ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ದರ ತಗ್ಗಿಸಲು ಆಗ್ರಹ; ಆಟೊ ಚಾಲಕರ ಪ್ರತಿಭಟನೆ

Last Updated 15 ಜುಲೈ 2019, 16:05 IST
ಅಕ್ಷರ ಗಾತ್ರ

ಹೊಸಪೇಟೆ: ಆಟೊ ರಿಕ್ಷಾ ಮೇಲಿನ ವಿಮೆ ದರ ಕಡಿತಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆಡರೇಶನ್‌ ಆಫ್‌ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್ಸ್‌ನವರು ಸೋಮವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ರೋಟರಿ ವೃತ್ತದಿಂದ ಆರಂಭಗೊಂಡ ರ್‍ಯಾಲಿ ಉದ್ಯೋಗ ಪೆಟ್ರೋಲ್‌ ಬಂಕ್‌, ಮೂರಂಗಡಿ ವೃತ್ತ, ಮಹಾತ್ಮ ಗಾಂಧಿ ವೃತ್ತ ಮೂಲಕ ಹಾದು ತಾಲ್ಲೂಕು ಕಚೇರಿ ಬಳಿ ಕೊನೆಗೊಂಡಿತು. ನಂತರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಫೆಡರೇಶನ್‌ ಮುಖಂಡ ಕೆ.ಎಂ. ಸಂತೋಷ ಕುಮಾರ್‌, ‘ಹದಿನೈದು ವರ್ಷ ಹಳೆಯ ವಾಹನಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಅಂತಹ ಹಳೆಯ ಆಟೊ ರಿಕ್ಷಾ ಮಾಲೀಕರಿಗೆ ಹೊಸ ರಿಕ್ಷಾ ತೆಗೆದುಕೊಳ್ಳುವಾಗ ನಗರಸಭೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ₹30 ಸಾವಿರ ಸಬ್ಸಿಡಿ ನೀಡಬೇಕು. ಹಳೆಯ ಆಟೊ ರಿಕ್ಷಾಗಳನ್ನು ಶೋ ರೂಂಗಳು ಮಾರುಕಟ್ಟೆಯ ಬೆಲೆಗೆ ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಆಟೊ ರಿಕ್ಷಾ ಚಾಲಕರಿಗೆ ನಗರಸಭೆ ಎಸ್ಸಿ/ಎಸ್ಟಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಪ್ರಧಾನಮಂತ್ರಿ ರೋಜಗಾರ್‌ ಯೋಜನೆ, ಮುದ್ರಾ ಯೋಜನೆ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಸುಪ್ರೀಂಕೋರ್ಟ್‌ ಆದೇಶದಂತೆ 7,500 ಕೆ.ಜಿ. ತೂಕದ ವಾಹನಗಳಿಗೆ ಪರವಾನಗಿ ಬ್ಯಾಡ್ಜ್‌ ಕಡ್ಡಾಯ ಇರುವುದಿಲ್ಲ. ಇದು ರಾಜ್ಯದಲ್ಲಿ ಪಾಲನೆ ಆಗಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಮೋಟಾರ್‌ ವಾಹನ ತಿದ್ದುಪಡಿ ಮಸೂದೆ ಜಾರಿಗೆ ತರುವ ಪ್ರಸ್ತಾವ ಕೈಬಿಡಬೇಕು. ಮೋಟಾರ್‌ ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿ ದಂಡ ಹೆಚ್ಚಿಸಿರುವುದು ಸರಿಯಲ್ಲ. ಅದನ್ನು ಪರಿಷ್ಕರಿಸಬೇಕು. ಆಟೊ ನಗರ ಅಭಿವೃದ್ಧಿ ಪಡಿಸಿ, ಎಲ್ಲ ಆಟೊ ಚಾಲಕರಿಗೆ ನಿವೇಶನ ಕೊಡಬೇಕು. ಎಲ್ಲ ಆಟೊ ನಿಲ್ದಾಣಗಳನ್ನು ಆಧುನೀಕರಣಗೊಳಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಸತೀಶ್‌, ಎಸ್‌. ಅನಂತ, ಜಿ. ಸಿದ್ದಲಿಂಗೇಶ, ಬಸವರಾಜ, ಟಿ. ಚಂದ್ರಶೇಖರ್‌ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT