ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನದ ದಣಿವಲ್ಲೂ ಮಂದಹಾಸ

Last Updated 15 ಮಾರ್ಚ್ 2011, 7:05 IST
ಅಕ್ಷರ ಗಾತ್ರ

ಬೆಳಗಾವಿ: ವಿಶ್ವಕನ್ನಡ ಸಮ್ಮೇಳನ ಕುರಿತ ದುಗುಡ, ಗಡಿಬಿಡಿ, ಆತಂಕಕ್ಕೆಲ್ಲ ಇದೀಗ ತೆರೆಬಿದ್ದಿದೆ. ಮೂರು ದಿನಗಳ ಕಾಲ ಸಮ್ಮೇಳನ ಯಶಸ್ವಿಯಾಗಿ ನಡೆದಿರುವ ಬಗ್ಗೆ ಇಲ್ಲಿನ ಜನತೆ ಮಂದಹಾಸ ಬೀರುತ್ತಿದ್ದಾರೆ. ಯಶಸ್ವಿ ಸಮ್ಮೇಳನದಿಂದ ಗಡಿನಾಡು ಕನ್ನಡಿಗರ ಆತ್ಮವಿಶ್ವಾಸ ಮತ್ತಷ್ಟು ಬಲಗೊಂಡಿದೆ.ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಸಮ್ಮೇಳನದ ಯಶಸ್ಸು ಅವರ ದಣಿವನ್ನೂ ಮರೆಮಾಚಿಸಿದೆ. ಸೋಮವಾರದಂದು ಇಲ್ಲಿಯ ಎಲ್ಲರ ಬಾಯಲ್ಲೂ ಒಂದೇ ಮಾತು, ‘ಸಮ್ಮೇಳನ ಭಾರಿ ನಡೀತ್ರಿ, ಯಾ ಪರಿ ಮಂದಿ ಕೂಡಿದ್ರಿ’ ಎಂದು ಮುಖವರಳಿಸಿ ಹೇಳುತ್ತಿದ್ದರು!

ಅಂದರೆ ಸಂಘಟಕರ ನಿರೀಕ್ಷೆಗೂ ಮೀರಿ ಸಮ್ಮೇಳನ ಯಶಸ್ವಿಯಾಗಿದೆ. ಇಷ್ಟೊಂದು ಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳಬಹುದು ಎಂದು ಯಾರೂ ಭಾವಿಸಿರಲಿಲ್ಲ. ಎಲ್ಲರ ನಿರೀಕ್ಷೆಯನ್ನು ನಾಡಿನ ನಾಗರಿಕರು ಹುಸಿಗೊಳಿಸಿದ್ದಾರೆ. ಮೂರು ದಿನಗಳ ಕಾಲ ಲಕ್ಷೋಪಲಕ್ಷ ಜನರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಕನ್ನಡದ ಜಾತ್ರೆ ಮಾಡಿ ಮರಳಿದ್ದಾರೆ.

ಇತಿಹಾಸ ಸೃಷ್ಟಿ: ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನ ಇತಿಹಾಸ ಸೃಷ್ಟಿಸಿದೆ. ‘ಕನ್ನಡ ಸಮ್ಮೇಳನವೊಂದರಲ್ಲಿ ಇಷ್ಟೊಂದು ಜನರು ಭಾಗವಹಿಸಿದ್ದನ್ನು ಈ ಹಿಂದೆಂದೋ ಕಂಡಿರಲಿಲ್ಲ’ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಿ. ವೆಂಕಟಸುಬ್ಬಯ್ಯ, ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ಮತ್ತಿತರರು ಆಗಲೇ ಉದ್ಘರಿಸಿದ್ದಾರೆ. ಸಮ್ಮೇಳನ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಕನ್ನಡದ ಅಭಿಮಾನ ಉಕ್ಕಿ ಹರಿದಿದೆ ಎಂಬ ಬಗ್ಗೆ ಈಗ ಅನುಮಾನಗಳಿಲ್ಲ.

ಪ್ರಚಾರದ ಕೊರತೆ: ವಿಶ್ವ ಕನ್ನಡ ಸಮ್ಮೇಳದ ಧ್ಯೇಯೋದ್ದೇಶಕ್ಕೆ ತಕ್ಕಂತೆ ಒಟ್ಟು 18 ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ಆದರೆ ಅವುಗಳ ಕುರಿತು ವ್ಯವಸ್ಥಿತ ಪ್ರಚಾರ ಇಲ್ಲದಿರುವುದು ಸಾಬೀತಾಗಿವೆ.  ಕೆಲವೇ ಪ್ರಮುಖ ವೇದಿಕೆಗಳ ಗೋಷ್ಠಿಗಳನ್ನು ಹೊರತು ಪಡಿಸಿದರೆ ಉಳಿದವು ‘ಖಾಲಿ’ ಹೊಡೆದವು. ಜತೆಗೆ ಕನ್ನಡಪರ ಚಿಂತನೆಗಳತ್ತ ಸಾರ್ವಜನಿಕರ ನಿರಾಸಕ್ತಿಯೂ ಎದ್ದುಕಂಡಿತು.

ಬೆಂಗಳೂರಿನಲ್ಲೋ ಅಥವಾ ಇನ್ನಾವುದೋ ಪಟ್ಟಣದಲ್ಲಿ ಇಂತಹ ವಿಚಾರಗೋಷ್ಠಿಗಳನ್ನು ಏರ್ಪಡಿಸಿದರೆ ‘ಇಷ್ಟೂ ಜನರು ಬರುವುದಿಲ್ಲ’ ಎನ್ನುತ್ತ ಸಂಘಟಕರು ಉತ್ಸಾಹದಿಂದಲೇ ಗೋಷ್ಠಿ ನಡೆಸಿದರು. ಆದರೆ ಗೋಷ್ಠಿಗಳಲ್ಲಿ ಯಾರು ಇರಬೇಕಿತ್ತೋ ಅವರೇ ಕಾಣಲಿಲ್ಲ. ಉದಾಹರಣೆಗೆ ‘ದೇಶಿ ಚಿಂತನೆ’ ಗೋಷ್ಠಿಯಲ್ಲಿ ಯುವಕರಿಗಿಂತ ವಯಸ್ಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ‘ವಿಜ್ಞಾನ, ತಂತ್ರಜ್ಞಾನ’ ಗೋಷ್ಠಿಯಲ್ಲಿ ಪದವೀಧರರ ಸಂಖ್ಯೆ ಕಡಿಮೆ ಇದ್ದಂತೆ ಭಾಸವಾಯಿತು. ‘ಕೃಷಿ ಸಾಧನೆ’ ಗೋಷ್ಠಿಯಲ್ಲಿ ರೈತರ ನಿರಾಸಕ್ತಿ ಎದ್ದು ಕಂಡಿತು, ಇತ್ಯಾದಿ, ಇತ್ಯಾದಿ...

ಸಂದೇಶ: ‘ಸಮ್ಮೇಳನದ ಪ್ರಮುಖ ವೇದಿಕೆಗಳ ಸುತ್ತ, ಮುತ್ತ ನೆರೆದ ಜನಸ್ತೋಮ ಕನ್ನಡ ವಿರೋಧಿಗಳಿಗೆ ಸೂಕ್ತ ಸಂದೇಶ ರವಾನಿಸಿದೆ. ಕನ್ನಡಿಗರೆಲ್ಲ ಒಂದು ಎನ್ನುವುದು ಇದರಿಂದ ಸಾಬೀತಾಗಿದೆ. ಒಗ್ಗಟ್ಟು ತೋರಿಸಿದ್ದೇವೆ’ ಎಂದು ಕನ್ನಡ ಸಂಘಟನೆಯೊಂದರ ಕಾರ್ಯಕರ್ತ ಆನಂದ ಪಾಟೀಲ ಹೇಳಿದರು.‘ಆಗಲೇ ಒಳ ಜಗಳದಿಂದ ನುಚ್ಚು ನೂರಾಗಿರುವ ಮಹಾರಾಷ್ಟ್ರ ಏಕೀಕರಣ ಮುಖಂಡರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಕನ್ನಡಿಗರ ಶಕ್ತಿ ಏನೆಂಬುದನ್ನು ಸಮ್ಮೇಳನ ಸಾಬೀತು ಪಡಿಸಿದೆ, ಎಂಇಎಸ್‌ನ ಜಂಘಾಬಲ ಉಡಗಿಹೋಗಿದೆ’ ಎಂದು ಅಥಣಿಯ ವಿಶಾಲಾಕ್ಷಿ ಹೇಳುತ್ತಿದ್ದರು.

ವೇದಿಕೆ ಮೆರುಗು: ವಿಶ್ವ ಕನ್ನಡ ಸಮ್ಮೇಳನದ ಪ್ರಮುಖ ಕಾರ್ಯಕ್ರಮಗಳು ನಡೆದ ಜಿಲ್ಲಾ ಕ್ರೀಡಾಂಗಣದ ರಾಣಿ ಚೆನ್ನಮ್ಮ ವೇದಿಕೆ ವೀಕ್ಷಿಸಲು ಸೋಮವಾರ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದರು. ಕಳೆದ ಮೂರು ದಿನಗಳಿಂದ ಗಣ್ಯರಿಂದ ಕಲಾವಿದರಿಂದ ತುಂಬಿಹೋಗಿದ್ದ ವೇದಿಕೆ ಸೋಮವಾರ ಸಾರ್ವಜನಿಕರಿಂದ ತುಂಬಿತ್ತು. ಅಲ್ಲೇ ಕೆಲವರು ಚಿತ್ರ ತೆಗೆಸಿಕೊಳ್ಳುತ್ತಿದ್ದರು. ವಿವಿಧ ಭಾವ, ಭಂಗಿಗಳನ್ನು ಪ್ರದರ್ಶಿಸುತ್ತಿರುವ ದೃಶ್ಯಗಳೂ ಕಂಡು ಬಂದವು.

ಅವಶೇಷ: ‘ಜಾತ್ರೆ ಮುಗಿದ ಮೇಲೆ ಕಸ- ಕಡ್ಡಿ ರಾಶಿ’ ಎಂಬಂತೆ ಬೆಳಗಾವಿ ನಗರವೂ ಅದಕ್ಕೆ ಹೊರತಾಗಿರಲಿಲ್ಲ. ಪ್ರಮುಖ ವೇದಿಕೆಗಳು, ಊಟದ ಪೆಂಡಾಲ್‌ಗಳು, ಮುಖ್ಯ ರಸ್ತೆಗಳಲ್ಲಿ ಸಾಕಷ್ಟು ಕಸಕಡ್ಡಿ ತುಂಬಿಕೊಂಡಿತ್ತು.  ಸಮ್ಮೇಳನ ಸಂದರ್ಭದಲ್ಲಿ ಪಲ್ಯ, ಸಾರಿನ ಸುವಾಸನೆ ಬೀರುತ್ತಿದ್ದ ಅಡುಗೆ ಮನೆಗಳು ಒಂದಿಷ್ಟು ನಾರುತ್ತಿದ್ದವು. ಎದುರಿನ ಪೆಂಡಾಲ್ ಭಣಗುಟ್ಟುತ್ತಿತ್ತು. ಶಾಲಾ, ಕಾಲೇಜು, ವಸತಿ ನಿಲಯ ಮೊದಲಾದ ವಿವಿಧ ವಸತಿ ಸ್ಥಳಗಳಲ್ಲೂ ಅಂತಹುದೇ ಪರಿಸ್ಥಿತಿ ಇತ್ತು. ಎಲ್ಲಾ ಕಡೆ ಸ್ವಚ್ಛಗೊಳಿಸುವ ಕಾರ್ಯ ಭರದಿಂದ ನಡೆದಿತ್ತು. ಶುಚಿಗೊಳಿಸುವ ಉದ್ದೇಶದಿಂದಲೇ ಸೋಮವಾರವೂ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಬೀಳ್ಕೊಡುಗೆ: ಬಸ್ ನಿಲ್ದಾಣ ಜನರಿಂದ ತುಂಬಿತ್ತು. ವಿವಿಧ ಊರುಗಳಿಂದ ಬಂದ ಪ್ರಯಾಣಿಕರು ಅಲ್ಲಿ ನೆರೆದಿದ್ದರು. ಅವರನ್ನು ಬೀಳ್ಕೊಡಲು ಬಂದವರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಬೆಳಗಾವಿಯ ಕುಂದಾ ಅಂಗಡಿಗಳ ಮುಂದೆ ಇಂದೂ ರಶ್ ಇತ್ತು.

ಸಂತಸ:  ‘ಸಮ್ಮೇಳನ ಸಂದರ್ಭದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯಲ್ಲಿ ಆಗಿರುವ ಸಣ್ಣ,ಪುಟ್ಟ ಲೋಪಗಳನ್ನು ಹೊರತುಪಡಿಸಿದರೆ ಒಟ್ಟಾರೆ ಸಮ್ಮೇಳನ ಯಶಸ್ವಿಯಾಯಿತು’ ಎಂದು ಸಮ್ಮೇಳನದ ವಿಶೇಷಾಧಿಕಾರಿ ಆರ್.ಟಿ.ವಿಠ್ಠಲಮೂರ್ತಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT