ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ ನಂತರ ಮೋದಿ ಮನೆಗೆ: ಸಂಸದ ವಿ.ಎಸ್‌. ಉಗ್ರಪ್ಪ ಭವಿಷ್ಯ

ಕಾಂಗ್ರೆಸ್‌ ಪಕ್ಷದಿಂದ ಅಭಿವೃದ್ಧಿ ಅಭಿಯಾನ
Last Updated 14 ಜನವರಿ 2019, 8:44 IST
ಅಕ್ಷರ ಗಾತ್ರ

ಹೊಸಪೇಟೆ: ‘ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಮನೆಗೆ ಹೋಗುವುದು ಶತಃಸಿದ್ಧ’ ಎಂದು ಸಂಸದ ವಿ.ಎಸ್‌. ಉಗ್ರಪ್ಪ ಭವಿಷ್ಯ ನುಡಿದರು.

ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಸೋಮವಾರ ಇಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಚುನಾವಣೆ ನಂತರ ಮೋದಿ ಮನೆಗೆ ಹೋಗುವುದು ಕೂಡ ನೂರಕ್ಕೆ ನೂರರಷ್ಟು ಸತ್ಯ. ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ಈ ಮಾತನ್ನು ಅತ್ಯಂತ ವಿಶ್ವಾಸದಿಂದ ಹೇಳುತ್ತಿದ್ದೇನೆ. ಅದಕ್ಕೆ ಕಾರಣ ಪ್ರಧಾನಿ ಮೋದಿಯವರ ವೈಫಲ್ಯಗಳು’ ಎಂದು ಟೀಕಿಸಿದರು.

‘ಕಾಂಗ್ರೆಸ್‌ ನೇತೃತ್ವದಲ್ಲಿ ಸಮಾನ ಮನಸ್ಕ ಪಕ್ಷಗಳು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ದೇಶದಲ್ಲಿ ಹೊಸ ಬದಲಾವಣೆ ಬರುವುದು ಖಚಿತ. ಬಳ್ಳಾರಿ ಲೋಕಸಭೆ ಉಪಚುನಾವಣೆ, ಇತ್ತೀಚೆಗೆ ನಡೆದ ಐದು ರಾಜ್ಯಗಳಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದೇ ಇದಕ್ಕೆ ಸಾಕ್ಷಿ’ ಎಂದು ಹೇಳಿದರು.

‘ಮಾತೆತ್ತಿದರೆ ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಹೇಳುತ್ತಿದ್ದ ಮೋದಿ, ಅಮಿತ್‌ ಷಾ ಈಗ ಮೌನವಾಗಿದ್ದಾರೆ. ಅವರ ತಾತ, ಮುತ್ತಾತ ಬಂದರೂ ಅದು ಸಾಧ್ಯವಿಲ್ಲ. ಆದರೆ, ಮೋದಿ, ಅಮಿತ್‌ ಷಾ ಮುಕ್ತ ಭಾರತ ಆಗುವುದು ಖಚಿತ. ಅದಕ್ಕಾಗಿ ದೇಶದ ಜನ ತುದಿಗಾಲ ಮೇಲೆ ನಿಂತಿದ್ದಾರೆ’ ಎಂದು ತಿಳಿಸಿದರು.

‘ಮೋದಿ, ಅಮಿತ್‌ ಷಾಗೆ ಪ್ರಜಾತಂತ್ರ ವ್ಯವಸ್ಥೆ, ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಅವರ ತಪ್ಪು ನೀತಿಗಳಿಂದ ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅನೇಕ ಜನ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ’ ಎಂದು ಟೀಕಿಸಿದರು.

‘ರಾಮನ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿರುವ ಬಿಜೆಪಿಯವರು ಆತನ ಆದರ್ಶಗಳನ್ನು ಪಾಲಿಸುವುದಿಲ್ಲ. ಯಾವ ದೇಶದಲ್ಲಿ ಕೃಷಿಗೆ ಆದ್ಯತೆ ಸಿಗುವುದಿಲ್ಲವೋ ಆ ದೇಶ ಉದ್ಧಾರವಾಗುವುದಿಲ್ಲ ಎಂದು ನೂರಾರು ವರ್ಷಗಳ ಹಿಂದೆಯೇ ಮುನಿಗಳು ಹೇಳಿದ್ದಾರೆ. ಆದರೆ, ರೈತರ ಸಾಲ ಮನ್ನಾ ಮಾಡಿಲ್ಲ. ಕೃಷಿಗೆ ಪೂರಕವಾದ ಕೆಲಸ ಮಾಡಿಲ್ಲ. ಇದರಿಂದ ನಿರಂತರವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದರು.

ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ಮಾತನಾಡಿ, ‘ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಒಂದೇ ದಿನದಲ್ಲಿ ಹತ್ತು ಸಾವಿರ ಜನರ ಹೆಸರನ್ನು ನೋಂದಣಿ ಮಾಡಿಸಿ ’ಶಕ್ತಿ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದೆ. ಇದೊಂದೆ ಅಲ್ಲ ಪಕ್ಷದ ಎಲ್ಲ ಕಾರ್ಯಕ್ರಮಗಳನ್ನು ಇಲ್ಲಿ ಸಕ್ರಿಯವಾಗಿ ಮಾಡುತ್ತಿರುವುದು ಶ್ಲಾಘನಾರ್ಹ’ ಎಂದು ಕೊಂಡಾಡಿದರು.

ಮುಖಂಡರಾದ ಎಂ.ಡಿ. ಲಕ್ಷ್ಮಿನಾರಾಯಣ, ರತನ್‌ ಸಿಂಗ್‌, ಮೊಹಮ್ಮದ್‌ ಇಮಾಮ್‌ ನಿಯಾಜಿ, ಗುಜ್ಜಲ್‌ ರಘು, ವೀರಸಂಗಯ್ಯ,‍‍‍ಪಾಲಯ್ಯ, ಎಲ್‌. ಸಿದ್ದನಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿಂಕರ್‌ ರಫೀಕ್‌, ಅಮಾಜಿ ಹೇಮಣ್ಣ, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಆರ್‌. ಮಳಲಿ, ಸಂದೀಪ್‌ ಸಿಂಗ್‌, ಕವಿತಾ ಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT