದ್ದಾರೆ.

ಪ್ರಾಂಶುಪಾಲ ಡಾ.ಅನಿಲ ಹವಾಲ್ದಾರ್, ಪ್ರೊ.ಪಿ.ಎ. ಯಜುರ್ವೇದಿ ಇದ್ದರು.

ವಿದ್ಯಾರ್ಥಿಗಳಾದ ಸಚಿದಾನಂದ ಪಾಟೀಲ, ತೃಪ್ತಿ ಸಡೆಕರ, ಮೇಘಾ ಸೋಮಣ್ಣನವರ, ಅಂಕಿತಾ ಪಾಟೀಲ, ಸಚಿನ ಚವಾಣ್ ಅನಿಸಿಕೆ ಹಂಚಿಕೊಂಡರು. ಅನುಜಾ ಬೆಳಗಾಂವಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT