ಶನಿವಾರ, ಡಿಸೆಂಬರ್ 7, 2019
22 °C
ಬಿಜೆಪಿಯಲ್ಲಿ ಗೊಂದಲ–ಕಾಂಗ್ರೆಸ್‌ನಿಂದ ಕೊನೆವರೆಗೆ ಕಾದು ನೋಡುವ ತಂತ್ರ

ವಿಜಯನಗರ ಕ್ಷೇತ್ರ | ಚುನಾವಣೆ ಘೋಷಣೆ; ಲೆಕ್ಕಾಚಾರ ಶುರು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ: ವಿಜಯನಗರ ಕ್ಷೇತ್ರಕ್ಕೆ ಶನಿವಾರ ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ವಿಚಾರದಲ್ಲಿ ಚರ್ಚೆಗಳು ಮತ್ತಷ್ಟು ಬಿರುಸು ಪಡೆದುಕೊಂಡಿವೆ. ಉಪಚುನಾವಣೆ ನಡೆಯುವುದು ಖಚಿತವಾಗಿದ್ದರಿಂದ ಎರಡೂ ಪಕ್ಷಗಳು ಹಲವು ದಿನಗಳಿಂದ ಪಕ್ಷದ ಸಂಘಟನೆಗೆ ಒತ್ತು ಕೊಟ್ಟಿದ್ದವು. ಅಲ್ಲದೇ ಪ್ರಮುಖ ಮುಖಂಡರು ಸಭೆ ನಡೆಸಿ, ಕಾರ್ಯಕರ್ತರ ಅಹವಾಲು ಆಲಿಸುವ ಕೆಲಸ ಮಾಡಿದ್ದಾರೆ. ಪಕ್ಷದ ವೀಕ್ಷಕರು ಕ್ಷೇತ್ರದಲ್ಲಿನ ವಾಸ್ತವ ಸ್ಥಿತಿ ಅರಿತು, ವರಿಷ್ಠರಿಗೆ ಈಗಾಗಲೇ ಮಾಹಿತಿ ಕೊಟ್ಟಿದ್ದಾರೆ.

ಬಿಜೆಪಿ ಸೇರ್ಪಡೆಯಾಗಿ ಆ ಪಕ್ಷದಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಅನರ್ಹ ಶಾಸಕ ಆನಂದ್‌ ಸಿಂಗ್‌ ಅವರ ಯೋಚನೆ ಈಗ ಗುಟ್ಟಾಗಿ ಏನು ಉಳಿದಿಲ್ಲ. ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಬೇಕು ಎಂಬ ಕಾರಣಕ್ಕಾಗಿಯೇ ಅವರು ಇತ್ತೀಚೆಗೆ ಪಶ್ಚಿಮ ತಾಲ್ಲೂಕುಗಳ ಯಾರ ಜತೆಗೂ ಸಮಾಲೋಚನೆ ನಡೆಸದೆ ಏಕಾಏಕಿ ಮುಖ್ಯಮಂತ್ರಿ ಬಳಿಗೆ ನಿಯೋಗ ಕರೆದು ವಿಜಯನಗರ ಜಿಲ್ಲೆ ರಚನೆಗೆ ಹಕ್ಕೊತ್ತಾಯ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿದೆ.

ಇನ್ನಷ್ಟೇ ಸಿಂಗ್‌ ಅವರ ಅನರ್ಹತೆ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಗೊಳ್ಳಬೇಕಿದೆ. ಒಂದುವೇಳೆ ನ್ಯಾಯಾಲಯದಲ್ಲಿ ಅವರ ಪರ ತೀರ್ಪು ಬರದಿದ್ದರೆ ಅವರ ರಾಜಕೀಯ ಭವಿಷ್ಯ ಅನಿಶ್ಚಿತತೆಗೆ ಒಳಗಾಗಬಹುದು. ಅವರ ಮಗ ಸಿದ್ದಾರ್ಥ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ವಯಸ್ಸಿನ ಅಡ್ಡಿಯಿದೆ. ಆಗ ಅವರ ಸಂಬಂಧಿಕರಲ್ಲಿ ಯಾರಾದರೂ ಒಬ್ಬರನ್ನು ಕಣಕ್ಕಿಳಿಸಬಹುದು.

ಇನ್ನೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಿಜೆಪಿಯ ನಿಷ್ಠಾವಂತ ಮುಖಂಡರು, ಕಾರ್ಯಕರ್ತರು, ಸಿಂಗ್‌ ಪರ ಒಲವು ಹೊಂದಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಪಕ್ಷದ ಅನೇಕ ಸಭೆಗಳಲ್ಲಿ ಈಗಾಗಲೇ ಸಿಂಗ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಮಾಜಿಶಾಸಕ ಎಚ್‌.ಆರ್‌.ಗವಿಯಪ್ಪನವರಿಗೆ ಟಿಕೆಟ್‌ ಕೊಡಬೇಕು ಎನ್ನುವುದು ಹೆಚ್ಚಿನ ಬಿಜೆಪಿ ಮುಖಂಡರ ಅಭಿಪ್ರಾಯವಾಗಿದೆ. ಒಂದುವೇಳೆ ಪಕ್ಷ ಅವರನ್ನು ಕಡೆಗಣಿಸಿ, ಬೇರೊಬ್ಬರಿಗೆ ಟಿಕೆಟ್‌ ನೀಡಿದರೆ ಗವಿಯಪ್ಪನವರ ಮುಂದಿನ ನಡೆ ಏನಾಗಲಿದೆ ಕಾದು ನೋಡಬೇಕು.

ಆದರೆ, ಸದ್ಯದ ಮಟ್ಟಿಗೆ ಸಿಂಗ್‌ ಅಥವಾ ಅವರ ಕುಟುಂಬದ ಯಾರಿಗಾದರೂ ಟಿಕೆಟ್‌ ಸಿಗಬಹುದು, ಇಲ್ಲವೇ ಗವಿಯಪ್ಪನವರಿಗೆ ಮಣೆ ಹಾಕುವ ಸಾಧ್ಯತೆಯೇ ಹೆಚ್ಚಿದೆ. ಮುಖಂಡರಾದ ಕಿಶೋರ ಪತ್ತಿಕೊಂಡ, ರಾಣಿ ಸಂಯುಕ್ತಾ, ಕವಿರಾಜ ಅರಸ್‌ ಸೇರಿದಂತೆ ಇತರರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಇನ್ನು, ಕಾಂಗ್ರೆಸ್‌ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ನೋಡಿಕೊಂಡು ಆ ಪಕ್ಷವು ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ ಎಂದು ತಿಳಿದು ಬಂದಿದೆ. ಒಂದುವೇಳೆ ಗವಿಯಪ್ಪನವರಿಗೆ ಬಿಜೆಪಿ ಟಿಕೆಟ್‌ ಕೈತಪ್ಪಿದರೆ ಅವರನ್ನು ಪಕ್ಷಕ್ಕೆ ಕರೆತಂದು ಕಣಕ್ಕಿಳಿಸುವ ಯೋಚನೆ ಕಾಂಗ್ರೆಸ್‌ನದು. ಗವಿಯಪ್ಪ ಮೂಲತಃ ಕಾಂಗ್ರೆಸ್ಸಿಗರು. ಹಿಂದಿನ ಚುನಾವಣೆಯಲ್ಲಿ ಕಡೆ ಗಳಿಗೆಯಲ್ಲಿ ಟಿಕೆಟ್‌ ಕೈತಪ್ಪಿದ್ದರಿಂದ ಅವರು ಬಿಜೆಪಿ ಸೇರಿದ್ದರು.

ಮುಖಂಡರಾದ ಪ್ರವೀಣ್‌ ಸಿಂಗ್‌, ದೀಪಕ್‌ ಕುಮಾರ್‌ ಸಿಂಗ್‌, ಮೊಹಮ್ಮದ್‌ ಇಮಾಮ್‌ ನಿಯಾಜಿ, ಕೊಟ್ರೇಶ್‌ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಜೆ.ಡಿ.ಎಸ್‌. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ಇದೆ.

ವಿಜಯನಗರಕ್ಕೆ 2ನೇ ಉಪಚುನಾವಣೆ

ವಿಜಯನಗರ ಕ್ಷೇತ್ರಕ್ಕೆ ಇದು ಎರಡನೇ ಉಪಚುನಾವಣೆಯಾಗಿದೆ. 1989ರ ಚುನಾವಣೆಯಲ್ಲಿ ಜೆ.ಡಿ.ಎಸ್‌.ನಿಂದ ಗೆಲುವು ಸಾಧಿಸಿದ್ದ ಗುಜ್ಜಲ್‌ ಹನುಮಂತಪ್ಪ ಅವರು 1991ರಲ್ಲಿ ಅಕಾಲಿಕವಾಗಿ ನಿಧನ ಹೊಂದಿದ್ದರು. ತೆರವಾದ ಕ್ಷೇತ್ರಕ್ಕೆ ಆ ವರ್ಷ ಉಪಚುನಾವಣೆ ನಡೆದಿತ್ತು. ಆಗ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ರತನ್‌ ಸಿಂಗ್‌ ಗೆಲುವು ಸಾಧಿಸಿದ್ದರು.

ಜಿಂದಾಲ್‌ಗೆ ಭೂ ಪರಭಾರೆ ಮಾಡಬಾರದು, ವಿಜಯನಗರ ಜಿಲ್ಲೆ ಮಾಡಬೇಕು ಎಂಬ ಬೇಡಿಕೆಗಳೊಂದಿಗೆ ಆನಂದ್‌ ಸಿಂಗ್‌ ರಾಜೀನಾಮೆ ನೀಡಿರುವುದರಿಂದ ಎರಡನೇ ಬಾರಿಗೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು