ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಳುತ್ತಿರುವ ಅಣಬೆ ಬೀಜೋತ್ಪಾದನಾ ಕೇಂದ್ರ!

Last Updated 6 ಅಕ್ಟೋಬರ್ 2014, 8:50 IST
ಅಕ್ಷರ ಗಾತ್ರ

ಬೆಳಗಾವಿ: ಈ ಕೇಂದ್ರಕ್ಕೆ ಬೀಗ ಜಡಿದು ಈಗಾಗಲೇ 22 ವರ್ಷಗಳು ಕಳೆದಿವೆ. ಯಂತ್ರೋಪಕರಣಗಳು ತುಕ್ಕು ಹಿಡಿದು, ಹಾಳಾಗುತ್ತಿವೆ. ಕಟ್ಟಡದ ಸ್ಥಿತಿಯಂತೂ ಹೇಳ ತೀರದು.

ಇದು ನಗರದ ಹೃದಯ ಭಾಗದಲ್ಲಿರುವ ಬೆಳಗಾವಿಯ ಹ್ಯೂಮ್‌ ಪಾರ್ಕ್‌ ಆವರಣದಲ್ಲಿ ತೋಟಗಾರಿಕೆ ಇಲಾಖೆಯ ಅಣಬೆ ಬೀಜೋತ್ಪಾದನಾ ಕೇಂದ್ರದ ಇಂದಿನ ಸ್ಥಿತಿಗತಿ.

ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 1992ರಲ್ಲಿ ರಾಜ್ಯ ಸರ್ಕಾರ ನಗರದಲ್ಲಿ ಆರಂಭಿಸಿದ ಅಣಬೆ ಬೀಜೋತ್ಪಾದನಾ ಕೇಂದ್ರ ಇಂದು ಪಾಳು ಬಿದ್ದಿದೆ. ತೋಟಗಾರಿಕೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಭೂತಬಂಗಲೆಯಾಗಿ ಮಾರ್ಪಾಡು ಹೊಂದಿದೆ. ಸುತ್ತಲೂ ಕಸ ಬೆಳೆದಿದ್ದು, ಬಾಗಿಲುಗಳು, ಯಂತ್ರಗಳು ತುಕ್ಕು ಹಿಡಿದಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಣಬೆ ಬೆಳೆಯು ಬಹು ಬೇಡಿಕೆಯಲ್ಲಿರುವುದರಿಂದ ರಾಜ್ಯ ಸರ್ಕಾರ ಅಣಬೆ ಬೀಜೋತ್ಪಾದನೆ ಕೇಂದ್ರ­ವನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭಿಸಿತು. ಆರು ತಿಂಗಳವರೆಗೆ ಬೀಜ ಉತ್ಪಾದನೆಗೆ ಬೇಕಾಗುವ ಕಟ್ಟಡ ಹಾಗೂ ಯಂತ್ರಗಳನ್ನು ತಂದು ಸಿದ್ದ ಪಡಿಸಿತು. ನಂತರ ಇದಕ್ಕಾಗಿ ತೋಟಗಾರಿಕೆ ಸಹಾಯ ನಿರ್ದೇಶಕ­ರನ್ನು ಸಹ ನೇಮಿಸಿತು. ಆದರೆ, ಈಗ ಇವೆಲ್ಲವೂ ಮಾಯವಾಗಿದೆ. ಬೀಜೋತ್ಪಾದನಾ ಕೇಂದ್ರ ಸ್ತಬ್ಧಗೊಂಡಿದ್ದು, ಯಾರೂ ಕೇಳದಂತಾಗಿದೆ.

ಅಣಬೆ ಬೀಜೋತ್ಪಾದನ ಕೇಂದ್ರಕ್ಕೆ ಹೆಚ್ಚಿನ ಸೌಲಭ್ಯ ನೀಡುವ ಉದ್ದೇಶದಿಂದ ಸರ್ಕಾರ 1997 ಜನೇವರಿ 28 ರಂದು ಬೆಳಗಾವಿ ವಿಭಾ­ಗದ ಅಣಬೆ ಬೀಜೋತ್ಪಾದನೆ ಪ್ರಯೋಗಾಲ­ಯ­ವನ್ನು ಸಹ ಸ್ಥಾಪಿಸಿತು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ಕೊರಗು ರೈತರಲ್ಲಿ ಈವರೆಗೂ ಕಾಡುತ್ತಿದೆ.

ಅಣಬೆಯಲ್ಲಿ ವಿಟಾಮಿನ್ ಬಿ2 ಮತ್ತು ಬಿ3 ಇರುವುದರಿಂದ ದೇಹಕ್ಕೆ ಹೆಚ್ಚು ಅಗತ್ಯ. ಅಲ್ಲದೆ ಇದು ಕಡಿಮೆ ಕಾರ್ಬೋಹೈಡ್ರೈಡ್ ಹೊಂದಿದ್ದು, ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಬೊಜ್ಜು ಸುಲಭವಾಗಿ ಕರಗಿಸುತ್ತದೆ. ರೋಗಗಳಿಂದ ದೂರವಿರಿಸಲು ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗಿಸುವುದರ ಜೊತೆಗೆ  ಸೋಂಕುಗಳಿಗೆ ತುತ್ತಾಗುವುದನ್ನು ತಡೆಯುತ್ತದೆ. ರಕ್ತಹೀನತೆ ನಿವಾರಿಸುವ ಕಬ್ಬಿಣಾಂಶ ಮತ್ತು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಹೀಗೆ ಹಲವು ರೀತಿಯಲ್ಲಿ ಅಣಬೆ ಬೆಳೆಯು ಉಪಯೋಗವಾಗುತ್ತದೆ.

ಕೃಷಿ ಜೊತೆಗೆ ಅಣಬೆ ಬೇಸಾಯ ಸಹ ಮಾಡಿದರೆ ರೈತರಿಗೆ ಹೆಚ್ಚಿನ ಆರ್ಥಿಕ ಸಫಲತೆ ಸಿಗುತ್ತದೆ. ಅದೇ ಉದ್ದೇಶದಿಂದ ಸರ್ಕಾರ ಈ ಕೇಂದ್ರವನ್ನು ಪ್ರಾರಂಭಿಸಿತು. ಆದರೆ, ರೈತರ ನೆರವಿಗೆ ಈ ಕೇಂದ್ರ ಬರಲೇ ಇಲ್ಲ. ಸರ್ಕಾರದ ಹಣ ‘ಹೊಳೆ’ಯಲ್ಲಿ ಹರಿದಂತಾಗಿದೆ.

‘ಜಿಲ್ಲೆಯಲ್ಲಿ ಅಣಬೆ ಬೀಜೋತ್ಪಾದನೆ ಕೇಂದ್ರ ಇದೆ ಎಂದು ಗೊತ್ತಿಲ್ಲ. ಈ ಕುರಿತು ಯಾವೊಬ್ಬ ಅಧಿಕಾರಿಗಳು ಪ್ರಚಾರ ಮಾಡಿಲ್ಲ. ರೈತರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಗೋಜಿಗೆ ಯಾರೂ ಮುಂದಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತರು ಸೌಲಭ್ಯದಿಂದ ವಂಚಿತರಾಗಬೇಕಿದೆ’ ಎಂದು ರೈತ ಮಲ್ಲಿಕಾರ್ಜುನ ಪಾಟೀಲ ಹೇಳುತ್ತಾರೆ.

‘ಅಣಬೆ ಬೀಜೋತ್ಪಾದನೆ ಕೇಂದ್ರದ ಸ್ಥಿತಿ ಬಗ್ಗೆ ಮಾಹಿತಿ ಇದೆ. ಸದ್ಯ ಕಟ್ಟಡದ ಹಾಗೂ ಯಂತ್ರಗಳ ದುರಸ್ತಿ ಕೆಲಸ ನಡೆದಿದೆ. ಇಲ್ಲಿಯೇ ಸುಸಜ್ಜಿತ ತರಬೇತಿ ಕೇಂದ್ರ ಆರಂಭಿಸುವ ಪ್ರಸ್ತಾವ ಇದೆ. ಇದಕ್ಕಾಗಿ ಇಲಾಖೆಯಿಂದ ಅನುದಾನ ಸಹ ಮಂಜೂರಾಗಿದೆ.

ಈ ತಿಂಗಳಾಂತ್ಯದೊಳಗೆ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳಲಿದ್ದು, ತರಬೇತಿ ಆರಂಭಿಸಲಾ­ಗುವುದು. ಪ್ರತಿ ಎರಡು ತಿಂಗಳಿಗೊಮ್ಮೆ ತರಬೇತಿ ನಡೆಸಲಾಗುವುದು’ ಎಂದು ತೋಟ­ಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT