ಮಂಗಳವಾರ, ನವೆಂಬರ್ 19, 2019
28 °C
ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ

ನದಿ ಪಾತ್ರದ ಜನರಿಗೆ ಎಚ್ಚರಿಕೆ

Published:
Updated:

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಬುಧವಾರ ಬೆಳಿಗ್ಗೆ ಹತ್ತು ಕ್ರಸ್ಟ್‌ ಗೇಟ್‌ಗಳನ್ನು ಒಂದು ಅಡಿವರೆಗೆ ತೆಗೆದು ನದಿಗೆ ನೀರು ಹರಿಸಲಾಗುತ್ತಿದೆ.

ಸದ್ಯ 22,734 ಕ್ಯುಸೆಕ್‌ ಒಳಹರಿವು ಇದ್ದು, 25,000 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಒಟ್ಟು 133 ಟಿ.ಎಂ.ಸಿ. ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 100.855 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದ್ದು, 32 ಟಿ.ಎಂ.ಸಿ. ಅಡಿಗೂ ಹೆಚ್ಚು ಹೂಳು ತುಂಬಿಕೊಂಡಿದೆ. ಒಳಹರಿವು ತಗ್ಗಿದ್ದರಿಂದ ಆಗಸ್ಟ್‌ 28ರಿಂದ ಕ್ರಸ್ಟ್‌ಗೇಟ್‌ಗಳಿಂದ ನೀರು ಹರಿಸುವುದು ನಿಲ್ಲಿಸಲಾಗಿತ್ತು.

ಜಲಾಶಯ ಸಂಪೂರ್ಣವಾಗಿ ತುಂಬಿರುವ ಕಾರಣ ಇದೀಗ ನೀರು ಹೊರಗೆ ಬಿಡಲಾಗುತ್ತಿದೆ. ಶಿವಮೊಗ್ಗ ಸುತ್ತಮುತ್ತ ಹಾಗೂ ಜಲಾನಯನ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಂಜೆಯ ಬಳಿಕ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಒಂದು ಲಕ್ಷ ಕ್ಯುಸೆಕ್‌ ವರೆಗೆ ನೀರು ಹರಿಸಲು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

‘ಸದ್ಯ ನದಿಗೆ 25,000 ಸಾವಿರ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಯಾವುದೇ ಕ್ಷಣದಲ್ಲಿ ಎಲ್ಲ ಗೇಟ್‌ಗಳನ್ನು ತೆರೆದು 75,000ದಿಂದ 1 ಲಕ್ಷ ಕ್ಯುಸೆಕ್‌ ವರೆಗೆ ನೀರು ಬಿಡಲಾಗುವುದು. ಯಾರು ಕೂಡ ಜಾನುವಾರುಗಳೊಂದಿಗೆ ನದಿ ಪಾತ್ರದಲ್ಲಿ ಓಡಾಡದೆ, ಸುರಕ್ಷಿತ ಸ್ಥಳಗಳಿಗೆ ಹೋಗಬೇಕು. ಹರಿಗೋಲು, ಯಾಂತ್ರೀಕೃತ ದೋಣಿಗಳಲ್ಲಿ ಜನರನ್ನು ಸಾಗಿಸಬಾರದು’ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.

ಪ್ರತಿಕ್ರಿಯಿಸಿ (+)