ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ರಾಜೀನಾಮೆ ಅಂಗೀಕಾರ

ಶೀಘ್ರದಲ್ಲೇ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸರ್ಕಾರದಿಂದ ದಿನಾಂಕ ನಿಗದಿ
Last Updated 18 ಜನವರಿ 2021, 10:43 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಅಧ್ಯಕ್ಷ ಟಿ.ಎಂ. ಚಂದ್ರಶೇಖರಯ್ಯ ಅವರ ರಾಜೀನಾಮೆ ಸೋಮವಾರ ಅಧಿಕೃತವಾಗಿ ಅಂಗೀಕಾರಗೊಂಡಿದೆ.

ಚಂದ್ರಶೇಖರಯ್ಯ ಅವರು ಜ. 2ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 15 ದಿನಗಳ ಒಳಗೆ ರಾಜೀನಾಮೆ ಹಿಂಪಡೆಯಲು ಅವಕಾಶ ಇರುತ್ತದೆ. ಈ ಅವಧಿಯಲ್ಲಿ ಅವರು ರಾಜೀನಾಮೆ ಹಿಂಪಡೆದಿಲ್ಲ. ಸೋಮವಾರ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ರಾಜೀನಾಮೆ ನಿರ್ಧಾರಕ್ಕೆ ಬದ್ಧ ಎಂದು ಅವರು ತಿಳಿಸಿದ್ದರಿಂದ ಅದು ಅಂಗೀಕಾರಗೊಂಡಿದೆ.

ನೂತನ ಅಧ್ಯಕ್ಷರ ಆಯ್ಕೆಗೆ ಸರ್ಕಾರ ಇಷ್ಟರಲ್ಲೇ ಚುನಾವಣೆ ದಿನಾಂಕ ನಿಗದಿಪಡಿಸಲಿದ್ದು, ಬಳಿಕ ಎಲ್ಲ ನಿರ್ದೇಶಕರು ಸೇರಿಕೊಂಡು ಹೊಸ ಅಧ್ಯಕ್ಷರ ಆಯ್ಕೆ ಮಾಡುವರು. ಅಲ್ಲಿಯವರೆಗೆ ಬ್ಯಾಂಕಿನ ಉಪಾಧ್ಯಕ್ಷ ತಿಪ್ಪೇಸ್ವಾಮಿ ಗುಂಡುಮಣಗು ಪ್ರಭಾರ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುವರು. ಚಂದ್ರಶೇಖರಯ್ಯ ಎರಡು ವರ್ಷ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು, ಇನ್ನೂ ಆಡಳಿತ ಮಂಡಳಿಯ ಅವಧಿ ಮೂರು ವರ್ಷ ಬಾಕಿ ಇದೆ.

ಒಪ್ಪಂದದಂತೆ ರಾಜೀನಾಮೆ:

‘ಈ ಹಿಂದೆ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಎಲ್ಲರೂ ಸರ್ವಾನುಮತದಿಂದ ನನ್ನನ್ನು ಎರಡು ವರ್ಷದ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. ಅವಧಿ ಪೂರ್ಣಗೊಂಡ ನಂತರ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂಬ ಮೌಖಿಕ ಒಪ್ಪಂದವಾಗಿತ್ತು. ಅದರಂತೆ ಈಗ ಅವಧಿ ಮುಗಿದಿರುವುದರಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವೆ’ ಎಂದು ಸಭೆಯ ಬಳಿಕ ಚಂದ್ರಶೇಖರಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸರ್ಕಾರ ಇಷ್ಟರಲ್ಲೇ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಪಡಿಸಲಿದೆ. ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡುವುದು, ಬಿಡುವುದು ನಿರ್ದೇಶಕರಿಗೆ ಬಿಟ್ಟ ವಿಚಾರ. ನನ್ನೊಬ್ಬನ ಒಪ್ಪಿಗೆ ಮುಖ್ಯವಲ್ಲ. ಎಲ್ಲರೂ ಬಯಸಿದರೆ ಆನಂದ್‌ ಸಿಂಗ್‌ ಬ್ಯಾಂಕಿನ ಅಧ್ಯಕ್ಷರಾಗಬಹುದು’ ಎಂದು ಪ್ರತಿಕ್ರಿಯಿಸಿದರು.

‘ದಿ. ಎಂ.ಪಿ. ರವೀಂದ್ರ ಅವರು ಜೀವನವಿಡೀ ಬ್ಯಾಂಕಿನ ಅಧ್ಯಕ್ಷರಾಗಿರಬೇಕು ಎನ್ನುವುದು ಎಲ್ಲರ ಬಯಕೆಯಾಗಿತ್ತು. ಆದರೆ, ಅವರ ಅಕಾಲಿಕ ನಿಧನದ ನಂತರ ನಾನು ಅಧ್ಯಕ್ಷನಾದೆ. ಸಹಕಾರ ಕ್ಷೇತ್ರ ಪಕ್ಷಾತೀತವಾದುದು. ಹೊರಗೆ ಜನ ಏನೋ ಮಾತನಾಡುತ್ತಾರೆಂದು ಅದಕ್ಕೆ ಪ್ರತಿಕ್ರಿಯಿಸಲು ಹೋಗುವುದಿಲ್ಲ’ ಎಂದು ಹೇಳಿದರು.

ಹಿರಿಯ ನಿರ್ದೇಶಕ ಜೆ.ಎಂ. ವೃಷಭೇಂದ್ರಯ್ಯ ಮಾತನಾಡಿ, ‘ಬ್ಯಾಂಕ್‌ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದೆ. ಇಲ್ಲಿ ಎಲ್ಲ ಪಕ್ಷದವರು ಇದ್ದಾರೆ. ಎಲ್ಲರೂ ಸಹಕಾರ ತತ್ವದಡಿ ಕೆಲಸ ಮಾಡಬೇಕಾಗುತ್ತದೆ. ಎಲ್ಲ ನಿರ್ದೇಶಕರು ಬಯಸಿದರೆ ಆನಂದ್‌ ಸಿಂಗ್‌ ಅಧ್ಯಕ್ಷರಾಗಬಹುದು’ ಎಂದರು.

‘ಹೊಸಪೇಟೆ ತಾಲ್ಲೂಕಿನಲ್ಲಿ ಸಣ್ಣ ರೈತರ ಸಂಖ್ಯೆ ಹೆಚ್ಚಿದೆ. ಈ ಭಾಗದಲ್ಲಿ ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿ ಸಕ್ಕರೆ ಕಾರ್ಖಾನೆಯಾದರೆ ಎಲ್ಲರಿಗೂ ಅನುಕೂಲ. ಸಚಿವ ಆನಂದ್‌ ಸಿಂಗ್‌ ಅವರು ಕಾರ್ಖಾನೆ ಆರಂಭಿಸುವುದರ ಕುರಿತು ಆಸಕ್ತಿ ತೋರಿದ್ದಾರೆ. 100 ಎಕರೆ ಜಮೀನು ಕೂಡ ಇದೆ ಎಂದು ಹೇಳಿದ್ದಾರೆ. ಅವರು ಬ್ಯಾಂಕಿನ ಚುಕ್ಕಾಣಿ ಹಿಡಿದು ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸಿದರೆ ಈ ಭಾಗದವರಿಗೆ ಒಳ್ಳೆಯದಾಗುತ್ತದೆ’ ಎಂದು ಅಭಿಪ್ರಾಯ ಪಟ್ಟರು.

‘ಆನಂದ್‌ ಸಿಂಗ್‌ ಅಧ್ಯಕ್ಷರಾದರೆ ತಪ್ಪೇನೂ’
‘ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದರೆ ಅದರಲ್ಲಿ ತಪ್ಪೇನಿದೆ’ ಎಂದು ಬ್ಯಾಂಕಿನ ನಿರ್ದೇಶಕ, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾ ಭರತ್‌ ರೆಡ್ಡಿ ಪ್ರಶ್ನಿಸಿದ್ದಾರೆ. ‘ಒಂದುವೇಳೆ ಆನಂದ್‌ ಸಿಂಗ್‌ ಅವರು ಬ್ಯಾಂಕಿನ ಅಧ್ಯಕ್ಷರಾದರೆ ಸುಲಭವಾಗಿ ಅನೇಕ ಕೆಲಸಗಳಾಗುತ್ತವೆ. ಅದರಿಂದ ರೈತರಿಗೆ ಒಳ್ಳೆಯದಾಗುತ್ತದೆ. ಯಾರಿಗಾದರೂ ಒಳ್ಳೆಯದಾಗುವುದಾದರೆ ಅವರು ಅಧ್ಯಕ್ಷರಾಗುವುದು ಉತ್ತಮವಲ್ಲವೇ?’ ಎಂದು ಸುದ್ದಿಗಾರರಿಗೆ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT