ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 56 ಲಕ್ಷ ವೇತನ ಬಾಕಿ!

ಪಂಚಾಯ್ತಿ ತಂತ್ರಾಂಶ ತಂದ ಫಜೀತಿ, ನೌಕರರಿಗೆ ತೊಂದರೆ
Last Updated 17 ಡಿಸೆಂಬರ್ 2018, 12:55 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಗೆ ಮೇಲ್ದರ್ಜೆಗೇರಿದ ನಂತರ ಮಾಹಿತಿ ಮತ್ತು ವೇತನ ಪಾವತಿಸಲು ಕರ್ನಾಟಕ ಸರ್ಕಾರ ತಂದ ‘ಎಫ್‌ಬಿಎಎಸ್’ ತಂತ್ರಾಂಶದಿಂದಾಗಿ ಪೌರಕಾರ್ಮಿಕರ ಸಂಬಳಕ್ಕಾಗಿ ಪರದಾಡುವ ಪರಿಸ್ಥಿತಿ ಬಂದಿದೆ ಎಂದು ನೌಕರರು ದೂರುತ್ತಾರೆ.

‘ನೂತನ ತಂತ್ರಾಂಶದಿಂದಾಗಿ ಕಿತ್ತೂರು ಪಟ್ಟಣ ಪಂಚಾಯ್ತಿಯ ಪೌರಕಾರ್ಮಿಕರು, ವಾಲ್ವ್ ಮನ್‌ಗಳು, ಬಿಲ್ ಕಲೆಕ್ಟರ್‌ಗಳು ಮತ್ತು ಕಂಪ್ಯೂಟರ್ ಅಪರೇಟರ್ ವೇತನ ಬಾಕಿ ₹ 56 ಲಕ್ಷಕ್ಕೇರಿದೆ’ ಎಂದು ಪಟ್ಟಣ ಪಂಚಾಯ್ತಿ ನೌಕರ ಸಂಘಟನೆ ಅಧ್ಯಕ್ಷ ತಿಪ್ಪಣ್ಣ ಚುಳಕಿ ಮತ್ತು ಸದಸ್ಯರಾದ ಮಂಜುನಾಥ್ ಚಿನ್ನನ್ನವರ ಮಾಹಿತಿ ನೀಡಿದರು.

‘ರಾಜ್ಯದಲ್ಲಿ 57 ಮತ್ತು ಜಿಲ್ಲೆಯಲ್ಲಿ 17 ಮೇಲ್ದರ್ಜೆಗೇರಿದ ಪಟ್ಟಣ ಪಂಚಾಯ್ತಿಗಳ ನೂರಾರು ಪೌರಕಾರ್ಮಿಕರು ಇದೇ ರೀತಿ ತೊಂದರೆ ಅನುಭವಿಸುತ್ತಿದ್ದಾರೆ. ಇವರ ಸಂಕಷ್ಟ ಸರ್ಕಾರಕ್ಕೆ ಅರ್ಥವಾಗದಂತಾಗಿದೆ. ನಿತ್ಯದ ಜೀವನ ನಡೆಸಲು ನಾವು ಯಮಸಾಹಸ ಪಡುವಂತಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

ಮೊದಲು ಸರಿಯಿತ್ತು:

‘ಹೊಸದಾಗಿ ಮೇಲ್ದರ್ಜೆಗೇರಿದ ನಂತರ 6 ತಿಂಗಳವರೆಗೆ ನಮಗೆಲ್ಲ ವೇತನ ನೀಡಲಾಯಿತು. ಆದರೆ, ಈ ತಂತ್ರಾಂಶಕ್ಕೆ ಸರ್ಕಾರ ಶರಣು ಹೋದ ನಂತರ ನಮ್ಮ ವೇತನದ ಪಡಿಪಾಟಲು ಆರಂಭವಾಯಿತು. ಗ್ರಾಮ ಪಂಚಾಯ್ತಿಯಿಂದ ಜಿಲ್ಲಾ ಪಂಚಾಯ್ತಿಗೆ ಅನುಮೋದನೆ ಮಾಡಲಾದ ಪೌರಕಾರ್ಮಿಕರು ಮತ್ತು ನೌಕರರ ಹೆಸರುಗಳನ್ನು ಈ ತಂತ್ರಾಂಶ ತೆಗೆದುಕೊಳ್ಳಲು ಆರಂಭಿಸಿತು. ಕಿತ್ತೂರು ಗ್ರಾಮ ಪಂಚಾಯ್ತಿಯಲ್ಲಿ ಪೌರಕಾರ್ಮಿಕರು ಸೇರಿದಂತೆ ಒಟ್ಟು 36 ಮಂದಿ ಸಿಬ್ಬಂದಿ ಇದ್ದು, ಅದರಲ್ಲಿ ಒಬ್ಬ ವಾಲ್ವಮನ್ ನೌಕರನನ್ನು ಈ ತಂತ್ರಾಂಶ ಮುಂದುವರಿಸಿತು. ಬಾಕಿ ಕಾರ್ಮಿಕರು ಮತ್ತು ನೌಕರರ ಹೆಸರುಗಳು ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ಪಡೆಯಲಿಲ್ಲ. ಹೀಗಾಗಿ ನಾವೆಲ್ಲ ತೊಂದರೆ ಅನುಭವಿಸುವಂತಾಗಿದೆ’ ಎಂದು ವಿವರಿಸಿದರು.

‘ಕಿತ್ತೂರು ಮೊದಲು ಗ್ರೇಡ್ 1 ಗ್ರಾಮ ಪಂಚಾಯ್ತಿ ಮಾನ್ಯತೆ ಪಡೆದಿತ್ತು. ಇತಿಹಾಸ ಪ್ರಸಿದ್ಧ ಊರಾಗಿರುವುದರಿಂದ ಇಲ್ಲಿ ಒಟ್ಟು 25 ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದರು. ವಾಟರ್‌ಮನ್, ಬಿಲ್ ಕಲೆಕ್ಟರ್, ಅಟೆಂಡರ್, ಕಂಪ್ಯೂಟರ್ ಅಪರೇಟರ್ ಮತ್ತು ಚಾಲಕರು ಸೇರಿ ಒಟ್ಟು ಈ ಸಂಖ್ಯೆ 35 ಆಗುತ್ತಿತ್ತು. ಅವರ ಹೆಸರುಗಳನ್ನು ಜಿಲ್ಲಾ ಪಂಚಾಯ್ತಿಗೆ ಕಳುಹಿಸಿರಲಿಲ್ಲ. ಹೀಗಾಗಿ ಈ ತೊಂದರೆ ಇಂದು ನಮಗೆಲ್ಲ ಬಂದೊದಗಿದೆ’ ಎಂದು ಅವರು ಹೇ‌ಳಿದರು.

‘ಜಿಲ್ಲಾ ಪಂಚಾಯ್ತಿಯಲ್ಲಿ ಅನುಮೋದನೆ ಪಡೆದುಕೊಂಡಿರುವ ನೌಕರರು ಈಗಾಗಲೇ ವೇತನ ಪಡೆಯುತ್ತಿದ್ದಾರೆ. ಆದರೆ ಆ ಭಾಗ್ಯ ನಮಗಿಲ್ಲ. 16 ತಿಂಗಳಾಯ್ತು, ಮಕ್ಕಳ ಶಾಲೆ ಶುಲ್ಕ, ಆಸ್ಪತ್ರೆ ಖರ್ಚು, ಹಬ್ಬ, ಹರಿದಿನಗಳ ಖರ್ಚು ತೂಗಿಸುವುದು ತೀರಾ ಕಷ್ಟವಾಗಿದೆ. ಒಂದೂವರೆ ವರ್ಷದಿಂದ ನಾವು ಖುಷಿಯಿಂದ ಹಬ್ಬವನ್ನು ಆಚರಿಸಿಲ್ಲ. ಮಕ್ಕಳಿಗೆ ಕೆಲವರು ಹೊಸಬಟ್ಟೆ ತಂದುಕೊಟ್ಟಿಲ್ಲ. ದಿನಸಿ ಅಂಗಡಿಯವರು ನಿತ್ಯದ ವಸ್ತುಗಳನ್ನು ಸಾಲ ಕೊಡುವುದಿಲ್ಲ. ಹೀಗಾಗಿ ನಾವು ಹೊಟ್ಟೆ ತುಂಬ ಊಟ ಮಾಡುವುದಕ್ಕೂ ಕಷ್ಟವಾಗಿದೆ. ಬೆಳಿಗ್ಗೆ ಊರ ಬೀದಿಗಳು, ಚರಂಡಿಗಳನ್ನು ಶುಚಿಯಾಗಿಡುತ್ತೇವೆ. ಹೊಟ್ಟೆ ತುಂಬ ಉಂಡರೆ ಶಕ್ತಿ ಬರುತ್ತದೆ. ವೇತನವೇ ಸಿಗುತ್ತಿಲ್ಲ. ವಿಧಾನಮಂಡಲ ಅಧಿವೇಶನದಲ್ಲಾದರೂ ನಮ್ಮ ಸಮಸ್ಯೆಗೆ ಪರಿಹಾರ ಸಿಗಬೇಕು. ಮುಖ್ಯಮಂತ್ರಿ ಇದಕ್ಕೊಂದು ಉತ್ತರ ಹುಡಬೇಕು' ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT