19,20ರಂದು ರಾಜ್ಯ ದೇವದಾಸಿ ಸಮ್ಮೇಳನ

7
ದೇವದಾಸಿ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಕಠಿಣ ಕಾಯ್ದೆಗೆ ಆಗ್ರಹ

19,20ರಂದು ರಾಜ್ಯ ದೇವದಾಸಿ ಸಮ್ಮೇಳನ

Published:
Updated:

ಹೊಸಪೇಟೆ: ‘ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಮೂರನೇ ರಾಜ್ಯ ಸಮ್ಮೇಳನ ಜ. 19, 20ರಂದು ಇಲ್ಲಿನ ರೈತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಗೌರವ ಅಧ್ಯಕ್ಷ ಯು. ಬಸವರಾಜ ತಿಳಿಸಿದರು.

ಇಲ್ಲಿನ ಶ್ರಮಿಕ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘19ಕ್ಕೆ ಬೆಳಿಗ್ಗೆ 11ರಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ವಿ. ಶ್ರೀರಾಮರೆಡ್ಡಿ ಉದ್ಘಾಟಿಸುವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಕೇಂದ್ರ, ರಾಜ್ಯ ಸರ್ಕಾರ ದೇವದಾಸಿ ಪದ್ಧತಿ ನಿರ್ಮೂಲನೆಗೆ ಕೆಲವು ಕ್ರಮಗಳನ್ನು ಕೈಗೊಂಡಿದೆ. ಆದರೆ, ಆ ಪದ್ಧತಿ ಸಂಪೂರ್ಣ ತೊಲಗಿಲ್ಲ. ಅದಕ್ಕಾಗಿ ಕಠಿಣವಾದ ಕಾಯ್ದೆಗಳನ್ನು ಜಾರಿಗೆ ತರುವ ಅಗತ್ಯವಿದೆ. ದಲಿತರು, ಹಿಂದುಳಿದವರು ಹಾಗೂ ದೇವದಾಸಿ ಕುಟುಂಬದವರನ್ನು  ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಬೇಕು. ಅವರ ವಿರುದ್ಧದ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲುವಂತೆ ನೋಡಿಕೊಳ್ಳುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ದಲಿತರು, ಹಿಂದುಳಿದವರು ಕೇವಲ ಮತ ಬ್ಯಾಂಕ್‌ ರಾಜಕಾರಣಕ್ಕೆ ಬಳಕೆಯಾಗುತ್ತಿದ್ದಾರೆ. ಅವರ ವಿರುದ್ಧದ ಸಾಮಾಜಿಕ ದೌರ್ಜನ್ಯಗಳು ನಿಂತಿಲ್ಲ. ಆರ್ಥಿಕವಾಗಿ ಅವರು ಸಬಲರಾಗಿಲ್ಲ. ದೇವದಾಸಿ ಪದ್ಧತಿ ಮೂಲಕ ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾದವರಿಗೆ ತಲಾ ಐದು ಎಕರೆ ಕೃಷಿ ಜಮೀನು ಕೊಡಬೇಕು. ಮಾಸಿಕ ₹25 ಸಾವಿರ ಆದಾಯ ಬರುವ ವ್ಯವಸ್ಥೆ ಮಾಡಿಕೊಡಬೇಕು. ತಿಂಗಳ ಸಹಾಯಧನ ₹5 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ದಲಿತರಿಗೆ ಮೂರು ಲಕ್ಷ ಕೋಟಿ ಮೀಸಲಿಡಬೇಕು. ಅದೇ ಪ್ರಕಾರ ದೇಶದ ಎಲ್ಲ ರಾಜ್ಯಗಳು ತಲಾ ₹15 ಸಾವಿರ ಕೋಟಿ ಅನುದಾನ ಮೀಸಲಿಡಬೇಕು. ಹೀಗೆ ಮಾಡಿದರೆ ದಲಿತರು ಉದ್ಧಾರವಾಗಿ ಮುಖ್ಯವಾಹಿನಿಗೆ ಬರಲು ಸಾಧ್ಯ. ಅದೇ ರೀತಿ ಇದುವರೆಗೆ ದೇವದಾಸಿಯರಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ಈ ವರ್ಷದಿಂದ ಅನುದಾನ ಮೀಸಲಿಡಬೇಕು. ಮಾಸಿಕ ಸಹಾಯಧನ ₹1,500ರಿಂದ ₹2 ಸಾವಿರಕ್ಕೆ ಹೆಚ್ಚಿಸಬೇಕು. ಈ ಎಲ್ಲ ವಿಷಯಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಿ, ನಿರ್ಣಯ ಅಂಗೀಕರಿಸಲಾಗುವುದು’ ಎಂದು ವಿವರಿಸಿದರು.

ಸಂಘದ ಮುಖಂಡರಾದ ಆರ್‌.ಎಸ್‌. ಬಸವರಾಜ, ಮರಡಿ ಜಂಬಯ್ಯ ನಾಯಕ, ಆರ್‌. ಭಾಸ್ಕರ್‌ ರೆಡ್ಡಿ, ಕೆ.ಎಂ. ಸಂತೋಷ್‌ ಕುಮಾರ್‌, ಯಲ್ಲಮ್ಮ, ಹಂಪಮ್ಮ, ನಾಗರತ್ನಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !