ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿ: 22 ಜನ ರಕ್ತದಾನ

Last Updated 5 ಮೇ 2019, 11:42 IST
ಅಕ್ಷರ ಗಾತ್ರ

ಹೊಸಪೇಟೆ: ಬಸವೇಶ್ವರ ಜಯಂತಿ ಪ್ರಯುಕ್ತ ಭಾನುವಾರ ಇಲ್ಲಿನ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 22 ಜನ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ನಗರದ ಸರ್ಕಾರಿ ಆಸ್ಪತ್ರೆ, ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಹಾಗೂ ಬಳ್ಳಾರಿಯ ರಕ್ತ ಭಂಡಾರ ಕೇಂದ್ರದ ಸಹಭಾಗಿತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಒಟ್ಟು 22 ಜನರಿಂದ 22 ಯೂನಿಟ್‌ ರಕ್ತ ಸಂಗ್ರಹಿಸಲಾಯಿತು.

‘ರಕ್ತದಾನದ ಮಹತ್ವ’ ಕುರಿತು ವಿಶೇಷ ಉಪನ್ಯಾಸ ನೀಡಿದ ವಿಜಯನಗರ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಚಂದ್ರಶೇಖರ ಶಾಸ್ತ್ರಿ, ‘ದೇಶದಲ್ಲಿ ಪ್ರತಿ ಎರಡು ಸೆಕೆಂಡಿಗೆ ಒಬ್ಬರಿಗೆ ರಕ್ತದ ಅಗತ್ಯವಿದೆ. ವರ್ಷಕ್ಕೆ ಒಟ್ಟು ನಾಲ್ಕು ಕೋಟಿ ಯೂನಿಟ್‌ ರಕ್ತ ದೇಶದ ಜನಕ್ಕೆ ಬೇಕು. ಈಗ ನಮಗೆ ಲಭ್ಯವಾಗುತ್ತಿರುವುದು 40 ಲಕ್ಷ ಯೂನಿಟ್‌ಗಳಷ್ಟೇ’ ಎಂದು ಹೇಳಿದರು.

‘ದೇಶದಲ್ಲಿ ವರ್ಷಕ್ಕೆ ಹತ್ತು ಲಕ್ಷಕ್ಕೂ ಅಧಿಕ ಕ್ಯಾನ್ಸರ್‌ ರೋಗಿಗಳಿಗೆ ರಕ್ತ ಬೇಕು. ಅಪಘಾತಕ್ಕೀಡಾಗುವ 15 ಲಕ್ಷ ಜನಕ್ಕೆ ತುರ್ತಾಗಿ ರಕ್ತದ ಅವಶ್ಯಕತೆ ಇದೆ. ಅದರಲ್ಲಿ 1.5 ಲಕ್ಷ ಜನರಿಗೆ ಸಕಾಲಕ್ಕೆ ರಕ್ತ ಸಿಗದೇ ಸಾವನ್ನಪ್ಪುತ್ತಿದ್ದಾರೆ’ ಎಂದು ಅಂಕಿ ಅಂಶ ಸಮೇತ ವಿವರಿಸಿದರು.

‘ಉತ್ತರ ಕರ್ನಾಟಕದಲ್ಲಿ ರಕ್ತದ ಕೊರತೆ ಬಹಳ ಇದೆ. ಈ ಭಾಗದಲ್ಲಿ ಪುರುಷರು ಶೇ. 90ರಷ್ಟು ರಕ್ತದಾನ ಮಾಡಿದರೆ, ಶೇ 10ರಷ್ಟು ಮಹಿಳೆಯರು ರಕ್ತ ಕೊಡುತ್ತಿದ್ದಾರೆ. ಮಹಿಳೆಯರಲ್ಲಿ ಅಪೌಷ್ಟಿಕತೆ ಸಮಸ್ಯೆ ಇದೆ. 100 ಮಹಿಳೆಯರ ಪೈಕಿ 56 ಜನರಿಗೆ ರಕ್ತಹೀನತೆ ಸಮಸ್ಯೆ ಇದೆ. ಈ ಸಮಸ್ಯೆ ಹೋಗಲಾಡಿಸಿದರೆ ರಕ್ತದಾನಿಗಳ ಸಂಖ್ಯೆ ಹೆಚ್ಚಾಗಬಹುದು’ ಎಂದು ತಿಳಿಸಿದರು.

ಮರಿಯಮ್ಮನಹಳ್ಳಿ ಗುರುಪಾದ ದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶಿಬಿರಕ್ಕೆ ಚಾಲನೆ ನೀಡಿದರು.

ತಾಲ್ಲೂಕು ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷ ಗೊಗ್ಗ ವಿಶ್ವನಾಥ, ಅಧ್ಯಕ್ಷ ಎಸ್.ಎಂ.ಕಾಶಿನಾಥಯ್ಯ, ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಂ.ರವಿಶಂಕರ್, ಗೊಗ್ಗ ಚನ್ನಬಸವರಾಜ, ವಿಜಯನಗರ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಪ್ರಾಚಾರ್ಯ ವಿ.ಎಸ್.ಪ್ರಭಯ್ಯ, ವೈದ್ಯರಾದ ಸೋಮಶೇಖರ, ಸುಮಂಗಲದೇವಿ, ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಕೋಶಾಧ್ಯಕ್ಷ ಕೆ.ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT