ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ಹಂಚಿಕೆ: ಇನ್ನೂ ತಣಿಯದ ಅಸಮಾಧಾನ, ಸಿಎಂ ಭೇಟಿಯಾಗದ ಆನಂದ್‌ ಸಿಂಗ್‌

Last Updated 21 ಆಗಸ್ಟ್ 2021, 11:13 IST
ಅಕ್ಷರ ಗಾತ್ರ

ಬಳ್ಳಾರಿ: ಆಲಮಟ್ಟಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಪ್ರಯಾಣಿಸುವ ಮಾರ್ಗದಲ್ಲಿ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂದಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸ್ವಾಗತಿಸಲು ಜಿಲ್ಲಾ ಉಸ್ತುವಾರಿ ಹಾಗೂ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಆನಂದ್ ಸಿಂಗ್‌ ಗೈರುಹಾಜರಾದರು.

ಬೆಂಗಳೂರಿಂದ ಬಾಗಲಕೋಟೆಗೆ ಹೆಲಿಕಾಪ್ಟರ್‌ನಲ್ಲಿ ಹೋಗುವ ಮಾರ್ಗದಲ್ಲಿ ಇಲ್ಲಿನ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿ ಅವರನ್ನು ನಗರದ ಶಾಸಕ ಜಿ. ಸೋಮಶೇಖರರೆಡ್ಡಿ ಸೇರಿದಂತೆ ಕೆಲ ಮುಖಂಡರು ಭೇಟಿ ಮಾಡಿ ಚರ್ಚಿಸಿದರು. ಆದರೆ, ಆನಂದ್‌ ಸಿಂಗ್‌ ಅತ್ತ ಕಡೆ ಸುಳಿಯಲಿಲ್ಲ.

ಯಾವುದೇ ಜಿಲ್ಲೆಗೆ ಮುಖ್ಯಮಂತ್ರಿ ಬಂದಾಗ ಉಸ್ತುವಾರಿ ಸಚಿವರು ಸ್ವಾಗತಿಸುವುದು ಶಿಷ್ಟಾಚಾರ. ಆದರೆ, ಅವಿಭಜಿತ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಹೊತ್ತ ಆನಂದ್‌ಸಿಂಗ್‌ ಹೊಸಪೇಟೆಯಲ್ಲೇ ಇದ್ದರೂ ಜಿಂದಾಲ್‌ ವಿಮಾನ ನಿಲ್ದಾಣದ ಕಡೆ ತಲೆ ಹಾಕದೆ, ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನಿಸಿದರು.

ಆದರೆ, ಸುಪ್ರಸಿದ್ಧ ಹಂಪಿಯ ವೀಕ್ಷಣೆಗೆ ಪತ್ನಿ, ಕುಟುಂಬದ ಸದಸ್ಯರ ಜತೆ ಹೊಸಪೇಟೆ ತಾಲೂಕು ಕ್ರೀಡಾಂಗಣದ ಹೆಲಿಪ್ಯಾಡ್‌ನಲ್ಲಿ ಶುಕ್ರವಾರ ಬಂದಿಳಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಸ್ವಾಗತಿಸಲು ಆನಂದ್‌ ಸಿಂಗ್‌ ಆಗಮಿಸಿದ್ದರು. ಗುರುವಾರ ಬಳ್ಳಾರಿಯಲ್ಲಿ ಏರ್ಪಡಿಸಿದ್ದ ‘ಜನಾಶೀರ್ವಾದ ಯಾತ್ರೆ’ಯಲ್ಲೂ ಆನಂದ್‌ಸಿಂಗ್‌ ಪಾಲ್ಗೊಳ್ಳಲಿಲ್ಲ. ಕೇಂದ್ರ ರಸಗೊಬ್ಬರ ಸಚಿವ ಭಗವಂತ್ ಖೂಬಾ ಅವರ ಸಮ್ಮುಖದಲ್ಲಿ ಈ ಯಾತ್ರೆ ನಡೆಯಿತು.

ಮುಖ್ಯಮಂತ್ರಿ, ತಮಗೆ ಕೇಳಿದ ಖಾತೆ ಕೊಡದೆ ಕಡೆಗಣಿಸಿದ್ದಾರೆ. ಮಹತ್ವವಲ್ಲದ ‍ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಿದ್ದಾರೆ ಎಂದು ಆನಂದ್‌ಸಿಂಗ್‌ ಅಸಮಾಧಾನಗೊಂಡಿದ್ದಾರೆ. ಅಸಮಾಧಾನ ತಣಿಸುವ ಬೊಮ್ಮಾಯಿಯವರ ಪ್ರಯತ್ನ ಇದುವರೆಗೆ ಫಲಿಸಿಲ್ಲ ಎಂದು ಜಿಲ್ಲಾ ಬಿಜೆಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT