ಮಂಗಳವಾರ, ಮೇ 17, 2022
25 °C
ದಾನದಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವಾದುದು–ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ

ದಾನದಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವಾದುದು: ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿಬಿರದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರು ವಿದ್ಯಾರ್ಥಿಗಳೊಂದಿಗೆ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ ಗಮನ ಸೆಳೆದರು.

ವಿಜಯನಗರ ಕಾಲೇಜು, ವಿಮ್ಸ್, ಭಾರತೀಯ ರೆಡ್ ಕ್ರಾಸ್ ಹಾಗೂ ಎಚ್.ಡಿ.ಎಫ್.ಸಿ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಬಿರ ಉದ್ಘಾಟಿಸಿದ ಸಿದ್ದರಾಮೇಶ್ವರ, ‘ದಾನಮಾಡಲು ಕೆಲವೇ ಅವಕಾಶಗಳಿವೆ. ಅದರಲ್ಲಿ ರಕ್ತದಾನ ಪ್ರಮುಖ ಸ್ಥಾನ ಪಡೆದಿದೆ. ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠವಾದುದು. ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂಬುದು ವೈದ್ಯಕೀಯ ಅಧ್ಯಯನಗಳಿಂದ ಸಾಬೀತಾಗಿದೆ’ ಎಂದು ಹೇಳಿದರು.

‘ನಾವು ದಾನ ಮಾಡಿದ ರಕ್ತ ಯಾರಿಗೆ ಹೋಗುತ್ತೋ ನಮಗೆ ತಿಳಿಯುವುದಿಲ್ಲ, ಆದರೆ, ಅವಶ್ಯಕತೆ ಇರುವವರಿಗೆ ಅದು ತಲುಪಿದಾಗ ಜೀವ ಉಳಿಸಿದ ಸಾರ್ಥಕ ಭಾವ ಬರುತ್ತದೆ. ರಕ್ತದಾನದಲ್ಲಿ ಕರ್ತವ್ಯದ ಜೊತೆಗೆ ತ್ಯಾಗವು ಇದೆ. ಯುವಜನತೆ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಬೇಕಿದೆ. ವಿಜಯನಗರ ಕಾಲೇಜು ಇಂತಹ ಕಾರ್ಯಕ್ರಮ ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಮಾಡುತ್ತಿರುವುದು ಸಂತೋಷದ ವಿಷಯ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಜಿಲ್ಲಾಡಳಿತದ ಸಹಕಾರ ಸದಾ ಇದೆ’ ಎಂದು ತಿಳಿಸಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ‘ಪ್ರತಿವರ್ಷದಂತೆ ಈ ವರ್ಷವೂ ರಕ್ತದಾನ ಶಿಬಿರವನ್ನು ಕಾಲೇಜಿನಿಂದ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಆಸಕ್ತಿ, ಉತ್ಸಾಹದಿಂದ ಸ್ವಯಂಪ್ರೇರಿತವಾಗಿ ಭಾಗವಹಿಸುತ್ತಿದ್ದಾರೆ. ರಕ್ತದಾನದ ಮಹತ್ವ ವಿದ್ಯಾರ್ಥಿಗಳು ಅರಿತುಕೊಂಡಿರುವುದು ಒಳ್ಳೆಯ ಬೆಳವಣಿಗೆ’ ಎಂದು ಹೇಳಿದರು.

ಪ್ರಾಧ್ಯಾಪಕ ಎಚ್.ಎಂ.ಚಂದ್ರಶೇಖರ ಶಾಸ್ತ್ರಿ ಅವರು 103ನೇ ಬಾರಿಗೆ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಮಹೇಶ್ವರ ಸ್ವಾಮಿ, ಪ್ರಾಂಶುಪಾಲ ವಿ.ಎಸ್‌. ಪ್ರಭಯ್ಯ, ರೆಡ್ ಕ್ರಾಸ್ ಸಂಸ್ಥೆಯ ಶ್ರೀನಿವಾಸ, ಅನ್ನಪೂರ್ಣ ಸದಾಶಿವ, ರೇಖಾ ಪ್ರಕಾಶ್, ಎಚ್‌ಡಿಎಫ್‌ಸಿ ಬ್ಯಾಂಕಿನ ವ್ಯವಸ್ಥಾಪಕ ವಿನಯ್ ಬಳವಳ್ಳಿ, ಸರ್ಕಾರಿ ಆಸ್ಪತ್ರೆಯ ಡಾ.ಸೋಮಶೇಖರ್, ಪಿಎಲ್‌ಡಿ ಬ್ಯಾಂಕಿನ ಗವಿಸಿದ್ದೇಶ್ವರ, ದಾದಾಪೀರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು