ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ಪನಿಕ ವೇತನ ಬಡ್ತಿ ಜಾರಿ ನಮ್ಮ ಜವಾಬ್ದಾರಿ

ಪ್ರಚಾರ ಸಭೆಯಲ್ಲಿ ಶಿಕ್ಷಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭರವಸೆ
Last Updated 4 ಜೂನ್ 2018, 7:05 IST
ಅಕ್ಷರ ಗಾತ್ರ

ದಾವಣಗೆರೆ: ‘ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಿ. ಕಾಲ್ಪನಿಕ ವೇತನ ಬಡ್ತಿಯನ್ನು ಸಂಪೂರ್ಣವಾಗಿ ಜಾರಿಗೆ ತರುವುದು ನಮ್ಮ ಜವಾಬ್ದಾರಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶಿಕ್ಷಕರಿಗೆ ಭರವಸೆ ನೀಡಿದರು.

ಇಲ್ಲಿನ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಪರ ಮತಯಾಚಿಸಿ ಅವರು ಮಾತನಾಡಿದರು.

‘ಶಿಕ್ಷಣ ಕ್ಷೇತ್ರಕ್ಕೆ ಬಿಜೆಪಿ ಅಪಾರ ಕೊಡುಗೆ ನೀಡಿದೆ. ಬಿಜೆಪಿ ಸರ್ಕಾರ ಇದ್ದಾಗ 8,000 ಶಿಕ್ಷಕರು ಹಾಗೂ 4,000 ಉಪನ್ಯಾಸಕರನ್ನು ನೇಮಕ ಮಾಡಲಾಯಿತು. 4,300 ಜೆಒಸಿ ಉಪನ್ಯಾಸಕರನ್ನು ಹಾಗೂ 430 ಮೊರಾರ್ಜಿ ಶಾಲೆಗಳ ಶಿಕ್ಷಕರನ್ನು ಕಾಯಂಗೊಳಿಸಲಾಯಿತು. 191 ಸರ್ಕಾರಿ ಕಾಲೇಜುಗಳನ್ನು ಹೊಸದಾಗಿ ತೆರೆಯಲಾಯಿತು. 6 ಮೆಡಿಕಲ್‌ ಕಾಲೇಜುಗಳನ್ನು ಸ್ಥಾಪಿಸಲಾಯಿತು. 18 ಸಾವಿರ ಶಿಕ್ಷಕರನ್ನು ಅನುದಾನಕ್ಕೆ ಒಳಪಡಿಸಲಾಯಿತು. ಅಷ್ಟೇ ಅಲ್ಲದೆ ಶಿಕ್ಷಣ ಕ್ಷೇತ್ರದ ಬಜೆಟ್‌ ಅನ್ನು 4,800 ಕೋಟಿಯಿಂದ 18,000 ಕೋಟಿಗೆ ಹೆಚ್ಚಿಸಿದ್ದೆವು’ ಎಂದು ಅಂಕಿ ಅಂಶ ನೀಡಿದರು.

‘ವಿಧಾನ ಪರಿಷತ್‌ನ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಬೇಕು. ಈ ಮೂಲಕ ರಾಜ್ಯದ ಅಭಿವೃದ್ಧಿ ಕಾರ್ಯಗಳಲ್ಲಿ ಶಿಕ್ಷಕರು, ಪದವೀಧರರು ಭಾಗಿಯಾಗಬೇಕು. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಾಸಕರು ಅವರ ಚುನಾವಣೆಗೆ ಪಟ್ಟ ಶ್ರಮಕ್ಕಿಂತ ನೂರು ಪಟ್ಟು ಹೆಚ್ಚು ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಮತ್ತೆ ನಮ್ಮ ಪಕ್ಷಕ್ಕೆ ಬಹುಮತ ಸಿಗಲಿದೆ. ಪರಿಷತ್‌ನಲ್ಲೂ ಬಿಜೆಪಿಗೆ ಬಹುಮತ ಇರಬೇಕು. ಆಗ ನಮ್ಮವರೇ ಸಭಾಪತಿ ಆಗುತ್ತಾರೆ. ನಮ್ಮ ಕೆಲಸಗಳೂ ಸುಗಮವಾಗಿ ಆಗುತ್ತವೆ. ಹೀಗಾಗಿ ಬಿಜೆಪಿಯ ಅಭ್ಯರ್ಥಿಗಳನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.

ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ, ‘ಬಿಜೆಪಿ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲಾಯಿತು. 2 ವೇತನ ಆಯೋಗಗಳನ್ನು ಒಂದೇ ಸರ್ಕಾರದ ಅವಧಿಯಲ್ಲಿ ಕೊಟ್ಟಿದ್ದು ಬಿಜೆಪಿಯ ಹೆಗ್ಗಳಿಕೆ. ಜಾತಿ, ಮತ ಎಣಿಸದೆ, ಪ್ರತಿಫಲ ನಿರೀಕ್ಷೆ ಮಾಡದೇ ದುರಹಂಕಾರದಿಂದ ವರ್ತಿಸದೆ ಒಂದು ದಶಕಕ್ಕೂ ಹೆಚ್ಚು ಕಾಲ ಶಿಕ್ಷಕರ ಕೆಲಸ ಮಾಡಿದ್ದೇನೆ. ಮತ್ತೆ ನನ್ನನ್ನು ಬೆಂಬಲಿಸಿ’ ಎಂದು ಮನವಿ ವಿನಂತಿಸಿದರು.

‘ವಿದ್ಯಾನಗರ, ತರಳಬಾಳು ಬಡಾವಣೆ, ಎಸ್‌.ಎಸ್‌. ಲೇಔಟ್‌ನ ಮತದಾರರು ನನಗೆ ಪೂರ್ಣ ಬೆಂಬಲ ಕೊಟ್ಟಿದ್ದೀರಿ. ನಿಮಗೆ ಯಾರಿಗೆ, ಯಾವಾಗ ಮತ ನೀಡಬೇಕೆಂದು ಗೊತ್ತಿದೆ. ಈ ಬಾರಿಯೂ ವೈ.ಎ. ನಾರಾಯಣ ಸ್ವಾಮಿ ಅವರನ್ನು ಗೆಲ್ಲಿಸಿ’ ಎಂದು ಶಾಸಕ ಎಸ್‌.ಎ.ರವೀಂದ್ರನಾಥ್‌ ಮನವಿ ಮಾಡಿದರು.

‘ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ವಿಧಾನಪರಿಷತ್‌ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪ ಅವರಿಗೆ ಶಕ್ತಿ ತುಂಬಿ’ ಎಂದು ಮಾಯಕೊಂಡ ಶಾಸಕ ಪ್ರೊ. ಎನ್‌. ಲಿಂಗಣ್ಣ ಕೇಳಿಕೊಂಡರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳ್‌ ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ನೀರಾವರಿ ತಜ್ಞ ಪ್ರೊ. ನರಸಿಂಹಪ್ಪ, ಮುಖಂಡರಾದ ಅಣಬೇರು ಜೀವನಮೂರ್ತಿ, ಜಿ.ಎಂ. ಸುರೇಶ್, ಎಲ್‌.ಬಸವರಾಜ್, ಧನಂಜಯ ಕಡ್ಲೆಬಾಳು, ಹನಗವಾಡಿ ವೀರೇಶ್, ಸಂದೀಪ್‌ ಬೂದಿಹಾಳ್, ರಮೇಶ್‌ನಾಯ್ಕ, ಜಯಮ್ಮ, ಬಿ.ಎಸ್. ಜಗದೀಶ್‌ ಅವರೂ ಇದ್ದರು.

ತಾಕತ್‌ ಇದ್ದರೆ ವಿಧಾನಸಭೆ ವಿಸರ್ಜಿಸಿ

ದಾವಣಗೆರೆ: ‘104 ಕ್ಷೇತ್ರಗಳಲ್ಲಿ ಗೆದ್ದರೂ ಬಿಜೆಪಿಗೆ ಅಧಿಕಾರ ಹಿಡಿಯಲು ಆಗಲಿಲ್ಲವಲ್ಲ ಎಂಬ ಬೇಸರ ರಾಜ್ಯದ ಜನರಲ್ಲಿ ಮೂಡಿದೆ. ಅವಕಾಶವಾದಿ, ಅನುಕೂಲಸಿಂಧು ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌–ಜೆಡಿಎಸ್‌ ಮುಖಂಡರು ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಲಿ. ನಾವು 150 ಕ್ಷೇತ್ರ ಗೆದ್ದು ತೋರಿಸುತ್ತೇವೆ’ ಎಂದು ಬಿ.ಎಸ್‌. ಯಡಿಯೂರಪ್ಪ ಸವಾಲು ಹಾಕಿದರು.

‘ಚುನಾವಣೆ ನಂತರ ರಾಜ್ಯದಲ್ಲಿ ಆದ ರಾಜಕೀಯ ವ್ಯತ್ಯಾಸಗಳಿಂದಾಗಿ ಜನ ನೊಂದಿದ್ದಾರೆ. ನಿಮ್ಮೂರಿನ ಒಬ್ಬ ಆಟೊ ಚಾಲಕನನ್ನು ಬೇಕಾದರೂ ಕೇಳಿ. ಆತ, ಬಿಜೆಪಿಗೆ ಅಧಿಕಾರ ಸಿಗಬೇಕಿತ್ತು ಎನ್ನುತ್ತಾನೆ. ಇಂಥ ಭಾವನೆ ರಾಜ್ಯದ ಉದ್ದಗಲಕ್ಕೂ ಇದೆ. ಆಗಿರುವುದೆಲ್ಲಾ ಒಳ್ಳೆಯದೇ ಎಂದು ಭಾವಿಸಿದ್ದೇನೆ. ವಿರೋಧ ಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇನೆ. ಮುಂದೆ ಅಧಿಕಾರ ಸಿಕ್ಕೇ ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

**
ಎರಡು ವರ್ಷ ಡೆಪ್ಟೇಷನ್‌ ಹೋಗಿದ್ದೆ. ಈಗ ಮತ್ತೆ ರಿಪೋರ್ಟ್‌ ಮಾಡಿಕೊಳ್ಳಲು ಅವಕಾಶ ಕೊಡಿ. ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತೇನೆ
ವೈ.ಎ. ನಾರಾಯಣಸ್ವಾಮಿ, ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

**
ದೇಶದ ಜಿಡಿಪಿ ಶೇ 7.7ರಷ್ಟು ಏರಿಕೆ ಆಗಿದೆ. ಅಭಿವೃದ್ಧಿಯ ಈ ದರ ಅನ್ಯ ದೇಶಗಳಿಗಿಂತಲೂ ಹೆಚ್ಚು. ಅಭಿವೃದ್ಧಿಯಲ್ಲಿ ದೇಶ ಮುಂದೆ ಸಾಗುತ್ತಿದೆ 
– ಬಿ.ಎಸ್‌. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ
**

ಹೊಂದಾಣಿಕೆ ಮಾಡಿಕೊಳ್ಳಬಾರದಿತ್ತು ಎಂದು ಪರಮೇಶ್ವರ್‌ ಅವರೇ ಹೇಳಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರೂ ಮೈತ್ರಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಈ ಸರ್ಕಾರ ಬಾಳಲ್ಲ
ಜಿ.ಎಂ. ಸಿದ್ದೇಶ್ವರ, ಸಂಸದ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT